Advertisement

ಅವಿಸ್ಮರಣೀಯ ಕಲಾಯುಗ್ಮ

03:45 AM Feb 10, 2017 | |

ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಕಲಾಯುಗ್ಮ ಎಂಬ ಶೀರ್ಷಿಕೆಯಿಂದ ವಿಜೃಂಭಿಸಿದ ಅವಳಿ ಕಲಾವಿದರ ಕಲಾಸಮಾವೇಶವು ಒಂದು ಅಭೂತಪೂರ್ವ ಕಲಾಕಾರ್ಯಕ್ರಮವಾಗಿ ಮೂಡಿಬಂದಿತು. ಸುರತ್ಕಲ್ಲಿನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿ| ಚಂದ್ರಶೇಖರ ನಾವಡರ ನವ್ಯ ಕಲ್ಪನೆಯ ಈ ವಿಭಿನ್ನ ಕಲಾಪ್ರಯೋಗವು ಕಲಾರಸಿಕರಿಗೆ ರಸದೌತಣವನ್ನು ನೀಡಿತು. ಅಂದು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಅವಳಿ ಕಲಾವಿದರು ಗಾಯನ, ವಾದನ ಹಾಗೂ ನರ್ತನ ಕಲಾಪ್ರಕಾರಗಳಲ್ಲಿ ರಂಜಿಸಿ ಜನಮನ್ನಣೆಯನ್ನು ಪಡೆದರು. ದೇಶದಲ್ಲೇ ಪ್ರಥಮವೇ ಎನ್ನಬಹುದಾದ ಕಲಾಯುಗ್ಮವು ಕಲಾಪ್ರಪಂಚಕ್ಕೆ ಒಂದು ಸವಾಲಾಗಿ ಹೊಸತನದ ಹೊಳಹುಗಳನ್ನು ಬೀರಿ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಕೀರ್ತಿಗೆ ಮೆರುಗನ್ನು ನೀಡಿತು. 

Advertisement

ಈ ಕಲಾಯುಗ್ಮವು ಎರಡೂವರೆ ವರ್ಷ ಪ್ರಾಯದ ಆರುಷಿ ಹಾಗೂ ಆಯುಷಿಯೆಂಬ ಪುಟ್ಟ ಅವಳಿ ಪುಟಾಣಿಗಳಿಂದ ಆರಂಭವಾಯಿತು. ಲಯಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ನಗುಮೊಗದಿಂದ ವೇದಿಕೆಯನ್ನು ಪ್ರವೇಶಿಸಿದ ಪುಟಾಣಿಗಳು ಜನರನ್ನು ಕಲೆಯ ಮಡಿಲಲ್ಲಿ ಸ್ಥಾಪಿಸಲು ನೆರವಾದರು. ಮುಂದೆ ವರ್ಣ, ವರ್ಷ ಅವರ ಯಕ್ಷಗಾನ ಪ್ರಸ್ತುತಿಯಲ್ಲಿ ಗಣಪತಿಯ ಪ್ರಾರ್ಥನೆಯ ಅರ್ಥವತ್ತಾಗಿ ಮೂಡಿಬಂದಿತು. 

ತದನಂತರ ನಾಟ್ಯಾರಾಧನ ಸಂಸ್ಥೆಯ ನಿರ್ದೇಶಕಿ ಸುಮಂಗಲಾ ರತ್ನಾಕರ್‌ ಅವರ ಶಿಷ್ಯೆಯರಾದ ಅನು ಹಾಗೂ ಭವ ಅವರ ಭರತನಾಟ್ಯ ಪ್ರಸ್ತುತಿ. ಗುರುಗಳೇ ರಚಿಸಿದ ಅಮೃತವರ್ಷಿಣಿ ರಾಗ, ಆದಿತಾಳದ ಪುಷ್ಪಾಂಜಲಿ ಹಾಗೂ ಕದ್ರಿ ಮಂಜುನಾಥ ಸ್ವಾಮಿ ದೇವರ ಕುರಿತಾದ ಕೃತಿಗೆ ಅಭಿನಯಿಸಿದರು. ಮುಂದೆ ರಾಗಮಾಲಿಕೆ ತಾಳಮಾಲಿಕೆಯ ತೋಡೆಯಂ ಮಂಗಲ ನೃತ್ಯವನ್ನು ವಿದ್ವತೂ³ರ್ಣವಾಗಿ ಪ್ರದರ್ಶಿಸಿದರು. ಮುಂದೆ ಭರತನಾಟ್ಯವನ್ನು ಪ್ರಸ್ತುತಪಡಿಸಿದ ಅನನ್ಯಾ ಹಾಗೂ ಅಪೂರ್ವಾ ಗಾನನೃತ್ಯ ಅಕಾಡೆಮಿ ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರು. ತಮ್ಮ ಕಾರ್ಯಕ್ರಮವನ್ನು ಗಣಪತಿ ಕವಿತ್ವದೊಂದಿಗೆ ಆರಂಭಿಸಿದರು. ಅನಂತರ ರಾಗಮಾಲಿಕೆ, ಆದಿತಾಳದ ಶಿವಪದಂ ಎಂಬ ನೃತ್ಯದಲ್ಲಿ ಶಿವನಿಗೆ ಸಂಬಂಧಿಸಿದ ನಾನಾ ಭಂಗಿಗಳನ್ನು ಸಮರ್ಪಕವಾಗಿ ಸಮರ್ಪಿಸಿದರು. ಮುಂದೆ ಜಂಜೂಟಿ ರಾಗ, ಆದಿತಾಳದ ವಿಷಮ ಕಾರ ಕಣ್ಣನ್‌ ಎಂಬ ವಿಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶಿಸಿದರು. ಮುಂದಿನ ನೃತ್ಯ ಕಲಾವಿದರು ಬೆಂಗಳೂರಿನ ಖ್ಯಾತ ನೃತ್ಯ ಗುರು ಬಿ. ಭಾನುಮತಿಯವರ ಶಿಷ್ಯೆಯರಾದ ಅರ್ಚನಾ ಹಾಗೂ ಚೇತನಾ. ಮಿಶ್ರಛಾಪು ತಾಳ, ಗೌಳರಾಗದ ಶ್ರೀ ಮಹಾಗಣಪತಿಯೆಂಬ ಮುತ್ತುಸ್ವಾಮಿ ದೀಕ್ಷಿತರ ಕೃತಿಗೆ ನರ್ತಿಸಿ ಅನಂತರ ಆದಿತಾಳದ ರಾಗಮಾಲಿಕೆಯ ಅಣ್ಣಾಮಚಾರ್ಯರು ರಚಿಸಿದ ಪದಂನ್ನು ಸುಂದರವಾಗಿ ನರ್ತಿಸಿದರು. ಮುಂದೆ ಅಭೋಗಿ ರಾಗ, ಆದಿತಾಳದಲ್ಲಿ ಸಂಯೋಜಿಸಲಾದ ಮುತ್ತಯ್ಯ ಭಾಗವತರ ಕಾಳೀಯೆಂಬ ಕೃತಿಗೆ ಮಹಿಷಾಸುರ ಮರ್ದಿನಿಯ ಕಥೆಯನ್ನು ನಿರೂಪಿಸಿ ಜನಮನ್ನಣೆಯನ್ನು ಪಡೆದರು.

    ಮುಂದೆ ಅಕ್ಷತಾ ಹಾಗೂ ಅರ್ಚನಾ ಮಂಗಳೂರು ಕೂಚಿಪುಡಿಯ ಒಂದು ವಿಶೇಷ ಭಾಗವಾದ ತರಂಗ ಎಂಬ ನೃತ್ಯವನ್ನು ಪ್ರದರ್ಶಿಸಿದರು. ಕೊನೆಯ ನೃತ್ಯ ಪ್ರಸ್ತುತಿ ಉಡುಪಿಯ ನೃತ್ಯ ನಿಕೇತನ ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀ ಗುರುರಾಜ್‌ ಅವರ ಶಿಷ್ಯೆಯರಾದ ಸುಪ್ರಿಯಾ ಹಾಗೂ ಸುಪ್ರೀತಾ ಅವರ ಭರತನಾಟ್ಯ. ಇವರು ಮೊದಲಿಗೆ ಖಂಡಛಾಪು ತಾಳದ ರಾಗಮಾಲಿಕೆಯ ನರಸಿಂಹ ಕೌತುವಂ ಹಾಗೂ ರತಿಪತಿಪ್ರಿಯ ರಾಗ, ಆದಿತಾಳ ತಿಲ್ಲಾನ ಪ್ರದರ್ಶಿಸಿದರು. 

ಗಾಯನ ಹಾಗೂ ವಾದನದಲ್ಲಿ ರಂಜಿಸಿದ ಅವಳಿ ಕಲಾವಿದರು ಕೂಡ ಜನರನ್ನು ಮಂತ್ರಮುಗ್ಧರನ್ನಾಗಿಸಿದರು. ಹಾಡುಗಾರಿಕೆಯಲ್ಲಿ ಕಟೀಲಿನ ದೀಕ್ಷಾ ಹಾಗೂ ದಿಶಾ ಅವರ ಶಾಸ್ತ್ರೀಯ ಗಾಯನವು ಕಲಾರಸಿಕರ ಮನಸ್ಸನ್ನು ಸೆರೆಹಿಡಿಯಿತು. ಮುಂದೆ ಮಂಗಳೂರು ಸಹೋದರಿಯರೆಂದೇ ಖ್ಯಾತಿ ಗಳಿಸಿದ ವಿದುಷಿಯರಾದ ಶೀಲಾ ಹಾಗೂ ಶೈಲಾ ಅವರ ಸಂಗೀತಪ್ರಸ್ತುತಿ ಜನರಿಗೆ ಮುದ ನೀಡಿತು.

Advertisement

ವಾದನದಲ್ಲಿ ರಂಜಿಸಿದವರು ಉಡುಪಿಯ ಅದಿತಿ ಹಾಗೂ ಅರುಂಧತಿ. ಅವರ ವಯಲಿನ್‌ ವಾದನವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಮುಂದೆ ಮಡಿಕೇರಿಯ ಹೇರಂಭ ಹಾಗೂ ಹೇಮಂತ ಅವಳಿ ಸಹೋದರರ ಕೊಳಲು ವಾದನವು ವಿದ್ವತೂ³ರ್ಣವಾಗಿ ಮೂಡಿಬಂದಿತು. ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಆಯೋಜಿಸಿದ ಒಟ್ಟು 11 ಅವಳಿ ಕಲಾವಿದರ ಕಲಾಸಿರಿವಂತಿಕೆಯು ಮಂಗಳೂರಿನ ಪುರಭವನದಲ್ಲಿ ಒಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿ ಮೂಡಿಬಂದು ಅವಿಸ್ಮರಣೀಯವೆನಿಸಿತು.

ಗಾಯನ – ವಾದನದಲ್ಲಿ ಹಿಮ್ಮೇಳ ಕಲಾವಿದರಾಗಿ ವಯಲಿನ್‌ನಲ್ಲಿ ಶ್ರೀಧರ ಆಚಾರ್ಯ ಪಾಡಿಗಾರ್‌, ಮೃದಂಗದಲ್ಲಿ ಪಯ್ಯನೂರು ರಾಜನ್‌ ಹಾಗೂ ಸುನಾದಕೃಷ್ಣ, ಕೊಳಲು ಹಾಗೂ ಕೀಬೋರ್ಡಿನಲ್ಲಿ ಮುರಳೀಧರ ಉಡುಪಿ ಮತ್ತು ಧೀರಜ್‌ ಡಿ., ಖಂಜೀರದಲ್ಲಿ ಮಾ| ಸುಮುಖ ಕಾರಂತ, ತಬಲದಲ್ಲಿ ಶ್ರೀಕಾಂತ ನಾಯಕ್‌ ಸಹಕರಿಸಿದರು. 

ಈ ಎಲ್ಲ ಕಾರ್ಯಕ್ರಮಗಳನ್ನು ನಿರೂಪಕರಾಗಿ ಮುನ್ನಡೆಸಿದ್ದು ಕೂಡ ಅವಳಿಗಳೇ ಎಂಬುದು ವಿಶೇಷ. ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರಾದ ಹರ್ಷಿತಾ ಹಾಗೂ ಹಷ್ಮಿತಾ ತಮ್ಮ ನಿರರ್ಗಳ ನುಡಿಗಳಿಂದ ಜನರ ಮನಸ್ಸನ್ನು ಗೆದ್ದರು.

ರಾಜೇಶ್ವರಿ

Advertisement

Udayavani is now on Telegram. Click here to join our channel and stay updated with the latest news.

Next