Advertisement

ಬಾಲ್ಯದಿಂದಲೂ ನನ್ನ ಜೀವನದ ಆದರ್ಶ ವ್ಯಕ್ತಿ ಅಪ್ಪ…

04:48 PM Jun 16, 2018 | Sharanya Alva |

ಬಾಲ್ಯದಿಂದಲೂ ಜೀವನದಲ್ಲಿ ಆದರ್ಶ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಸದಾ ನನ್ನ ಬಳಿಯಿರುವ ಉತ್ತರ ಅಪ್ಪ! ಅಪ್ಪನ ವ್ಯಕ್ತಿತ್ವವೇ ಅಂತಹದ್ದು. ಅವರ ಹಸನ್ಮುಖ, ಒಳ್ಳೆಯ ಮಾತುಗಳು, ಸದಾ ಹೊಸತನ್ನು ಕಲಿಯುವ ಆಸಕ್ತಿ, ಯಾವಾಗಲೂ ಖುಷಿಯಾಗಿರುವುದು, ಜೊತೆಗಿರುವವರನ್ನೂ ಖುಷಿಯಾಗಿರಿಸುವುದು, ಯಾರ ಮೇಲೂ ಸಿಟ್ಟು ಮಾಡಿಕೊಳ್ಳದಿರುವುದು, ಯಾವ ಕಷ್ಟ-ದುಃಖದಲ್ಲೂ ಎದೆಗುಂದದೆ ಸ್ಥಿತಪ್ರಜ್ಞರಾಗಿರುವುದು – ಅಪ್ಪ ಇಷ್ಟವಾಗಲು ಕಾರಣ.

Advertisement

ಶಾಲಾ ದಿನಗಳಿಂದಲೇ ನನ್ನ ವ್ಯಕ್ತಿತ್ವವನ್ನು ನೀರೆರೆದು ಪೋಷಿಸಿದ್ದು ಅಪ್ಪ. ಪಠ್ಯದ ಜೊತೆ ಎಲ್ಲ ಸಹ ಪಠ್ಯ ಚಟವಟಿಕೆಗಳಲ್ಲಿ ಪಾಲ್ಗೊಳ್ಳಲು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಪ್ರಗತಿ ಪತ್ರ (ಪ್ರೋಗ್ರೆಸ್ ಕಾರ್ಡ್) ಸಹಿ ಮಾಡುವಾಗ, ತರಗತಿಯಲ್ಲಿ ನಾನು ಎಷ್ಟನೇ rank ಅಂತ ಅಪ್ಪ ನೋಡುತ್ತಲೇ ಇರಲಿಲ್ಲ. ಪ್ರತಿ ವಿಷಯದಲ್ಲಿ ಕಳೆದ ಸಲಕ್ಕಿಂತ ಈ ಸಲ ಎಷ್ಟು ಜಾಸ್ತಿ/ಕಮ್ಮಿ ಅಂಕ ಬಂದಿವೆ ಅಂತ ಹೋಲಿಸುತ್ತಿದ್ದರೇ ವಿನಃ ಬೇರಾರದೇ ಅಂಕಗಳನ್ನು ಕೇಳುತ್ತಿರಲಿಲ್ಲ. ನಾವು ನಮ್ಮೊಂದಿಗೆ ಸ್ಪರ್ಧಿಸಬೇಕು, ಮುಂಚೆಗಿಂತ ಉತ್ತಮರಾಗಬೇಕು ಎಂದೇ ಹೇಳುತ್ತಿದ್ದರು.

ಅಪ್ಪ ನಮ್ಮಲ್ಲಿ ಮಹತ್ವಾಕಾಂಕ್ಷೆಯ ಬೀಜವನ್ನು ಚಿಕ್ಕಂದಿನಲ್ಲೇ ಬಿತ್ತಿದ್ದರು. ಅವರು ಜೀವನದಲ್ಲಿ ಪಟ್ಟ ಕಷ್ಟಗಳು, ಹಂತ ಹಂತವಾಗಿ ಬೆಳೆದ ರೀತಿಯನ್ನು ಹೇಳುತ್ತಾ, ನಮಗಿರುವ ಸೌಲಭ್ಯ ಮಾರ್ಗದರ್ಶನಗಳಿಂದಾಗಿ, ನಾವು ದೊಡ್ಡ ಕನಸು ಕಂಡು, ಅದರ ಬೆನ್ನತ್ತಿ ಅಂದುಕೊಂಡಿದ್ದನ್ನು ಸಾಧಿಸಬೇಕು ಅಂತ ಹೇಳುತ್ತಿದ್ದರು.

ಹಿಮಾಲಯದ ಕನಸು ಕಂಡರೆ, ಕೊನೆ ಪಕ್ಷ ಗುಡ್ಡವಾದರೂ ಹತ್ತಬಹುದು ಎನ್ನುತ್ತಿದ್ದರು. ದಿನವೂ ತಪ್ಪದೆ ಬೆಳಿಗ್ಗೆ ಬೇಗ ಏಳುವುದು, ಯೋಗಾಭ್ಯಾಸ ಮಾಡುವುದು, ಓದುವ ಹವ್ಯಾಸ, ಸಾಹಿತ್ಯ ಕಲೆ ಸಂಸ್ಕೃತಿಯ ಮೇಲಿನ ಪ್ರೀತಿ, ಕನ್ನಡ ಪತ್ರಿಕೆಯ ಪತ್ರಕರ್ತರಾಗಿ ಆಂಗ್ಲ ಭಾಷೆಯಲ್ಲೂ ಅಷ್ಟೇ ಉತ್ತಮ ಪರಿಣತಿ – ಹೀಗೆ ಸ್ವತಃ ತಮ್ಮ ವ್ಯಕ್ತಿತ್ವ-ಜೀವನ ಶೈಲಿಯಿಂದಲೇ ಅಪ್ಪ ನಮಗೆ ಆದರ್ಶಪ್ರಾಯರು.

ಹತ್ತನೇ ತರಗತಿ ಮುಗಿಸಿದಾಗ ಮುಂದೆ ವಿಜ್ಞಾನ ವಿಭಾಗ ಆರಿಸಿಕೊಳ್ಳಲು, ಮುಂದೆ ದೂರದ ಬೆಂಗಳೂರಿನಲ್ಲಿ ತಾಂತ್ರಿಕ ಪದವಿ ಶಿಕ್ಷಣಕ್ಕೆ ಉತ್ತಮ ಅವಕಾಶ ಬಂದಾಗ ಅದನ್ನು ಆಯ್ದುಕೊಳ್ಳಲು ನನಗೆ ಸಂಪೂರ್ಣ ಧೈರ್ಯ ತುಂಬಿದ್ದು ಅಪ್ಪನೇ! ನನಗಾದರೋ ಹಾಸ್ಟೆಲ್ ಎಂಬ ಹೆಸರು ಕೇಳಿದರೂ ಇಷ್ಟವಾಗುತ್ತಿರಲಿಲ್ಲ. ಅಮ್ಮನಿಗೂ ನನ್ನನ್ನು ದೂರದೂರಿಗೆ ಕಳುಹಿಸಲು ಸಹಜವಾಗಿಯೇ ಸ್ವಲ್ಪ ಹಿಂಜರಿಕೆ ಇದ್ದದ್ದು ನಿಜ.

Advertisement

ಆಗ ಅಪ್ಪನೇ ನನ್ನ ಬೆನ್ನುಲುಬಾಗಿ ನಿಂತು, ನನಗೂ ಅಮ್ಮನಿಗೂ ಮನವರಿಕೆ ಮಾಡಿದ್ದು. ಈಗ ಕಷ್ಟ ಪಟ್ಟರೆ ಮುಂದೆ ಖಂಡಿತ ಎಲ್ಲ ಇಷ್ಟಗಳೂ ದಕ್ಕುತ್ತವೆ ಅಂತ ಪುಸಲಾಯಿಸಿದ್ದು. ಬಹುಶಃ ಆಗ ಅಪ್ಪ ಮಾರ್ಗದರ್ಶಕರಾಗಿ, ಅಚಲ ನಿರ್ಧಾರ ತಾಳದಿದ್ದಲ್ಲಿ ನಾನು ಇವತ್ತು ಪ್ರತಿಷ್ಠಿತ ಸಾಫ್ಟ್ ವೇರ್‌ ಕಂಪೆನಿಯಲ್ಲಿ ಉತ್ತಮ ಹುದ್ದೆಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ!

ಹೆಣ್ಣು ಮಕ್ಕಳಿಗೆ ಯಾವಾಗಲೂ ಆರ್ಥಿಕ ಸ್ವಾತಂತ್ರ್ಯ ಇರಬೇಕು, ನಿಮ್ಮ ವಿದ್ಯೆ-ಬುದ್ಧಿಯೇ ನಿಮ್ಮ ಆಸ್ತಿಯಾಗಬೇಕು ಎನ್ನುತ್ತಿದ್ದ ಅಪ್ಪನಿಗೆ, ಈಗ ನನಗೆ ಏನೇ ಅವಾರ್ಡ್, ಪ್ರಮೋಷನ್ ಬಂದಾಗ, ಅದನ್ನು ಹೇಳಿ ಅವರಿಗಾಗುವ ಖುಷಿಯನ್ನು ನೋಡುವುದೇ ನನ್ನ ನಿಜವಾದ ಸಂತೋಷ! ಲವ್ ಯೂ ಅಪ್ಪಾ..

*ದಿವ್ಯಾ ಕಾಮತ್

Advertisement

Udayavani is now on Telegram. Click here to join our channel and stay updated with the latest news.

Next