ಶಿರ್ವ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳ್ಳೆ ಗ್ರಾ.ಪಂ.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಮ್ಮ ಬೆಳ್ಳೆ ಸ್ವಚ್ಛ ಬೆಳ್ಳೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ವಿನೂತನ ಅಭಿಯಾನ ಆರಂಭಿಸಿದೆ.
ವಿದ್ಯಾರ್ಥಿಗಳಿಗೆ ಎಳವೆಯಿಂದಲೇ ಸ್ವತ್ಛತೆಯ ಹೊಣೆಗರಿಕೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಬೆಳ್ಳೆ.ಗ್ರಾ.ಪಂ. ಆಡಳಿತ, ಮೂಡುಬೆಳ್ಳೆಯ ಸಂತ ಲಾರೆನ್ಸ್ ಪ.ಪೂ. ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ಗ್ರಾಮದ ಕಸ,ತ್ಯಾಜ್ಯವನ್ನು ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ನೂತನ ಯೋಜನೆಗೆ ಚಾಲನೆ ನೀಡಿದೆ.
ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಸಿಬಂದಿ ತಮ್ಮ ಮನೆಯ ನಿರುಪಯುಕ್ತ ಕಸ ತ್ಯಾಜ್ಯವನ್ನು ವಾರಕ್ಕೆ ಒಂದು ಬಾರಿ ಸಂಗ್ರಹಿಸಿ ತಂದು ಶಿಕ್ಷಣ ಸಂಸ್ಥೆಯ ಮೂಲಕ ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕಕ್ಕೆ ಹಸ್ತಾಂತರಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿ ವಾಹನದೊಂದಿಗೆ ಶಾಲೆಗೆ ತೆರಳಿ ವಿದ್ಯಾರ್ಥಿಗಳು ಸಂಗ್ರಹಿಸಿ ತಂದ ಕಸವನ್ನು ವಿಲೇವಾರಿ ಮಾಡಲಿದೆ.
ಇದನ್ನೂ ಓದಿ:- ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಪ್ರಭಾರಿ ಆಹಾರ ಸಂರಕ್ಷಣಾಧಿಕಾರಿ
ಪ್ರಮಾಣಪತ್ರ,ಪ್ರೋತ್ಸಾಹ ಧನ ವಿತರಣೆ
ಎಲ್ಲಾ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಕಸ ,ತ್ಯಾಜ್ಯದ ಸಮಸ್ಯೆ ಸಾಮಾನ್ಯವಾಗಿದ್ದು, ಈ ಸಂಬಂಧ ಜನಜಾಗೃತಿಗಾಗಿ ಗ್ರಾ.ಪಂ. ವತಿಯಿಂದ ವಿದ್ಯಾರ್ಥಿಗಳಿಗೆ ಕಸ ನಿರ್ಮೂಲನೆಯ ಜಾಗೃತಿ ಮೂಡಿಸಲಾಗುತ್ತಿದೆ. ಕಸ,ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಸಂಗ್ರಹಿಸಿ ನಿರಂತರವಾಗಿ ಶಾಲೆಗೆ ತಂದು ಘಟಕಕ್ಕೆ ನೀಡುವ ವಿದ್ಯಾರ್ಥಿಗಳಿಗೆ ಗ್ರಾ. ಪಂ. ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರೋತ್ಸಾಹ ಧನ ಮತ್ತು ಪ್ರಮಾಣಪತ್ರ ವಿತರಣೆ ನೀಡಲಾಗುವುದು ಎಂದು ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ ತಿಳಿಸಿದ್ದಾರೆ.
ಸ್ವತ್ಛತೆಯ ಹೊಣೆಗಾರಿಕೆ
ಬೆಳ್ಳೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವು ಸುಸಜ್ಜಿತ ಸ್ವಂತ ಕಟ್ಟಡ ಹೊಂದಿದ್ದು,ತ್ಯಾಜ್ಯವನ್ನು ಸಂಪನ್ಮೂಲವಾಗಿಸಲು ಕ್ರಿಯಾಶೀಲವಾಗಿ ಕಾರ್ಯಾಚರಿಸುತ್ತಿದೆ.ವಿದ್ಯಾರ್ಥಿಗಳ ಮೂಲಕ ನಮ್ಮ ಕಸ ನಾವೇ ವಿಲೇವಾರಿ ಮಾಡಿ ಸ್ವತ್ಛತೆಯ ಹೊಣೆಗಾರಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುತ್ತಿದ್ದು, ಕಸ,ತ್ಯಾಜ್ಯ ಮುಕ್ತ ಗ್ರಾಮ ಮಾಡುವಲ್ಲಿ ಗ್ರಾ.ಪಂ. ನೊಂದಿಗೆ ಗ್ರಾಮಸ್ಥರ ಸಹಕಾರ ಅತೀಅಗತ್ಯ. –
ಸುಧಾಕರ ಪೂಜಾರಿ, ಅಧ್ಯಕ್ಷ ರು, ಬೆಳ್ಳೆ ಗ್ರಾ.ಪಂ.ಬೆಳ್ಳೆ
ಶಿಕ್ಷಣ ಸಂಸ್ಥೆಯು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ನಿರ್ಮಿಸುವಲ್ಲಿ ಪಣತೊಟ್ಟಿದ್ದು, ವಿದ್ಯಾರ್ಥಿಗಳ ಮೂಲಕ ಕಸ ನಿರ್ಮೂಲನೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಜಾಗೃತರಾಗಿ ತಮ್ಮ ಹೆತ್ತವರಿಗೆ ಹೊಣೆಗಾರಿಕೆ ತಿಳಿಸುವ ಮೂಲಕ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿ ನಿಲ್ಲಬೇಕು
. – ಎಡ್ವರ್ಡ್ ಲಾರ್ಸನ್ ಡಿ ಸೋಜಾ, ಪ್ರಭಾರ ಪ್ರಾಂಶುಪಾಲರು, ಸಂತ ಲಾರೆನ್ಸ್ ಪ.ಪೂ. ಕಾಲೇಜು, ಮೂಡುಬೆಳ್ಳೆ.