Advertisement

ಹಿಂಗಾರು ಮಳೆ ಆರ್ಭಟ: ಮತ್ತೊಂದು ಬಲಿ

11:08 PM Oct 26, 2019 | Lakshmi GovindaRaju |

ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿಯಲ್ಲಿ ಹಿಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ರಾಜ್ಯದಲ್ಲಿಯೇ ಅಧಿಕ 24ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ರಾಯಚೂರಿನಲ್ಲಿ ರಾಜ್ಯದಲ್ಲಿಯೇ ಗರಿಷ್ಠ 30 ಡಿ.ಸೆ. ಮತ್ತು ಬೀದರ್‌ನಲ್ಲಿ ಕನಿಷ್ಠ 18.2 ಡಿ.ಸೆ.ತಾಪಮಾನ ದಾಖಲಾಯಿತು.

Advertisement

ಮನೆ ಗೋಡೆ ಕುಸಿದು ವೃದ್ಧ ಸಾವು: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಲಕ್ಷ್ಮಣ (70) ಎಂಬುವರು ಮೃತಪಟ್ಟಿದ್ದಾರೆ. ಇವರು ಮನೆಯ ಹಾಲ್‌ನಲ್ಲಿ ಮಲಗಿದ್ದರು. ಮಗಳು ಚನ್ನಮ್ಮ, ಅಳಿಯ ನಾಗರಾಜ್‌ ಕೂಡ ಮಲಗಿದ್ದರು. ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಲಕ್ಷ್ಮಣ ಅವರ ಮೇಲೆ ಮನೆಯ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ ಧರೆಗುರುಳಿದ ಮರ: ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಅಲ್ಲಲ್ಲಿ ಮರಗಳು ಉರುಳಿವೆ. ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಲು ಸಾಧ್ಯವಾಗದಂತಾಗಿದೆ. ಘಾಟ್‌ ರಸ್ತೆಯ ಒಂದು ಬದಿಯಲ್ಲಿ ಮರಗಳು ಬಿದ್ದಿದ್ದು, ವಾಹನಗಳು ಬಿದ್ದ ಮರವನ್ನು ಬಳಸಿಕೊಂಡು ಮತ್ತೊಂದು ಕಡೆಯಲ್ಲಿ ಸಂಚರಿಸುತ್ತಿವೆ. ಮಳೆ ಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಝರಿಗಳು ಮೈದುಂಬಿದ್ದು, ಧುಮ್ಮಿಕ್ಕಿ ಹರಿಯುತ್ತಿವೆ.

ಕೊಡಚಾದ್ರಿಯಲ್ಲಿ ಗುಡ್ಡ ಕುಸಿತ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ ಒಂದೇ ದಿನ 122 ಮಿ.ಮೀ. ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ಕೊಡಚಾದ್ರಿ ಗಿರಿಗೆ ಸಾಗುವ ರಸ್ತೆ ಪಕ್ಕದ ಗುಡ್ಡ ಕುಸಿದು, ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ನಂತರ, ಮಣ್ಣನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕೋಸ್ಟ್‌ಗಾರ್ಡ್‌ನಿಂದ ಮೀನುಗಾರರ ರಕ್ಷಣೆ
ಸುರತ್ಕಲ್‌: ಪ್ರಕ್ಷುಬ್ಧ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಹಲವು ಬೋಟ್‌ಗಳು ಮತ್ತು ಮೀನುಗಾರರನ್ನು ಕೋಸ್ಟ್‌ಗಾರ್ಡ್‌ ಸಿಬ್ಬಂದಿಗಳು ಕಳೆದೆರಡು ದಿನಗಳಲ್ಲಿ ರಕ್ಷಣೆ ಮಾಡಿದ್ದಾರೆ. ಪ್ರಕ್ಷುಬ್ಧ ಕಡಲಿನಲ್ಲಿ ಮೀನುಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಯಿತು. ರಾಜ್‌ ಕಿರಣ್‌ ದೋಣಿಗೆ ಹಾನಿಯಾಗಿದ್ದು, ಕೋಸ್ಟ್‌ಗಾರ್ಡ್‌ನ ಅಮರ್ತ್ಯ ನೌಕೆಯು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿ, ಮೀನುಗಾರರನ್ನು ರಕ್ಷಿಸಿ, ಕಾರವಾರ ಬಂದರಿಗೆ ಮುಟ್ಟಿಸಿದೆ. ದೋಣಿಯಲ್ಲಿದ್ದ ಒಂಬತ್ತು ಮೀನುಗಾರರಿಗೆ ಪ್ರಥಮ ಚಿಕಿತ್ಸೆ, ಆಹಾರ ನೀಡಲಾಗಿದೆ.

Advertisement

ಕಡಲು ಬಿರುಸಾಗಿರುವ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್‌ನ ಸಮುದ್ರ ಪ್ರಹರಿ, ಅಮಲ್‌, ಅಪೂರ್ವ, ರಾಜ್‌ದೂತ್‌ ನೌಕೆಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದ 500ಕ್ಕೂ ಅಧಿ ಕ ಮೀನುಗಾರಿಕಾ ದೋಣಿಗಳು ಕಾರವಾರದಲ್ಲಿ ಲಂಗರು ಹಾಕಿದ್ದರೆ, ಮಂಗಳೂರು ಮತ್ತು ಉಡುಪಿಯಲ್ಲಿ 120ಕ್ಕೂ ಅಧಿ ಕ ದೋಣಿಗಳು ಲಂಗರು ಹಾಕಿವೆ. ಮೀನುಗಾರಿಕಾ ದೋಣಿಗಳಿಗೆ ಎಚ್ಚರಿಕೆ ನೀಡಿ, ಸುರಕ್ಷಿತ ಸ್ಥಳದಲ್ಲಿ ಲಂಗರು ಹಾಕುವಂತೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next