ಜೇವರ್ಗಿ: ತಾಲೂಕಿನ ಸುಕ್ಷೇತ್ರ ನಾಥ ಸಂಪ್ರದಾಯದ ಗಂವ್ಹಾರ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಮಠ 10 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣವಾಗುತ್ತಿದ್ದು, ಏ.15ರಂದು ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘ ವೇಶ್ವರ ಭಾರತೀ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಾಥ ಸಂಪ್ರದಾಯದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠ ಸಾವಿರಾರು ವರ್ಷಗಳ ಪರಂಪರೆ ಹೊಂದಿದೆ. ಮಠದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಸೋಪಾನನಾಥ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಇಲ್ಲಿಯವರೆಗೆ ಶಿವಸತ್ರ, ಕೋಟಿಬಿಲ್ವ ದಿವ್ಯ ಸಮಾಗಮ ಹೀಗೆ ನೂರಾರು ಧಾರ್ಮಿಕ ಹಾಗೂ ಸಾಮಾಜಿಕ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಮಠವು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳೆದಿದೆ. ಪೂಜ್ಯರ ಹಲವಾರು ವರ್ಷಗಳ ಕನಸಿನಂತೆ ಸಾವಿರಾರು ವರ್ಷಗಳವರೆಗೂ ಸುಭದ್ರವಾಗಿರುವಂತ, ಸಂಪೂರ್ಣ ಶಿಲಾಮಯವನ್ನೊಳಗೊಂಡ ಕಾರ್ಕಳ ಕಲ್ಲಿನಿಂದ ಶ್ರೀಮಠ ಕಟ್ಟಲು ಸಂಕಲ್ಪಿಸಲಾಗಿದೆ.
ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪಾರಂಪರಿಕ ಶಾಸ್ತ್ರೋಕ್ತ ವಾಸ್ತು ಶಿಲ್ಪ ಪರಂಪರೆ ಒಳಗೊಂಡು ಶ್ರೀಮಠವು ನಿರ್ಮಾಣವಾಗಲಿದೆ. ಗಂವ್ಹಾರ ಮಠ ಸಂಪೂರ್ಣ ಕಾರ್ಕಳ ಶಿಲೆಯಿಂದ ನಿರ್ಮಾಣವಾಗುತ್ತಿರುವುದು ವಿಶೇಷ.
ವಾಸ್ತುಶಿಲ್ಪ ತಜ್ಞರಾದ ಕುಕ್ಕೆ ಸುಬೃಹ್ಮಣ್ಯದ ಡಾ| ಮಹೇಶ ಮುನಿಯಂಗಳ ಅವರು 10 ಕೋಟಿ ರೂ. ವೆಚ್ಚದ ಮಠದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವರು. ಏ.15ರಂದು ಬೆಳಗ್ಗೆ 9ಗಂಟೆಗೆ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳಿಂದ ಚಾಲನೆ ಸಿಗಲಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಸೋಪಾನನಾಥ ಮಹಾ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ, ಯಲಗೋಡದ ಶ್ರೀ ಗುರುಲಿಂಗ ಮಹಾ ಸ್ವಾಮೀಜಿ, ಶರಣಬಸವೇಶ್ವರರ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಶಾಸಕ ಡಾ| ಅಜಯ ಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ, ಶಾಸಕ ಶರಣಬಸಪ್ಪ ದರ್ಶನಾಪುರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ ನಮೋಶಿ, ಮಾಜಿ ಸದಸ್ಯ ಚನ್ನಾರಡ್ಡಿ ತುನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಕುಕ್ಕೆಸುಭ್ರಮಣ್ಯ ವಾಸ್ತುಶಿಲ್ಪ ತಜ್ಞ ಮಹೇಶ ಮುನಿಯಂಗಳ, ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುನಾಥರಡ್ಡಿ ಪಾಟೀಲ ಹಳ್ಳಿಸಗರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಶ್ರೀ ಮಠದ ಪಾಂಡುರಂಗ ಮಹಾರಾಜರು ತಿಳಿಸಿದ್ದಾರೆ.
ಶ್ರೀಮಠದ ಕಾರ್ಯದರ್ಶಿ ಚಂದಪ್ಪ ತಾಯಪ್ಪಗೋಳ, ಶ್ರೀಪಾದಭಟ್ಟ ಜೋಶಿ, ಚಂದ್ರಶೇಖರ ಬಿರಾದಾರ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಶಂಕ್ರಪ್ಪ ಹುಲಕಲ, ಸಂಜೀವಕುಮಾರ ಜೋಶಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.