Advertisement
ಆದರೆ ಎಂದೂ ಅದನ್ನು ಬದುಕಿಗೆ ಅಳವಡಿಸಿಕೊಳ್ಳುವ ಯೋಚನೆಯನ್ನೇ ಮಾಡಿರಲಿಲ್ಲ.
Related Articles
Advertisement
ನನ್ನ ಸುತ್ತಮುತ್ತಲಿನ ಸಂಗತಿಗಳೆಲ್ಲ ಅರಿವಿಗೆ ಬರತೊಡಗಿತು. ಧೋ ಎಂದು ಸುರಿಯುವ ಮಳೆಯ ಸದ್ದು, ಅಡುಗೆಮನೆಯಲ್ಲಿ ಚಟಪಟಿಸುವ ಒಗ್ಗರಣೆಯ ಪರಿಮಳ, ಹಿತ್ತಿಲಲ್ಲಿ ಅರಳಿದ ಮಲ್ಲಿಗೆಯ ಘಮ, ಮಳೆ ನಿಂತಾಗೊಮ್ಮೆ ಮೋಡ ಸರಿಸಿ ಇಣುಕುವ ಸೂರ್ಯ, ಆಗ ಮಳೆಯಲ್ಲಿ ತೊಯ್ದು ನಡುಕ ಹಿಡಿದಂತೆ ನಿಂತಿರುವ ಮರಗಳ ಮೇಲೆಲ್ಲ ಬಂಗಾರದಂತೆ ಚೆಲ್ಲುವ ಬೆಳಕು, ಎಲ್ಲೆಂದರಲ್ಲಿ ಜಿನುಗುವ ಒರತೆ, ಕಾಡಿನ ಮಧ್ಯ ತಣ್ಣಗೆ ಹರಿಯುವ ತೊರೆ, ಹಚ್ಚ ಹಸುರಿನ ಕಂಬಳಿ ಹೊದ್ದು ಮಲಗಿರುವ ಬೆಟ್ಟಗಳ ಸಾಲು, ಅವುಗಳ ಮೇಲೊಂದು ತೆಳುವಾದ ಮಂಜಿನ ಪರದೆ, ಅಮ್ಮನ ಕೈತೋಟದಲ್ಲಿ ಅರಳಿದ ಬಣ್ಣಬಣ್ಣದ ಹೂಗಳು, ಇನ್ನೆಲ್ಲೋ ಕಾಡಿನಲ್ಲಿ ಸದ್ದಿಲ್ಲದೇ ಅರಳಿದ ಕಾಡುಹೂಗಳು, ದಟ್ಟ ಕಾಡಿನ ನಡುವಿನ ಕಾಲು ಹಾದಿ, ಮಳೆ ನಿಂತರೂ ನಿಲ್ಲದ ಮರದ ಹನಿ ….ಎಲ್ಲವೂ ಖುಷಿ ಕೊಡತೊಡಗಿತು.
ಈಗ ಅವು ಕೇವಲ ಒಂದು ಸಂಗತಿಗಳಾಗಿರಳಿಲ್ಲ, ಬಣ್ಣ ಕಳೆದುಕೊಂಡ ನನ್ನ ಮನಸ್ಸಿಗೆ ಮತ್ತೆ ರಂಗೆರಚಲು ಬಂದ ಕುಂಚಗಳಾಗಿದ್ದವು . ಇವುಗಳನ್ನೆಲ್ಲ ಅನುಭವಿಸುತ್ತಾ ನನ್ನ ಮನಸ್ಸಿಗೆ ಹಿಡಿದ ಮಬ್ಬು ಕಳೆಯುತ್ತಾ ಬಂತು.
ಈಗ ನಾನು ಖುಷಿಯಾಗಿದ್ದೇನೆ. ಎಲ್ಲೋ ಕಲ್ಪನೆಗಳ ನಡುವೆ ಖುಷಿ ಹುಡುಕುವ ಬದಲು ವಾಸ್ತವದಲ್ಲೇ ನೆಮ್ಮದಿಯಿಂದಿದ್ದೇನೆ. ಬಿಡದೇ ಸುರಿಯುವ ಮಳೆಯನ್ನು ತನ್ಮಯತೆಯಿಂದ ನೋಡುತ್ತೇನೆ. ಮಳೆಹನಿಗೆ ಕಾಲು ಚಾಚಿ ಅದೆಷ್ಟೋ ಹೊತ್ತು ಕುಳಿತಿರುತ್ತೇನೆ. ಮೊದಲೆಲ್ಲಾ ಕಿವಿಗೆ ಛಿಚrಟಜಟnಛಿ ತುರುಕಿಕೊಂಡು ಮಲಗುತ್ತಿದ್ದ ನಾನು ಈಗ ಜೀರುಂಡೆಗಳ ಮೊರೆತ, ಮಳೆಯ ಸದ್ದಿನಲ್ಲಿಯೇ ನಿದ್ದೆಗೆ ಜಾರುತ್ತೇನೆ.
ಅಮ್ಮನ ಕೈರುಚಿ ಈಗ ಮನಸ್ಸಿಗೆ ಮತ್ತಷ್ಟು ಹತ್ತಿರವೆನಿಸುತ್ತದೆ. ಟ್ರಂಕಿನಲ್ಲಿ ತುಂಬಿಟ್ಟ ಅಜ್ಜಿಯ ಮದುವೆ ಕಾಲದ ಸೀರೆಯನ್ನು ಮತ್ತೆ ಮತ್ತೆ ಉಟ್ಟು ಖುಷಿ ಪಡುತ್ತೇನೆ. ಅವಳ ಹಳೆಯ ನೆನಪನ್ನೆಲ್ಲ ಮೈಗೆ ಹೊದ್ದಂತೆ ಭಾಸವಾಗುತ್ತದೆ. ಮನಸ್ಸಿಗೆ ತೋಚಿದ ಅಡುಗೆಗಳನ್ನೆಲ್ಲಾ ಮಾಡುತ್ತೇನೆ, ಅದರ ಘಮವನ್ನು ಉಸಿರು ತುಂಬುವಷ್ಟು ಹೀರುತ್ತೇನೆ. ಒಲೆಯ ಮೂಲೆಯಲ್ಲಿ ಮುರುಟೆಯಾಗಿ ಮಲಗಿದ ಬೆಕ್ಕು, ಗೂಡಿನಲ್ಲಿ ಬೆಚ್ಚಗೆ ಕುಳಿತ ನಾಯಿ, ಕೊಟ್ಟಿಗೆಯಲ್ಲಿನ ಮುದ್ದು ಕರು ಎಲ್ಲರನ್ನೂ ಮಾತಾಡಿಸುತ್ತೇನೆ. ಓದಲು ರಾಶಿ ಪುಸ್ತಕಗಳಿವೆ, ಸಮಯವೂ ಇದೆ.
ಹೊಸ ಯೋಚನೆಗಳೆಲ್ಲ ಧೂಳು ಕೊಡವಿಕೊಂಡು ಮೇಲೆದ್ದಿವೆ. ಬರೆಯುತ್ತೇನೆ, ಹಾಡುತ್ತೇನೆ, ಓದುತ್ತೇನೆ, ಕೆಲವೊಮ್ಮೆ ಸುಮ್ಮನೇ ಕುಳಿತುಬಿಡುತ್ತೇನೆ. ಮನಸ್ಸಿಗೆ ಏನಿಷ್ಟವೋ ಅದನ್ನೆಲ್ಲ ಮಾಡುತ್ತೇನೆ.ಹಿಂದೊಮ್ಮೆ ನಾನು ಗಮನಿಸದೆ ಇದ್ದ ಸಂಗತಿಗಳೆಲ್ಲ ಈಗ ನನ್ನ ಬದುಕಿನ ಭಾಗವಾಗಿಬಿಟ್ಟಿದೆ. ಬದುಕು ಚಿಕ್ಕದು… ನಿನ್ನೆ, ನಾಳೆಗಳ ನಡುವೆ ಇಂದು ವ್ಯರ್ಥವಾಗಬಾರದು. ಪ್ರತಿ ಕ್ಷಣವನ್ನೂ ಅನುಭವಿಸಿದರೇನೆ ಬದುಕು ಸಾರ್ಥಕವೆನಿಸುವುದು. ಜವಾಬ್ದಾರಿ, ಸಾಲು ಸಾಲು ಸಮಸ್ಯೆಗಳು ಎಲ್ಲರಿಗೂ ಇರುತ್ತದೆ.ಆದರೆ ಅದೇ ಜೀವನವಲ್ಲ.
ಅವನ್ನೆಲ್ಲ ಕೆಲವು ಸಲ ಬದಿಗಿಟ್ಟು ನಮಗಾಗಿ ಬದುಕಬೇಕು. ಮುಪ್ಪಿನ ಕಾಲದಲ್ಲಿ ನಮ್ಮ ಬದುಕೆಲ್ಲ ವ್ಯರ್ಥವಾಯಿತಲ್ಲ ಎಂಬ ಕೊರಗು ನಮ್ಮನ್ನು ಕಾಡಬಾರದು.ಇರುವಷ್ಟು ದಿನ ಖುಷಿಯಾಗಿರೋಣ.ಬದುಕನ್ನು ಒಮ್ಮೆ ಪ್ರೀತಿಸಿ..ನಮಗದು ತಾನಾಗಿಯೇ ಸುಂದರವೆನಿಸುತ್ತದೆ…!