Advertisement

ತಾರಸಿ ಮೇಲೆ ಸುತ್ತಾಡುತ್ತಿದ್ದ ಕವಿಮನಸ್ಸಿಗೆ ಹೊಳೆದ ಸಾಲೇ ‘ನಿತ್ಯೋತ್ಸವ ತಾಯೇ ನಿತ್ಯೋತ್ಸವ’!

08:19 AM May 04, 2020 | Hari Prasad |

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನವಂಬರ್ ತಿಂಗಳು ಪೂರ್ತಿ ಎಲ್ಲಾ ಭಾನುವಾರಗಳಂದು ‘ತಿಂಗಳ ಹೊಸ ಹಾಡು’ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಕವಿ ನಿಸಾರ್ ಅಹಮದ್ ಅವರ ಕವನಗಳನ್ನು ಪ್ರಸಾರ ಮಾಡಬೇಕೆಂದು ಆಕಾಶವಾಣಿ ನಿರ್ಧರಿಸಿತ್ತು. ಈ ಕುರಿತಾಗಿ ನಿಸಾರ್ ಅವರ ಶಿವಮೊಗ್ಗ ವಿಳಾಸಕ್ಕೆ ಆಕಾಶವಾಣಿಯ ಪತ್ರವೂ ತಲುಪಿತ್ತು.

Advertisement

ಆದರೆ ಆ ಸಂದರ್ಭದಲ್ಲಿ ನಿಸಾರ್ ಅವರು ರಜಾ ಹಾಕಿ ಬೆಂಗಳೂರಿಗೆ ಬಂದಿದ್ದರು. ಹಾಗಾಗಿ ಅವರಿಗೆ ಈ ಪತ್ರ ಸಿಕ್ಕಿರಲಿಲ್ಲ. ಆಗ ಜಯನಗರದಲ್ಲಿದ್ದ ಅವರ ಮನೆಯ ಪಕ್ಕದಲ್ಲಿದ್ದ ಡಾ. ಎಸ್.ಬಿ.ರಾವ್ ಅನ್ನುವವರ ಮನೆಯಲ್ಲಿದ್ದ ದೂರವಾಣಿಗೆ ಆಕಾಶವಾಣಿಯವರು ಕರೆ ಮಾಡಿ ನಿಸಾರ್ ಅವರಿಗೆ ಹಾಡಿನ ವಿಚಾರವನ್ನು ತಿಳಿಸುತ್ತಾರೆ.

ಆದರೆ ಪದ್ಯ ಬರೆದು ಆಕಾಶವಾಣಿಗೆ ಕಳುಹಿಸಲು ನಿಸಾರ್ ಅವರಿಗೆ ಉಳಿದಿದ್ದಿದ್ದು ಕೇವಲ ಎಂಟ ದಿನಗಳು ಮಾತ್ರ. ಕನ್ನಡದ ಕುರಿತಾಗಿ ಏನು ಬರೆಯಲಿ ಎಂಬ ಆಲೋಚನೆಯಲ್ಲಿ ಮನೆಯ ತಾರಸಿ ಮೇಲೆ ಸುತ್ತಾಡುತ್ತಿದ್ದಾಗಲೇ ನಿಸಾರ್ ಅವರಿಗೆ ಹೊಳೆದ ಸಾಲೇ ‘ನಿತ್ಯೋತ್ಸವ, ತಾಯಿ ನಿತ್ಯೋತ್ಸವ…’

ಹೌದಲ್ವಾ, ಜೋಗದ ಮೇಲೆ ಕವನ ಬರೆಯಬಹುದಲ್ವಾ? ನಮ್ಮ ನಾಡಿನ ಪ್ರಕೃತಿ ಸೌಂದರ್ಯದ ಮೇಲೇ ಒಂದು ಹಾಡು ರಚನೆ ಮಾಡಿದ್ರೆ ಹೇಗೆ ಎಂಬ ಆಲೋಚನೆಯಲ್ಲೇ ಅವರ ಮನಸ್ಸಿಗೆ ಹೊಳೆದದ್ದೇ ‘ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ’ ಎಂಬ ಸಾಲು. ಹೀಗೆ ಅಯಾಚಿತವಾಗಿ ಕವಿಮನಸ್ಸಿಗೆ ಹೊಳೆದ ಸಾಲಿನ ಮೇಲೆಯೇ ರೂಪುಗೊಂಡ ಹಾಡೇ ‘ಜೋಗದ ಸಿರಿ ಬೆಳಕಿನಲ್ಲಿ..’

ಕನ್ನಡ ತಾಯಿಗೆ ನಿತ್ಯ ಉತ್ಸವ ನಡೆಯುತ್ತಿದೆ ಮತ್ತು ಇದು ಶಾಶ್ವತ ಹಾಗೂ ಚಿರಂತನವಾಗಿರುವಂತದ್ದು, ಮತ್ತಿದು ಶತಶತಮಾನಗಳಿಂದ ನಡೆಯುತ್ತಿದೆ. ಈ ನಿತ್ಯೋತ್ಸವದ ಮುಂದೆ ನಾವು ನವಂಬರ್ ತಿಂಗಳಲ್ಲಿ ಮಾತ್ರ ಆಚರಿಸುವ ರಾಜ್ಯೋತ್ಸವ ಯಾವ ಲೆಕ್ಕ ಎಂಬ ಯೋಚನೆ ಮೂಡಿ ನಿತ್ಯೋತ್ಸವ ಹಾಡಿಗೆ ಪ್ರೇರಣೆ ಕೊಟ್ಟಿತು ಎಂಬುದನ್ನು ಕವಿ ನಿಸಾರ್ ಅವರು ಈ ಹಿಂದೆ ಹೇಳಿಕೊಂಡಿದ್ದರು.

Advertisement

ನಿಸಾರ್ ಅವರೊಳಗೆ ಕವಿಯೂ ಇದ್ದ ಒಬ್ಬ ವಿಜ್ಞಾನಿಯೂ ಇದ್ದ ಹಾಗಾಗಿಯೇ ಅವರಿಗೆ ಜೋಗದ ಸಿರಿ ಬೆಳಕು, ತುಂಗೆಯ ತೆನೆ ಬಳುಕು ಎಂಬಂತ ಕವಿ ಮನಸ್ಸಿನ ಸಾಲುಗಳು ಹೊಳೆದರೆ, ಭೂಗರ್ಭಶಾಸ್ತ್ರ ವಿಷಯದ ಪ್ರಾದ್ಯಾಪಕರಾಗಿದ್ದ ಕಾರಣ ಸಹ್ಯಾದ್ರಿಯಲ್ಲಿ ಲೋಹದ ಅದಿರೂ ಅವರ ಹಾಡಿನಲ್ಲಿ ಜಾಗ ಪಡೆಯಿತು ಎಂಬುದನ್ನು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ನಮ್ಮ ನಾಡಿನಲ್ಲಿರುವ ಪ್ರಾಕೃತಿಕ ಶ್ರೀಮಂತಿಕೆ ಹಾಗೂ ಕನ್ನಡ ನಾಡಿನ ಭವ್ಯ ಇತಿಹಾಸ ಇವೆರಡನ್ನೂ ಸಕಾಲಿಕವಾಗಿ ನೆನಪಿಸಿಕೊಂಡು ಅದಕ್ಕೆ ನಿತ್ಯೋತ್ಸವ ಹಾಡಿನ ರೂಪ ಕೊಟ್ಟ ಈ ಕಥೆಯೇ ರೋಚಕ. ತನಗೆ ಹೊಳೆದ ಎರಡೆರಡೇ ಸಾಲುಗಳನ್ನು ತಮ್ಮ ಕೋಣೆಗೆ ಬಂದು ಬರೆದಿಟ್ಟು ಬಳಿಕ ಮತ್ತೆ ತಾರಸಿಗೆ ಬಂದು ಯೋಚಿಸುತ್ತಾ ಮತ್ತೆ ಹೊಸ ಸಾಲುಗಳು ಹೊಳೆದಾಗ ಮತ್ತೆ ಅವುಗಳನ್ನು ಬರೆದು ರೂಪುಗೊಂಡ ಹಾಡೇ ‘ಜೋಗದ ಸಿರಿ ಬೆಳಕಿನಲ್ಲಿ’ ಎಂಬುದನ್ನು ಕವಿ ನಿಸಾರ್ ಅವರು ಆ ಹಾಡು ಬರೆದು 50 ವರ್ಷಗಳ ಬಳಿಕವೂ ಅದೇ ಉತ್ಸಾಹದಿಂದ ವಿವರಿಸಿದ್ದರು.

ಹೆಚ್. ಆರ್. ಲೀಲಾವತಿ ಶಿಷ್ಯೆಯರಾಗಿರುವ ಕೃಪಾ ಮತ್ತು ಆಶಾ ಅವರ ಸೊಗಸಾದ ಕಂಠದಲ್ಲಿ ಮೂಡಿಬಂದ ‘ಜೋಗದ ಸಿರಿ ಬೆಳಕಿನಲ್ಲಿ’ ಸಹಿತ ನಿತ್ಯೋತ್ಸವದ ಹಾಡುಗಳು ಬಳಿಕ ಕರ್ನಾಟಕ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ ವಿಚಾರ ಇಂದಿಗೆ ಇತಿಹಾಸ.

ಆಕಾಶವಾಣಿಯಲ್ಲಿ ಪ್ರಸಾರವಾದ ಬಳಿಕ ಅದನ್ನು ಖ್ಯಾತ ಸುಗಮ ಸಂಗೀತ ಗಾಯಕ ಮತ್ತು ಸಂಗೀತಗಾರ ಮೈಸೂರು ಅನಂತಸ್ವಾಮಿ ಅವರು ಈ ಹಾಡನ್ನು ರೇವತಿ ರಾಗದಲ್ಲಿ ಧ್ವನಿಮುದ್ರಣ ಮಾಡಿ 70ರ ದಶಕದಲ್ಲಿ ಕ್ಯಾಸೆಟ್ ರೂಪದಲ್ಲಿ ಬಿಡುಗಡೆಗೊಂಡಾಗ ಅಪಾರ ಜನಮನ್ನಣೆಯನ್ನು ಈ ಹಾಡು ಪಡೆಯಿತು. ಮತ್ತು ಕನ್ನಡ ಭಾವಗೀತೆಗಳು ರಾಗಸಂಯೋಜನೆಗೊಂಡು ಕ್ಯಾಸೆಟ್ ಗಳ ಮೂಲಕ ಜನರ ಮನೆಮನೆಗೆ ತಲುಪುವಂತಾಗಲು ನಿಸಾರ್ ಅವರ ನಿತ್ಯೋತ್ಸವದ ಕವನ ಸಂಕಲನ ಪ್ರೇರಣೆಯಾಯಿತು.

ಸಂಗ್ರಹ: ಹರಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next