Advertisement

ಮೋದಿ ಅಲೆ, ಸಂಘಟನೆಯ ಸೆಲೆ, ತಂತ್ರಗಾರಿಕೆಯ ಬಲೆ

07:21 AM May 26, 2019 | Lakshmi GovindaRaj |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಇದಕ್ಕೆ ಪ್ರಧಾನಿ ಮೋದಿ ಅಲೆಯ ಜತೆಗೆ ಪಕ್ಷದ ಸಂಘಟನೆಯ ಶ್ರಮ, ತಂತ್ರಗಾರಿಕೆ ಪ್ರಧಾನವಾಗಿ ಫ‌ಲ ನೀಡಿದಂತಿದೆ.

Advertisement

ಮೋದಿ ಅಲೆಯ ಅಬ್ಬರದ ಜತೆಗೆ ಪಕ್ಷದ ಸಿದ್ಧಾಂತ, ಬದಲಾದ ಪರಿಸ್ಥಿತಿಗೆ ತಕ್ಕಂತೆ ರೂಪಿಸಿದ ಚುನಾವಣಾ ರಣತಂತ್ರ, ಕೇಡರ್‌ನ ಅವಿರತ ಪರಿಶ್ರಮ ಫ‌ಲ ನೀಡಿದ್ದರೆ, ಮತ್ತೂಂದೆಡೆ ಸರ್ಜಿಕಲ್‌ ಸ್ಟ್ರೈಕ್‌, ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ಬಿಜೆಪಿ ಗೆಲುವಿನ ಓಟಕ್ಕೆ ಹೆಚ್ಚಿನ ವೇಗ ತುಂಬಿವೆ. ಜತೆಗೆ, ರಾಜ್ಯ ಮೈತ್ರಿ ಸರ್ಕಾರದ ವೈಫ‌ಲ್ಯ, ಕಚ್ಚಾಟ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಪಕ್ಷದ ವಲಯದಿಂದ ಕೇಳಿ ಬಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ 22 ಸ್ಥಾನ ಗೆಲ್ಲುವುದಾಗಿ ಯಡಿಯೂರಪ್ಪ ಚುನಾವಣಾ ಘೋಷಣೆಗೂ ಮೊದಲೇ ಗುರಿ ನಿಗದಿಪಡಿಸಿಕೊಂಡಿದ್ದರು. ಆ ಗುರಿಯನ್ನು ತಲುಪುವ ಪ್ರಯತ್ನದಲ್ಲೇ ರಾಜ್ಯ ನಾಯಕರು ಸಕ್ರಿಯರಾಗಿದ್ದರು. ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಕೇಂದ್ರದ ಹಲವು ಸಚಿವರು ಪ್ರಚಾರ ನಡೆಸಿದ್ದರು.

ಈ ನಡುವೆಯೂ 22ರ ಗುರಿ ತಲುಪುವ ಬಗ್ಗೆ ಬಿಜೆಪಿಯ ಬಹುಪಾಲು ನಾಯಕರಿಗೇ ವಿಶ್ವಾಸವಿದ್ದಂತಿರಲಿಲ್ಲ. 18ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ನಿರೀಕ್ಷೆ ಮೀರಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಅದರ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿರಬಹುದಾದ ಅಂಶಗಳ ಬಗ್ಗೆ ವಿಶ್ಲೇಷಣೆಯೂ ನಡೆದಿದೆ.

ಮೋದಿ ಅಲೆಯ ಅಬ್ಬರ: ದೇಶದಲ್ಲಿ ಬಿಹಾರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಪ್ರಧಾನಿ ಮೋದಿಯ ಅಲೆ ಪ್ರಚಂಡವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಹಲವು ಸುತ್ತಿನಲ್ಲಿ ಮೋದಿಯವರು ಪ್ರಚಾರ ಮಾಡಿದ ಬೆನ್ನಲ್ಲೇ ಅಲೆಯ ಅಬ್ಬರ ತೀವ್ರವಾಯಿತು. ಮೋದಿಯವರು ಪ್ರಚಾರ ಮಾಡಿದ ಕ್ಷೇತ್ರಗಳು ಮಾತ್ರವಲ್ಲದೆ, ಅಕ್ಕಪಕ್ಕದ ಹಲವು ಕ್ಷೇತ್ರಗಳಲ್ಲೂ ಪ್ರಭಾವ ಬೀರುವಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತು. ಮೋದಿ ಅಲೆಯ ತೀವ್ರತೆ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎನ್ನುತ್ತಾರೆ ನಾಯಕರು.

Advertisement

ಸಂಘಟನೆ- ಸಿದ್ಧಾಂತ ಫ‌ಲ: ಬಿಜೆಪಿಯ ಸಂಘಟನಾ ವ್ಯವಸ್ಥೆ, ಬಿಜೆಪಿ ಗೆಲುವಿನ ತೀವ್ರತೆಗೆ ಸಾಕಷ್ಟು ವೇಗ ನೀಡಿದೆ. ಬೂತ್‌ಮಟ್ಟದಿಂದ ಎಲ್ಲ ಹಂತಗಳಲ್ಲೂ ಸಂಘಟನಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಿದ್ದು, ಉತ್ತಮ ಫ‌ಲಿತಾಂಶಕ್ಕೆ ಸಹಕಾರಿಯಾಗಿದೆ. ಜತೆಗೆ, ಪಕ್ಷದ ಸಿದ್ಧಾಂತ, ಅದರಲ್ಲೂ ಮುಖ್ಯವಾಗಿ ಹಿಂದುತ್ವ ಎಲ್ಲ ವರ್ಗದ ಮತದಾರರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.

ತಂತ್ರಗಾರಿಕೆ, ಸರ್ಜಿಕಲ್‌ ಸ್ಟೈಕ್‌, ಕಲ್ಯಾಣ ಕಾರ್ಯಕ್ರಮ…: ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ತಂತ್ರಗಾರಿಕೆ, ಭಯೋತ್ಪಾದಕ ಚಟುವಟಿಕೆ ವಿರುದ್ಧ ನಡೆದ ಸರ್ಜಿಕಲ್‌ ಸ್ಟ್ರೈಕ್‌, ರಕ್ಷಣಾ ವಿಚಾರಕ್ಕೆ ಸಂಬಂಧಪಟ್ಟಂತೆ ಮೋದಿಯವರು ತೆಗೆದುಕೊಂಡ ದಿಟ್ಟ ನಿಲುವು, ಕಲ್ಯಾಣ ಕಾರ್ಯಕ್ರಮಗಳು ಜನರ ವಿಶ್ವಾಸ ಗಳಿಸಿ ಬೆಂಬಲ ಪಡೆಯುವಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಬಿಜೆಪಿಯ ಅದ್ಭುತ ಸಾಧನೆಗೆ ನನ್ನ ಪ್ರಕಾರ ಪಂಚ ಕಾರಣ ಪ್ರಮುಖವಾಗಿವೆ. ಮೊದಲಿಗೆ ಪ್ರಧಾನಿ ಮೋದಿ ಅಲೆ, ನಾಯಕತ್ವ. ಸಿದ್ಧಾಂತ, ಅದರಲ್ಲೂ ಹಿಂದುತ್ವ. ಚುನಾವಣೆಯುದ್ದಕ್ಕೂ ಬದಲಾದ ಟ್ರೆಂಡ್‌ನ‌ ಪರಿಣಾಮಕಾರಿ ಬಳಕೆ ಜತೆಗೆ ಸಂಘಟನೆ ನಿರ್ವಹಿಸಿದ ಮಹತ್ತರ ಪಾತ್ರ. ಯಾವ ಕ್ಷೇತ್ರದಲ್ಲೂ ಭಿನ್ನಮತ- ಗೊಂದಲವಿಲ್ಲದಂತೆ ಅನುಸರಿಸಿದ ರಾಜಕೀಯ ತಂತ್ರಗಾರಿಕೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನದ ಮಾಹಿತಿ ಜನರಿಗೆ ತಲುಪಿಸಿದ್ದು. ಆರನೇ ಮಹತ್ತರ ಕಾರಣವೆಂದರೆ ರಾಜಕೀಯ ವಿರೋಧಿಗಳು ಪ್ರಧಾನಿಯವರ ವಿರುದ್ಧ ನಡೆಸಿದ ಅಪಪ್ರಚಾರ ಪಕ್ಷಕ್ಕೆ ಪ್ರಚಾರವಾಗಿ ಪರಿಣಮಿಸಿದ್ದು. ಜತೆಗೆ ಚುನಾವಣೆಗೂ ಮೊದಲೇ ಕಮಲ ಜ್ಯೋತಿ, ಮೇರಾ ಬೂತ್‌ ಸಬ್‌ಸೇ ಮಜಬೂತ್‌, ಕಮಲ ಸಂದೇಶ ಯಾತ್ರೆಯಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದವು.
-ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಮೋದಿಯವರ ಅಲೆಯ ಜತೆಗೆ ಯಡಿಯೂರಪ್ಪ ಅವರ ವರ್ಚಸ್ಸು ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಮೈತ್ರಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಂಘಟನೆ ವತಿಯಿಂದ ನಡೆದ ಶಿಸ್ತುಬದ್ಧ ಪ್ರಯತ್ನ, ಸರ್ಜಿಕಲ್‌ ಸ್ಟೈಕ್‌ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಂದೇಶ ಸಾರಿದ್ದು, ಇದರಿಂದ ದೇಶಕ್ಕೆ ಒಳ್ಳೆಯ ಆಡಳಿತ ಬೇಕು ಎಂಬ ಕಾರಣಕ್ಕೆ ಜನ ಬಿಜೆಪಿ ಬೆಂಬಲಿಸಿದ್ದಾರೆ.
-ಎನ್‌. ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next