Advertisement

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

11:45 PM May 01, 2024 | Team Udayavani |

ಬೆಂಗಳೂರು: ವಿದೇಶಕ್ಕೆ ತೆರಳಿರುವ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಸಹಕರಿಸುವ ಜತೆಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

Advertisement

ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಇಡೀ ದೇಶದ ಆತ್ಮಸಾಕ್ಷಿಯನ್ನೇ ಕಲಕುವಂಥ ಘೋರ ಹಾಗೂ ಅಸಹ್ಯಕರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿದ್ದು ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಎಸ್‌ಐಟಿಯನ್ನು ರಚಿಸಿದೆ. ಪೊಲೀಸರು ಈಗಾಗಲೇ ತನಿಖೆ ಪ್ರಾರಂಭಿಸಿದ್ದು ಎ. 28ರಂದೇ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಆರೋಪಿ ಪ್ರಜ್ವಲ್‌ ರೇವಣ್ಣ ತಮ್ಮ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ಬಳಸಿಕೊಂಡು ಎ. 27ರಂದೇ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು ಅವರನ್ನು ಬಂಧಿಸಲು ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಸ್‌ಐಟಿ ತಂಡ ತನಿಖೆಗಾಗಿ ಹಗಲು ರಾತ್ರಿ ದುಡಿಯುತ್ತಿದೆ. ಆದರೆ ಹಲವಾರು ಮಹಿಳೆಯರಿಗೆ ದೌರ್ಜನ್ಯ ಎಸಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ರಾಜ್ಯಕ್ಕೆ ಕರೆತರುವುದು ಈ ಹಂತದಲ್ಲಿ ಅವಶ್ಯವಾಗಿದ್ದು, ನೆಲದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆ ಹಾಗೂ ಕೇಂದ್ರ ಗೃಹ ಇಲಾಖೆ ತುರ್ತು ಸ್ಪಂದನೆ ಮಾಡಬೇಕಿದ್ದು ರಾಜತಾಂತ್ರಿಕ ವೀಸಾವನ್ನು ರದ್ದುಗೊಳಿಸಬೇಕು. ಜತೆಗೆ ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆಗಳಿಗೆ ಪ್ರಜ್ವಲ್‌ ರೇವಣ್ಣ ಅವರನ್ನು ತತ್‌ಕ್ಷಣ ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು. ಈ ಎಲ್ಲ ಪ್ರಕ್ರಿಯೆಗಳಿಗೆ ಅಗತ್ಯವಾದ ದಾಖಲೆಗಳು ಹಾಗೂ ಕಾನೂನಾತ್ಮಕ ನೆರವನ್ನು ರಾಜ್ಯ ಸರಕಾರ ಎಸ್‌ಐಟಿ ಮೂಲಕ ಒದಗಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ವೀಸಾ ಕೊಟ್ಟವರು ಯಾರು?
ಯಾದಗಿರಿ, ಹಾಸನ ಸಂಸದ ಪ್ರಜ್ವಲ್‌ಗೆ ವಿದೇಶಕ್ಕೆ ಹೋಗಲು ಒಂದೇ ದಿನದಲ್ಲಿ ವೀಸಾ ಕೊಟ್ಟವರು ಯಾರು? ಇದೆಲ್ಲವನ್ನೂ ದೇವೇಗೌಡರೇ ಪ್ಲ್ಯಾನ್ ಮಾಡಿ ಮಾಡಿಸಿದ್ದು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುರಪುರ ತಾಲೂಕು ದೇವತ್ಕಲ್‌ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜ್ವಲ್‌ ಪ್ರಕರಣವನ್ನು ಈಗಾಗಲೇ ಎಸ್‌ಐಟಿಗೆ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪಾರದರ್ಶಕ ತನಿಖೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪ್ರಜ್ವಲ್‌ ವಿದೇಶಕ್ಕೆ ಹೋಗಲು ಬಿಟ್ಟವರು ಯಾರು, ಇದರ ಹಿಂದೆ ಯಾರಿದ್ದಾರೆ ಎಲ್ಲವನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಕಣ್ಣಿಗೆ ಇದೆಲ್ಲವೂ ಕಾಣಲಿಲ್ಲವಾ? ಪ್ರಜ್ವಲ್‌ ವಿದೇಶಕ್ಕೆ ಹೋಗುವಾಗ ಯಾರ ಧೈರ್ಯದಿಂದ ಹೋದ, ಪಾಸ್‌ಪೋರ್ಟ್‌, ವೀಸಾ ಕೊಟ್ಟವರು ಯಾರು? ಇದೆಲ್ಲವನ್ನೂ ಪ್ಲ್ಯಾನ್ ಮಾಡಿದವರು ದೇವೇಗೌಡರೇ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next