Advertisement

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಸಂಪೆಕಟ್ಟೆಯ ಮಾದರಿ ಕೃಷಿಕ  ಗಣಪತಿ ಕೆ.ಎನ್

04:54 PM Sep 08, 2021 | ಆದರ್ಶ ಕೊಡಚಾದ್ರಿ |
ಸಾವಯವ ಕೃಷಿಯನ್ನು ಹೆಚ್ಚಿಸುವುದರ ಜೊತೆಗೆ ರಾಸಾಯನಿಕ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಸಂಸ್ಥೆ ಇದಾಗಿದೆ. ಶೋಧವು ಸಾವಯವ ಕೃಷಿಯನ್ನು ಕುರಿತು  ಜಾಗೃತಿ ಮೂಡಿಸಿ ಕೃಷಿಕರಿಗೆ ಉತ್ತೇಜನ ನೀಡುವ ಮತ್ತು ಕೃಷಿಗೆ ಅಗತ್ಯವಿರುವ ಉಪಕರಣಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಪ್ರತಿಯೊಬ್ಬ ಕೃಷಿಕನೂ ,ಸಾವಯವ ಕೃಷಿಯತ್ತ ವಾಲಲು ಸಹಾಯ ಮಾಡುತ್ತದೆ .ಈ ಸಂಘವು ಕೆಲ ಸದಸ್ಯರ ಗುಂಪನ್ನು ಹೊಂದಿದ್ದು, ರೈತರಿಗೆ ಅವಶ್ಯಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ನಂತರ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಹೊಂದಿದೆ...
Now pay only for what you want!
This is Premium Content
Click to unlock
Pay with

-ಆದರ್ಶ ಕೊಡಚಾದ್ರಿ

Advertisement

ಮನುಷ್ಯನು ತನ್ನ ಬೆಳವಣಿಗೆಯ ನಾಗಾಲೋಟವನ್ನೆರಿ ಕ್ಷಣ ಕ್ಷಣವೂ ಬೆಳೆಯುವ ಹಪಹಪಿಕೆಯಲ್ಲಿ ಇರುವಾಗ, ಎಲ್ಲವನ್ನೂ  ಬಹುಬೇಗ ಬಾಚಿಕೊಳ್ಳಲು ಪ್ರಯತ್ನಿಸುತ್ತಾ ಜೀವನದ ಪ್ರತಿ ಹಂತದಲ್ಲೂ ಸುಲಭ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ. ಇವುಗಳಲ್ಲಿ ಆತನ ಆಹಾರ ಪದ್ಧತಿ ಅಷ್ಟೇ ಅಲ್ಲದೆ ಆಹಾರ ಪದಾರ್ಥಗಳ ಉತ್ಪಾದನೆಯೂ ಹೊರತಾಗಿಲ್ಲ . ಅತಿ ಬೇಗ ಇಳುವರಿಯನ್ನು ಪಡೆಯಲೆಂದು ರಾಸಾಯನಿಕ ಔಷಧಿಗಳನ್ನು ಹಾಕಿ ಕೃಷಿ ಮಾಡಿ ಹಿಂದಿನ ಸಾವಯವ ಪದ್ಧತಿಯನ್ನು ಮೂಲೆಗುಂಪು ಮಾಡಲಾಗಿದೆ.

ಜಗತ್ತಿನಲ್ಲಿ ಜೀವಸಂಕುಲದ ಜೊತೆ ಜೊತೆಗೆ ಹುಟ್ಟಿದ ಮನುಷ್ಯ ಜೀವಿಯು ಬೇರೆ  ಜೀವಿಗಳಿಗಿಂತ ಭಿನ್ನವಾದ ಆಲೋಚನೆಗಳಿಂದ ಬೇರೆಲ್ಲ ಜೀವಿಗಳನ್ನು ಮೀರಿ ಬೆಳೆಯುತ್ತಾ ಒಂದಷ್ಟು ಜಾಗವನ್ನು ಮಾಡಿಕೊಂಡು ,ಅಲ್ಲಿ ಹಲವು ಇತರ ಪ್ರಾಣಿಗಳಾದ ಹಸು , ಎತ್ತು , ಕೋಳಿ ಹೀಗೆ ಬೇರೆ ಬೇರೆ ಜೀವಿಗಳನ್ನು ಬಳಸಿಕೊಂಡು ಅವುಗಳಿಂದ ತನ್ನ ಆಹಾರದ ದಾರಿಯನ್ನು  ಕಂಡುಕೊಂಡ.  ಈ ಪದ್ಧತಿಯಿಂದ ಆರೋಗ್ಯಕರ  ಜೀವನವನ್ನು ನಡೆಸಿದ ಕೂಡ. ಆದರೆ ಬರಬರುತ್ತಾ ಬುದ್ಧಿಯ ಅತಿರೇಕದಿಂದ ಸಾವಯವವನ್ನು ತೊರೆದು ರಾಸಾಯನಿಕಗಳನ್ನು ಮಣ್ಣಿಗೆ ಉಣಿಸಿ , ತಾನು ಅದರಿಂದ ತಯಾರಾದ ಅನ್ನವನ್ನು ತಿನ್ನುವತ್ತ ಗಮನಹರಿಸಿದ. .ಹಿಂದಿನಿಂದ ನಡೆದು ಬಂದಿದ್ದ ಸಾವಯವದಂತಹ ಆರೋಗ್ಯಕರ ಜೀವನಕ್ಕೆ ಕೊಡಲಿಯೇಟು ನೀಡಿದ. ಸಾವಯವ ಕೃಷಿಯ ಅಂತ್ಯದೊಂದಿಗೆ ತನ್ನ ಅಂತ್ಯದ ಹಾಡನ್ನು ತಾನೇ ಬರೆಯಹೊರಟ.

ಆದರೆ ಈ ಸಾವಯವ ಕೃಷಿಯ ಮಹತ್ವವನ್ನು ಅರಿತುಕೊಂಡು ತಮ್ಮ ಕೃಷಿ ಜೀವನದಲ್ಲಿ ಸಾವಯವ ಕೃಷಿ ವಿಧಾನವನ್ನು ಅಳವಡಿಸಿಕೊಂಡು ನಶಿಸುತ್ತಿರುವ ಈ ಪದ್ಧತಿಗೆ ಮತ್ತೆ ಮರುಜೀವ ನೀಡುತ್ತಿರುವವರು ,ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಎಂಬ ಪುಟ್ಟ ಗ್ರಾಮದ ಪ್ರಗತಿಪರ ಕೃಷಿಕ ಗಣಪತಿ ಕೆ. ಎನ್ ಅವರು.

Advertisement

ಇವರು ತಾವು ಹೊಂದಿರುವ ಸುಮಾರು 2 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ರಾಸಾಯನಿಕ ಗೊಬ್ಬರಗಳಿಗೆ ತಿಲಾಂಜಲಿ ಹೇಳಿ , ಕೃಷಿಗೆ ಬೇಕಾದ ಬಹುತೇಕ ಗೊಬ್ಬರವನ್ನು ತಮ್ಮ ಮನೆಯಲ್ಲೇ ತಯಾರಿಸಿ ಇನ್ನೂ ಅಗತ್ಯ ಇದ್ದಾಗ ಅಕ್ಕ ಪಕ್ಕದ ಮನೆಗಳಿಂದ ಗೊಬ್ಬರವನ್ನು ಖರೀದಿಸುವ ಮೂಲಕ ತಮ್ಮ ಜಮೀನಿಗೆ ಸಾವಯವದ ಅಮೃತ ಉಣಿಸುತ್ತಿದ್ದಾರೆ. ಸುಮಾರು ಏಳು-ಎಂಟು ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿರುವ ಇವರು ಭತ್ತ , ಅಡಿಕೆ , ಮೆಕ್ಕೆಜೋಳ , ತರಕಾರಿ , ಕಬ್ಬು ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳನ್ನು ಬೆಳೆಸುತ್ತಾ ತಮ್ಮ ಸಾವಯವ ಕೃಷಿಯಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಕೃಷಿಕರು ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಿದ್ದು ಇಳುವರಿ ಹೆಚ್ಚಿಸುವ ದೃಷ್ಟಿಯಿಂದ ,ಲಾಭಕ್ಕಾಗಿ ಬೇರೆ ಬೇರೆ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಕೃಷಿ ಉತ್ಪನ್ನಗಳ ಮೇಲೆ ಸಿಂಪಡಿಸಿ ಬಹುಬೇಗ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ  .ಆದರೆ ಸಾವಯವದಲ್ಲಿ ಆ ಕ್ಷಣಕ್ಕೆ ಅಭೂತಪೂರ್ವವಾಗಿ ಫಲಿತಾಂಶ ಸಿಗದಿದ್ದರೂ ಮುಂದೆ ಕೆಲ ಸಮಯದಲ್ಲೇ ಉತ್ತಮವಾದ ಫಲಿತಾಂಶವನ್ನು ಕಂಡುಕೊಳ್ಳಬಹುದು , ಅಲ್ಲದೆ ರಾಸಾಯನಿಕಗಳ ಬಳಕೆಯಿಂದ ಅದರಲ್ಲಿನ ವಿಷಕಾರಿ ಅಂಶ ಮಣ್ಣು ಸೇರುವುದರ ಜೊತೆಗೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.  ಅಲ್ಲದೆ ಮಣ್ಣಿನ ಫಲವತ್ತತೆ ಕೂಡಾ ಕಡಿಮೆಯಾಗುತ್ತದೆ. ಆದರೆ ಸಾವಯವ ಗೊಬ್ಬರವನ್ನು ಬಳಸುವುದರಿಂದಾಗಿ ಮಣ್ಣಿನ ಫಲವತ್ತತೆ ದಿನೇ ದಿನೇ ಹೆಚ್ಚುವುದರ ಜೊತೆಜೊತೆಗೆ ಉತ್ಪನ್ನಗಳನ್ನು ಸೇವಿಸಿದ ಜನರು ಆರೋಗ್ಯಕರ ಜೀವನವನ್ನು ನಡೆಸಬಹುದು ಎನ್ನುತ್ತಾರೆ ಕೃಷಿಕ ಗಣಪತಿಯವರು.

ಶೋಧ ಸಂಸ್ಥೆಯ ಪ್ರೇರಣೆ;

ಸಾವಯವ ಕೃಷಿಯನ್ನು ಹೆಚ್ಚಿಸುವುದರ ಜೊತೆಗೆ ರಾಸಾಯನಿಕ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಸಂಸ್ಥೆ ಇದಾಗಿದೆ. ಶೋಧವು ಸಾವಯವ ಕೃಷಿಯನ್ನು ಕುರಿತು  ಜಾಗೃತಿ ಮೂಡಿಸಿ ಕೃಷಿಕರಿಗೆ ಉತ್ತೇಜನ ನೀಡುವ ಮತ್ತು ಕೃಷಿಗೆ ಅಗತ್ಯವಿರುವ ಉಪಕರಣಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಪ್ರತಿಯೊಬ್ಬ ಕೃಷಿಕನೂ ,ಸಾವಯವ ಕೃಷಿಯತ್ತ ವಾಲಲು ಸಹಾಯ ಮಾಡುತ್ತದೆ.

ಈ ಸಂಘವು ಕೆಲ ಸದಸ್ಯರ ಗುಂಪನ್ನು ಹೊಂದಿದ್ದು, ರೈತರಿಗೆ ಅವಶ್ಯಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ನಂತರ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಹೊಂದಿದೆ  .ಇದರಿಂದಾಗಿ ಇಳುವರಿ ಕಡಿಮೆ ಇದ್ದರೂ ಸಾವಯವ ಆಹಾರ ಉತ್ಪನ್ನ ಉತ್ಪಾದಿಸಲು ರೈತರಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ನಾನು ಸಹ ಈ ಸಾವಯವ ಕೃಷಿಯತ್ತ ಒಲವು ತೋರುವಂತೆ ಆಗಲು ಇದೇ ಸಂಸ್ಥೆ ಕಾರಣ ಎನ್ನುತ್ತಾರೆ .ಈ ಪ್ರಗತಿಪರ ರೈತರು.

ಸಾವಯವ ಕೃಷಿಯಲ್ಲಿನ ಸವಾಲುಗಳು;

ಕೃಷಿಯಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹೊರಟಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಅವುಗಳಲ್ಲಿ ಮುಖ್ಯವಾದದ್ದು…

1)ಕೀಟ ಭಾದೆ:ಭತ್ತ ,ಶುಂಠಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಗೆ ಕೀಟಬಾಧೆ ಅತಿ ದೊಡ್ಡ ಸಮಸ್ಯೆ. ಇದನ್ನು ರಾಸಾಯನಿಕಗಳಿಂದ ನಿಯಂತ್ರಣಕ್ಕೆ ತರಬಹುದು , ಆದರೆ ಸಾವಯವದಿಂದ ತಕ್ಷಣಕ್ಕೆ ನಿಯಂತ್ರಣಕ್ಕೆ ತರುವುದು ಸ್ವಲ್ಪ ಕಷ್ಟದ ಕೆಲಸವಾಗಿರುತ್ತದೆ.

2) ರೋಗಗಳು: ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಬೀಜಗಳು ಕಣ್ಮರೆಯಾಗುತ್ತಿದ್ದು ಸಂಸ್ಕರಿಸಿದ(ಬೀಟಿ) ಬೀಜಗಳು ಬಂದಿರುವುದರಿಂದ ಅವುಗಳಿಗೆ ರೋಗಗಳು ಹೆಚ್ಚು, ಅವುಗಳನ್ನು ಸಾವಯವ ವಿಧಾನದ ಮೂಲಕ ಬಳಸಿ ರೋಗದಿಂದ ಮುಕ್ತಗೊಳಿಸುವುದು ಸಾವಯವ ಕೃಷಿಕರಿಗೆ ಒಂದು ಸವಾಲಿನ ಸಂಗತಿಯೇ ಸರಿ. ಇನ್ನು ಕೆಲವು ರೋಗಗಳಾದ ಚುಕ್ಕೆ ರೋಗ, ಬೆಂಕಿ ರೋಗ, ಬೇರು ಕೊಳೆ ಮುಂತಾದವುಗಳಿಗೆ ರಾಸಾಯನಿಕಗಳನ್ನು ಹೊರತುಪಡಿಸಿ ಸಾವಯವ ಪದ್ಧತಿಯ ಮೂಲಕ ನಿಯಂತ್ರಣಕ್ಕೆ ತರುವುದು ಸ್ವಲ್ಪ ಕಷ್ಟದ ಕೆಲಸ. ಹಾಗೆಂದ ಮಾತ್ರಕ್ಕೆ ಅಸಾಧ್ಯವೆದೇನೂ ಅಲ್ಲ. ಆದರೆ ಸ್ಪಲ್ಪ ಸಮಯ ತೆಗೆದುಕೊಳ್ಳುತ್ತದೆ.

3 ಇಳುವರಿ ಸಮಸ್ಯೆ: ರಾಸಾಯನಿಕಗಳ ಬಳಕೆಯಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಹೋಲಿಸಿದರೆ ಆರಂಭದ ಹಂತದಲ್ಲಿ ಸಾವಯವ ಕೃಷಿಯಲ್ಲಿ ಇಳುವರಿ ಅರ್ಧದಷ್ಟು ಕಡಿಮೆ ಬರುತ್ತದೆ. ಶುಂಠಿ ಸೇರಿದಂತೆ ಹಲವು ಉತ್ಪನ್ನಗಳ ಇಳುವರಿ ಆರಂಭದಲ್ಲಿ ಅತಿ ಕಡಿಮೆ. ಆದರೆ ಮುಂದೆ ಇಳುವರಿ ಹೆಚ್ಚಾಗುತ್ತದೆ .ಈ ನಿಟ್ಟಿನಲ್ಲಿ ತಕ್ಷಣಕ್ಕೆ ಇಳುವರಿ ಹೆಚ್ಚಿಸುವುದು ಕಷ್ಟ ಸಾಧ್ಯ ಎನ್ನುತ್ತಾರೆ.

4: ಹೈನುಗಾರಿಕೆ ಮತ್ತು ಸಾವಯವ

ಹೈನುಗಾರಿಕೆ ಪದ್ಧತಿಯು ಸಾವಯವ ಕೃಷಿಯಲ್ಲಿ ಅತಿ ಮುಖ್ಯವಾದ ಪಾತ್ರವಹಿಸುತ್ತದೆ .ಹಸು, ಎಮ್ಮೆ ,ಕುರಿ ಸೇರಿದಂತೆ ಇತರ ಪ್ರಾಣಿಗಳನ್ನು ಸಾಕಿ ಅವುಗಳ ಮೂತ್ರ ಹಾಗೂ ಸೆಗಣಿಯನ್ನು ಬಳಸುವ ಮೂಲಕ ತಮ್ಮಲ್ಲಿ ತಮ್ಮ ಜಮೀನಿಗೆ ಬೇಕಾಗುವ ಗೊಬ್ಬರವನ್ನು ತಯಾರಿಸುವುದು ನಿಜವಾದ ಸಾವಯವ ಕೃಷಿ ಎನ್ನುವ ಸಿದ್ದಾಂತವನ್ನು ಹೊಂದಿರುವ ಗಣಪತಿಯವರು ತಾವು ಕೂಡ ತಮ್ಮ ಮನೆಯಲ್ಲಿ ಹಸು ಹಾಗೂ ಎಮ್ಮೆಗಳನ್ನು ಸಾಕಿಕೊಂಡು ತಮ್ಮಲ್ಲಿರುವ ಒಂದಷ್ಟು ಜಮೀನಿನಲ್ಲಿ ಬೆಳೆಯುವ ಕಳೆ, ಹುಲ್ಲು ಕತ್ತರಿಸುವ ಮೂಲಕ ಹಾಗೂ ಗೋವಿನ ಮೂತ್ರ ಮತ್ತು ಸೆಗಣಿಯನ್ನು ಬಳಸಿ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ.

ಗೋವಿನ ಮೂತ್ರವು ಅತ್ಯಂತ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ ಪಾತ್ರವಹಿಸುವುದು. ಅಲ್ಲದೆ ಜೊತೆಜೊತೆಗೆ ಗೋಮೂತ್ರವನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಕೀಟ ನಾಶಕದಂತೆ ಇದು ಕೆಲಸ ಮಾಡಿ, ಸಾವಯವ ಕೃಷಿಯಲ್ಲಿ ಬಹುದೊಡ್ಡ ಸವಾಲಾಗಿರುವ ಕೀಟಬಾಧೆಯಿಂದ ಬೆಳೆಯನ್ನು ರಕ್ಷಿಸುವುದರ ಜೊತೆಗೆ ಅತ್ಯುತ್ತಮವಾದ ಇಳುವರಿಯನ್ನು ಪಡೆಯಬಹುದು.

ಗೋಮೂತ್ರದ ಸರಿಯಾದ ಬಳಕೆಯಿಂದ ಪಡೆಯುವ ಇಳುವರಿ ರಾಸಾಯನಿಕ ಬಳಕೆಗಿಂತಲೂ ಹೆಚ್ಚು ಎಂಬ ನಿಲುವನ್ನು ಹೊಂದಿರುವ ಇವರು, ತಮ್ಮ ಮನೆಯಲ್ಲಿಯೇ ದರಗೆಲೆ ಹಾಗೂ  ಗೋಮೂತ್ರ  ಸೇರಿಸಿ ಫಲವತ್ತಾದ ಗೊಬ್ಬರವನ್ನು ತಯಾರಿಸುವ ಮೂಲಕ ಅದ್ಭುತ ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ದೇಶ ವಿದೇಶದಲ್ಲೂ ಭಾರಿ ಬೇಡಿಕೆ

ಸಾವಯವ ಪದ್ಧತಿಯ ಮೂಲಕ ತಯಾರಿಸಲಾಗಿರುವ ಉತ್ಪನ್ನಗಳು ನಮ್ಮ ದೇಶದಲ್ಲಿ ಭಾರಿ ಬೇಡಿಕೆ ಹೊಂದಿರುವುದರ ಜೊತೆಗೆ ಬೇರೆ ಹೊರದೇಶದಲ್ಲಿ ಕೂಡ ಭಾರಿ ಬೇಡಿಕೆ ಇದೆ .ಈ ವಿಧಾನದಿಂದ ಕೃಷಿ ಮಾಡಿದರೆ ತಯಾರಿಸುವ ಉತ್ಪನ್ನಗಳಲ್ಲಿ ಯಾವುದೇ ರೀತಿಯ ವಿಷಕಾರಿ ಅಂಶವಿಲ್ಲದೆ ಆರೋಗ್ಯದ ದೃಷ್ಟಿಯಿಂದ ಬಹಳ ಉಪಯೋಗಕಾರಿ ಎಂಬುದು ಸಂಶೋಧನೆಗಳಿಂದ ರುಜುವಾತಾಗಿದೆ. ಅಲ್ಲದೆ ಹಲವು ರೀತಿಯ ಕಾಯಿಲೆಗಳಿಂದ ಮನುಷ್ಯನನ್ನು ರಕ್ಷಿಸುತ್ತದೆ ಎಂದು ತಿಳಿದು ಬಂದಿರುವುದರಿಂದ ಇದಕ್ಕೆ ಹೆಚ್ಚಿನ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಕಾಳು ಮೆಣಸು, ಏಲಕ್ಕಿ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ಈ ಸಾವಯವ ಪದ್ಧತಿಯಲ್ಲಿ ತಯಾರಾಗಿದ್ದರೆ ಅವುಗಳಿಗೆ ಚಿನ್ನದ ಬೆಲೆ ನೀಡಲು ಸಿದ್ಧರಾಗಿದ್ದಾರೆ ಎನ್ನುತ್ತಾರೆ ಕೃಷಿಕ ಗಣಪತಿ ಕೆ. ಎನ್.

ಸರ್ಕಾರದ ಪಾತ್ರವೂ ಅಗತ್ಯ

ಸರ್ಕಾರವು ಇತ್ತೀಚಿನ ದಿನಗಳಲ್ಲಿ ಒಂದಷ್ಟು ಮಟ್ಟಿಗೆ ಸಾವಯವ ಕೃಷಿಯನ್ನು ಬೆಂಬಲಿಸುತ್ತಿದ್ದು, ಪ್ರೋತ್ಸಾಹವನ್ನು ನೀಡುತ್ತಿದೆ ಆದರೆ ಜೊತೆ ಜೊತೆಗೆ ರಾಸಾಯನಿಕ ಗೊಬ್ಬರಕ್ಕೂ ಉತ್ತೇಜನ ನೀಡುತ್ತಿದೆ. ಆದರೆ ವಾಸ್ತವದಲ್ಲಿ ರಾಸಾಯನಿಕ ಕೃಷಿಗಿಂತ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇದ್ದು ಮುಂದಾದರೂ ಸರ್ಕಾರವು ಸಾವಯವ ಗೊಬ್ಬರ ಕೃಷಿ ಮಾಡುವವರಿಗೆ ಉತ್ತೇಜನ ನೀಡಿದರೆ, ಖಂಡಿತಾ ಕೆಲವೇ ಕೆಲವು ವರ್ಷಗಳಲ್ಲಿ ಎಲ್ಲಾ ರೈತರು ಸಾವಯವ ಕೃಷಿಯತ್ತ ಆಸಕ್ತಿ ತೋರುತ್ತಾರೆ. ಇಲ್ಲವಾದರೆ ಇನ್ನು ಕೆಲವೇ ವರ್ಷಗಳಲ್ಲಿ ಸಾವಯವ ಪದ್ಧತಿಯ ಕಣ್ಮರೆಯಾಗಿ ಬಿಡುವ ಸಾಧ್ಯತೆ ಇದೆ ಎನ್ನುವ ಆತಂಕವಿದೆ ಎನ್ನುತ್ತಾರೆ ಪ್ರಗತಿಪರ ರೈತ ಗಣಪತಿ ಕೆ. ಎನ್.

ಒಟ್ಟಾರೆಯಾಗಿ ನೋಡುವುದಾದರೆ ಈ ಪದ್ಧತಿಯು ಹಿಂದಿನಿಂದಲೂ ಇದ್ದು ಈಗ ಕಣ್ಮರೆಯಾಗಿರುವ ಪದ್ಧತಿಯಾಗಿದ್ದು ಮತ್ತೆ ಬೆಳಕಿಗೆ ತಂದು ಆರೋಗ್ಯಕರ ವ್ಯವಸ್ಥೆಗೆ ನಾಂದಿ ಹಾಡಬೇಕಿದೆ. ವಿಷಕಾರಿ ರಾಸಾಯನಿಕ ಗಳನ್ನು ತ್ಯಜಿಸಿ, ಭೂಮಿಯನ್ನು ಫಲವತ್ತಾಗಿಸುವ ಜೊತೆಗೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಇಂತಹ ಪದ್ಧತಿಯೊಂದರ ಅವಶ್ಯಕತೆ ಸಮಾಜಕ್ಕಿದೆ.

ಚಿತ್ರ ಕೃಪೆ: ಶಾಂತರಾಮ್‌(ಬೆಂಗಳೂರು)

Advertisement

Udayavani is now on Telegram. Click here to join our channel and stay updated with the latest news.