ಮೈಸೂರು: ನಾಪತ್ತೆಯಾಗಿದ್ದ ಮಹಿಳೆ 13 ತಿಂಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ನಿವಾಸಿ ಲೇಟ್ ದೇವರಾಜಾಚಾರಿ ಅವರ ಪತ್ನಿ ಶಾರದಮ್ಮ(45) ಅವರೇ ಮಗಳಿಂದ ಹತ್ಯೆ ಯಾದವರು. ಚಿಕಿತ್ಸೆಗಾಗಿ ಪುತ್ರಿಯೊಂದಿಗೆ ಆಡಿದ ಜಗಳವೇ ಕೊಲೆಗೆ ಕಾರಣವಾಗಿದೆ. ಇವರನ್ನು ಪುತ್ರಿ ಅನುಷಾ ತನ್ನ ಪತಿ ದೇವರಾಜುವಿನೊಂದಿಗೆ ಸೇರಿ ಕೊಲೆ ಮಾಡಿದ್ದು, ದಂಪತಿಗಳಿಬ್ಬರು ಜೈಲು ಪಾಲಾಗಿದ್ದಾರೆ.
ಶಾರದಮ್ಮ ಅವರು ಪತಿ ನಿಧನದ ಬಳಿಕ ಹೆಬ್ಬಕವಾಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಕಣ್ಣಿನ ತೊಂದರೆಯಿಂದ ನರಳುತ್ತಿದ್ದರು. ಚಿಕಿತ್ಸೆ ಕೊಡಿಸುವಂತೆ ಮಗಳು ಅನುಷಾಗೆ ಹೇಳಿದ್ದಾರೆ. ಆದರೆ, ಅನುಷಾ ಹಣದ ತೊಂದರೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದಾರೆ. ಕೊನೆಗೆ 2022ರ ನವೆಂಬರ್‌ನಲ್ಲಿ ಪತಿಯೊಂದಿಗೆ ತೆರಳಿ ತಾಯಿಗೆ ಕಣ್ಣಿನ ಚಿಕಿತ್ಸೆ ಕೊಡಿಸಿ ಮಂಡ್ಯದಲ್ಲಿನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಈ ವೇಳೆ ಚಿಕಿತ್ಸೆ ಕೊಡಿಸಲು ತಡ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾರದಮ್ಮ, ಮಗಳೊಂದಿಗೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅನುಷಾ ತಾಯಿಯನ್ನು ಕೆಳಗೆ ತಳ್ಳಿದ್ದು, ಕೆಳಗೆ ಬಿದ್ದ ಶಾರದಮ್ಮ ಅವರ ತಲೆಗೆ ಮಂಚ ತಗುಲಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ತಾಯಿ ಶಾರದಮ್ಮ ಮೃತಪಟ್ಟಿ ದ್ದರಿಂದ ಕಂಗಲಾದ ಅನುಷಾ, ಪತಿ ದೇವರಾಜ ಅವರೊಂದಿಗೆ ಬೈಕಿನಲ್ಲಿ ಕೂರಿಸಿಕೊಂಡು ಗ್ರಾಮದ ಸ್ಮಶಾನಕ್ಕೆ ರಾತ್ರಿ 10 ಗಂಟೆ ಹೊತ್ತಿಗೆ ತೆರಳಿ ಶವ ಹೂತು ಹಾಕಿದ್ದಾರೆ. ಬಳಿಕ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿರುವ ಮನೆಗೆ ಬಂದಿದ್ದಾರೆ. ಈ ಮಧ್ಯೆ ಕೆಲ ತಿಂಗಳು ಕಳೆದರೂ ಮನೆಯ ಬಳಿ ಶಾರದಮ್ಮ ಕಾಣದೇ ಇದ್ದುದ್ದರಿಂದ ಆತಂಕಗೊಂಡ ಶಾರದಮ್ಮ ಅವರ ಸಹೋದರಿ ದೇವಮ್ಮ ಅವರು ಅನುಷಾಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊನೆಗೆ ಸಂಬಂಧಿಕರ ಒತ್ತಡದ ಮೇರೆಗೆ 8 ತಿಂಗಳ ಬಳಿಕ 2023 ಜೂನ್‌ನಲ್ಲಿ ಅನುಷಾ ತಮ್ಮ ತಾಯಿ ನಾಪತ್ತೆಯಾಗಿದ್ದಾರೆ ಎಂದು ವರುಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು, ಅನುಷಾಳ ಬಗ್ಗೆ ಅನುಮಾನ ಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗಳೇ ತಾಯಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಿದ್ದು, ಸ್ಮಶಾನದಲ್ಲಿ ಹೂತಿಟ್ಟ ಶವದ ಮರಣೋತ್ತರ ಪರೀಕ್ಷೆಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನಡೆಸಲಿದ್ದಾರೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.