ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಚಿವರ ಕಾರ್ಯ ವೈಖರಿಯ ಮೌಲ್ಯಮಾಪನ ಇನ್ನೆರಡು ತಿಂಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಲಿದ್ದಾರೆ.
ಸರಿಯಾಗಿ ಕೆಲಸ ಮಾಡದಿದ್ದರೆ ಸಂಪುಟದಲ್ಲಿ ಮುಂದುವರಿಯುವುದು ಕಷ್ಟ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.
ವೇಣುಗೋಪಾಲ್ ಕಾಂಗ್ರೆಸ್ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ಉಪ ಚುನಾವಣೆ ಹಾಗೂ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಚಿವರು ವಹಿಸಿಕೊಳ್ಳಬೇಕಾದ ಜವಾಬ್ದಾರಿ ಕುರಿತು ಚರ್ಚಿಸಲು ಕರೆದಿದ್ದ
ಸಭೆಯಲ್ಲಿ ಈ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದು ನಾಲ್ಕು ತಿಂಗಳು ಕಳೆದಿದೆ. ಇನ್ನೆರಡು ತಿಂಗಳಲ್ಲಿ ಸ್ವತಃ ರಾಹುಲ್ ಗಾಂಧಿ ಪ್ರತಿಯೊಬ್ಬ ಸಚಿವರ ಕಾರ್ಯವೈಖರಿಯ ಬಗ್ಗೆ ಮೌಲ್ಯಮಾಪನ ಮಾಡಲಿದ್ದು, ನಿಮ್ಮ ಕೆಲಸಗಳೇ ನಿಮ್ಮನ್ನು ರಕ್ಷಣೆ ಮಾಡುತ್ತವೆ. ಪಕ್ಷದಲ್ಲಿ ಯಾರೂ ರಕ್ಷಣೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವರಿಗೆ ಜವಾಬ್ದಾರಿ: ಪ್ರತಿಯೊಬ್ಬ ಸಚಿವರಿಗೂ ಲೋಕಸಭೆ ಚುನಾವಣೆಯ ಜವಾಬ್ದಾರಿ ವಹಿಸಲಾಗುವುದು. ಚುನಾವಣೆಯಲ್ಲಿ ಸಚಿವರೇ ಹೆಚ್ಚಿನ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ. ಇದೇ ವೇಳೆ, ಬಿಎಸ್‌ಪಿ ಸಚಿವ ಎನ್. ಮಹೇಶ್ ರಾಜೀನಾಮೆ ನೀಡಿರುವುದಕ್ಕೂ ಕಾಂಗ್ರೆಸ್ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಹೇಶ್ ರಾಜೀನಾಮೆಗೆ ಕಾಂಗ್ರೆಸ್ ಕಾರಣವಲ್ಲ ಎಂಬ ಭಾವನೆಯನ್ನು ಸಚಿವರು ಮೂಡಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮೇಲೆ ಬೆಟ್ಟು ಮಾಡಿ ತೋರಿಸಲು ಬಿಎಸ್‌ಪಿ ನಿರ್ಧರಿಸಿದೆ. ದಲಿತ ಮತ ಬ್ಯಾಂಕ್‌ಗೆ ಯಾವುದೇ ರೀತಿ
ಹಾನಿಯಾಗದಂತೆ ಎಚ್ಚರ ವಹಿಸಬೇಕೆಂದು ಸಚಿವರಿಗೆ ಸೂಚಿಸಲಾಗಿದೆ. ಉಪ ಚುನಾವಣೆಯ ಜೊತೆಗೆ ಲೋಕಸಭೆ ಚುನಾವಣೆಗೂ ಸಚಿವರು ಈಗಿನಿಂದಲೇ ತಮ್ಮ ಜಿಲ್ಲೆಗಳಲ್ಲಿ ಕಾರ್ಯತಂತ್ರ ರೂಪಿಸುವ ಕೆಲಸ ಮಾಡಬೇಕು ಎಂದು ವೇಣುಗೋಪಾಲ್ ತಿಳಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಗೈರು: ವೇಣುಗೋಪಾಲ್ ಕರೆದಿದ್ದ ಸಭೆಗೆ ಸಚಿವರಾದ ರಮೇಶ್ ಜಾರಕಿಹೊಳಿ, ಯು.ಟಿ.ಖಾದರ್, ಪುಟ್ಟರಂಗ ಶೆಟ್ಟಿ, ಶಿವಾನಂದ ಪಾಟೀಲ್ ಗೈರು ಹಾಜರಾಗಿದ್ದರು.