Advertisement

ಬರ ಪ್ರದೇಶಗಳಿಗೆ ಸಚಿವರ ತಂಡ ಭೇಟಿ

09:48 AM Jan 26, 2019 | Team Udayavani |

ಚಾಮರಾಜನಗರ: ರಾಜ್ಯದ ಪ್ರವಾಹ ಪೀಡಿತ ಹಾಗೂ ಬರಪೀಡಿತ ಪ್ರದೇಶಗಳ ಅಧ್ಯಯನ ಹಾಗೂ ಬರ ನಿರ್ವಹಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ರಚಿಸಲಾಗಿರುವ ಮೈಸೂರು ಕಂದಾಯ ವಿಭಾಗದ ಸಚಿವ ಸಂಪುಟ ಉಪಸಮಿತಿಯು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಸಮಿತಿಯ ಉನ್ನತ ಶಿಕ್ಷಣ ಸಚಿವ‌ ಜಿ.ಟಿ. ದೇವೇಗೌಡ, ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಬರಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದರು.

ಚಾಮರಾಜನಗರ ತಾಲೂಕಿನ ಯಡಪುರಕ್ಕೆ ಮೊದಲು ಆಗಮಿಸಿದ ಸಮಿತಿಯು ರಾಗಿ, ಹುರುಳಿ ಬೆಳೆ ಹಾನಿಗೀಡಾಗಿರುವುದನ್ನು ಪರಿಶೀಲಿಸಿದರು. ಸಚಿವರು ಹೊಲದಲ್ಲಿ ಒಣಗಿಹೋಗಿದ್ದ ಬೆಳೆಯನ್ನು ಕಿತ್ತು ವೀಕ್ಷಿಸಿದರು. ಅಲ್ಲಿಯೇ ಇದ್ದ ರೈತರೊಂದಿಗೆ ಸಮಾಲೋಚಿಸಿ ಸಮಸ್ಯೆಗಳನ್ನು ಆಲಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ರೈತರು ಮಾತನಾಡಿ, ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿಯಾಗಬೇಕು. ಕೃಷಿಗೆ ಮಾಡಲಾದ ವೆಚ್ಚ ನಷ್ಟವನ್ನು ಸರಿಯಾದ ಪ್ರಮಾಣದಲ್ಲಿ ಸಿಗುವಂತಾಗಬೇಕು ಎಂದು ಸಚಿವ ಸಂಪುಟ ಉಪಸಮಿತಿಯ ಗಮನಕ್ಕೆ ತಂದರು.

ಬಳಿಕ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿಗೆ ತೆರಳಿದ ಸಚಿವರ ತಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮಧ್ಯಂತರ ಜಲ ಸಂಗ್ರಹಾಲಯಕ್ಕೆ ಭೇಟಿ ನೀಡಿತು. ಬಹುಗ್ರಾಮ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದುಕೊಂಡರು.

Advertisement

ತದ ನಂತರ ಗುಂಡ್ಲುಪೇಟೆ ತಾಲೂಕು ಅಣ್ಣೂರು ಗ್ರಾಮಕ್ಕೆ ತೆರಳಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆಯುತ್ತಿದ್ದ ಬಾಳೆಕಟ್ಟೆ ಕೆರೆಯ ಹೂಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು. ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೊಂದಿಗೆ ಸಮಾಲೋಚಿಸಿದ ಸಚಿವರು ಯೋಜನೆಯಿಂದ ಉಪಯೋಗವಾಗುತ್ತಿದೆಯೇ? ಹೆಚ್ಚು ಕೆಲಸ ಅವಕಾಶ ಸಿಗುತ್ತಿದೆಯೇ? ಕೂಲಿ ಹಣ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿದೆಯೇ ಎಂಬ ಬಗ್ಗೆ ಕೆಲಸಗಾರರಿಂದಲೇ ಮಾಹಿತಿ ತಿಳಿದು ಕೊಂಡರು. ಉದ್ಯೋಗ ಖಾತ್ರಿಯಡಿ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಬೇಡಿಕೆ ಬರಲಿದೆಯೋ ಅದಕ್ಕೆ ತಕ್ಕಂತೆ ಸ್ಥಳೀಯವಾಗಿಯೇ ಜನರಿಗೆ ಉದ್ಯೋಗ ಅವಕಾಶ ನೀಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next