Advertisement

ಜಿಲ್ಲೆಯಲ್ಲೀಗ ಸಚಿವ ಸ್ಥಾನದ ಕುತೂಹಲ

09:18 AM May 22, 2018 | Team Udayavani |

ಮಂಗಳೂರು: ರಾಜ್ಯದಲ್ಲಿ  ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಸರಕಾರ ರಚನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸ್ಥಾನ ಯಾರಿಗೆ ಸಿಗಬಹುದು ಎಂಬ ಕುತೂಹಲ ಸೃಷ್ಠಿಯಾಗಿದೆ.

Advertisement

ಜೆಡಿಎಸ್‌ನ  ಮಹಾಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಮೂಲದ ಬಿ.ಎಂ. ಫಾರೂಕ್‌ ಅವರಿಗೆ ಕುಮಾರ ಸ್ವಾಮಿಯವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವುದು ನಿಶ್ಚಿತ ಎಂಬ ಸುದ್ದಿ ದ.ಕ.ಜಿಲ್ಲಾ ಜೆಡಿಎಸ್‌ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ದೇವೆಗೌಡರಿಗೆ ಹಾಗೂ ಕುಮಾರಸ್ವಾಮಿಯವರಿಗೆ ಅಪ್ತರಾಗಿರುವ ಬಿ.ಎಂ.ಫಾರೂಕ್‌ ಪಕ್ಷ ಸಂಘಟನೆಯಲ್ಲಿ ಅವರ ಜತೆ ರಾಜ್ಯದಾದ್ಯಂತ ಪ್ರವಾಸ ನಡೆಸಿದ್ದರು. ರಾಜ್ಯಸಭೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಎರಡು ಬಾರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಅಂಶಗಳ ಜತೆಗೆ ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡುವ ನಿಟ್ಟಿನಲ್ಲೂ ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡಲು ಎಚ್‌.ಡಿ.ದೇವೇಗೌಡರು ಹಾಗೂ  ಎಚ್‌.ಡಿ. ಕುಮಾರ ಸ್ವಾಮಿ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಬಿ.ಎಂ.ಫಾರೂಕ್‌ ಅವರು ಪ್ರಸ್ತುತ ವಿಧಾನಮಂಡಲದ ವಿಧಾನಸಭೆ ಅಥವಾ ವಿಧಾನಪರಿಷತ್‌ನ ಸದಸ್ಯರಲ್ಲ. ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿ ಬಳಿಕ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುವ ಯೋಚನೆ ಪಕ್ಷ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ದ.ಕ.ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್‌ ಅವರು ಮಾತ್ರ ಆಯ್ಕೆಯಾಗಿದ್ದಾರೆ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೇರಿ ಒಂದು ಶಾಸಕ ಸ್ಥಾನವನ್ನು ಮಾತ್ರ ಕಾಂಗ್ರೆಸ್‌ ಹೊಂದಿದೆ. ಆದುದರಿಂದ ಈ ಎರಡೂ ಜಿಲ್ಲೆಗಳಿಗೆ ಸೇರಿದಂತೆ ಕಾಂಗ್ರೆಸ್‌ಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮೈತ್ರಿಕೂಟ ಸರಕಾರದಲ್ಲಿ ಖಾದರ್‌ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ. ಖಾದರ್‌ ಅವರು ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿ ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸೇರಿದಂತೆ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. 

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ
 ಸಚಿವ ಸ್ಥಾನದ ಜತೆಗೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿರುವ ಇನ್ನೊಂದು ಪ್ರಮುಖ ವಿಚಾರವೆಂದರೆ ಉಸ್ತುವಾರಿ ಸಚಿವ ಸ್ಥಾನ. ಬಿ.ಎಂ. ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ದಕ್ಷಿಣ ಕನ್ನಡ  ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ದೇವೇಗೌಡ ಅವರಲ್ಲಿ ಮಂಡಿಸಲಾಗಿದೆ ಎಂದು ಜಿಲ್ಲಾ ಜೆಡಿಎಸ್‌ನ ಪ್ರಮುಖ ನಾಯಕರೋರ್ವರು ತಿಳಿಸಿದ್ದಾರೆ.

Advertisement

ಇನ್ನೊಂದೆಡೆ ಯು.ಟಿ. ಖಾದರ್‌ ಅವರಿಗೆ ಸಚಿವ ಸ್ಥಾನ ದೊರಕುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನ ಅವರಿಗೆ ದೊರೆಯುವ ಸಾಧ್ಯತೆ ಗಳು ಹೆಚ್ಚಾಗಿವೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next