Advertisement
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಟಿ ನೆನಪು ಕಾರ್ಯಕ್ರಮದಲ್ಲಿ “ಕೋಟಿ ಓದುಗರ ಆಂದೋಲನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬರಲ್ಲೂ ಸಮಗ್ರ ಕರ್ನಾಟಕ ಎಂಬ ಭಾವನೆ ಇಲ್ಲದಂತಾಗಿದ್ದು, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭಾವನೆ ಪ್ರತಿಯೊಬ್ಬರಲ್ಲಿದೆ.
Related Articles
Advertisement
ಕನಸು ನನಸಾಗಿಸಿ: ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮಾನವೀಯ ಸಂಬಂಧಗಳನ್ನು ಹೊಂದಿದ್ದ ರಾಜಶೇಖರ ಕೋಟಿ, ಸಮಾಜದ ಎಲ್ಲಾ ವರ್ಗದವರ ಬಗ್ಗೆ ಅಪಾರ ಚಿಂತನೆ ಹೊಂದಿದ್ದರು. ಜಾತಿಯತೆ, ಅಸ್ಪೃಶ್ಯತೆ ಸೇರಿದಂತೆ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ದನಿಯಾಗಿದ್ದ ಅವರ ಆದರ್ಶ ವ್ಯಕ್ತಿತ್ವ ಸದಾ ಕಾಲ ನೆನಪಿನಲ್ಲಿ ಉಳಿಯಲಿದೆ. ರಾಜಶೇಖರ ಕೋಟಿ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದು ಸಲಹೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮಾತನಾಡಿ, ತಮ್ಮದೇ ಧಾಟಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜಶೇಖರ ಕೋಟಿ ಎಂದಿಗೂ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಎದುರು ಮಂಡಿಯೂರಿ ಕುಳಿತವರಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿಸಿ, ಜಗತ್ತನ್ನೇ ಸುಡುವಂತೆ ಮಾಡಲಾಗುತ್ತಿದೆ. ಆದರೆ, ರಾಜಶೇಖರ ಕೋಟಿ ಅವರು ಇದಕ್ಕೆ ಹೊರತಾಗಿ, ಜನರ ನಡುವೆ ಬೆರೆತು ಬದುಕಿದವರು ಎಂದು ಬಣ್ಣಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಶೋಷಿತರ ದನಿಯಾಗಿದ್ದ ರಾಜಶೇಖರ ಕೋಟಿ ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದರು. ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದ ಅವರ ಸೇವೆ, ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
“ಕೋಟಿ ಓದುಗರ ಆಂದೋಲನ’ ಬಿಡುಗಡೆ: ಸಮಾರಂಭದಲ್ಲಿ “ಕೋಟಿ ಓದುಗರ ಆಂದೋಲನ’ ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಬಿಡುಗಡೆ ಮಾಡಲಾಯಿತು. ನೆರೆದಿದ್ದ ಗಣ್ಯರೊಂದಿಗೆ ಒಡನಾಡಿ, ಶಕ್ತಿಧಾಮ, ಆರ್‌ಎಲ್‌ಪಿ, ಆಟೋ ಚಾಲಕರು, ತರಕಾರಿ ಮಾರುಕಟ್ಟೆ ಸಂಘದ ಪ್ರತಿನಿಧಿಗಳು, ಪತ್ರಿಕಾ ವಿತರಕರು ಸೇರಿ ಬಿಡುಗಡೆ ಮಾಡಿದರು.
ಬಿಡುಗಡೆಯಾದ “ಕೋಟಿ ಓದುಗರ ಆಂದೋಲನ’ ಕೃತಿಯ ಪ್ರಥಮ ಪ್ರತಿಯನ್ನು ರಾಜಶೇಖರ ಕೋಟಿ ಅವರ ಕುಟುಂಬದವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸದ ಆರ್. ಧ್ರುವನಾರಾಯಣ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಸಮಾಜವಾದಿ ಚಿಂತಕ ಪ.ಮಲ್ಲೇಶ್, ಸಂಹವನ ಪ್ರಕಾಶನದ ಡಿ.ಎನ್.ಲೋಕಪ್ಪ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.