Advertisement

ಪಕ್ಷದ ಆದೇಶಕ್ಕೆ ಕ್ಯಾರೆ ಎನ್ನದ ಸಚಿವರು

10:53 AM Aug 30, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರದ ಸಚಿವರ ನಡುವೆ ಅಂತರ ನಿರಂತರವಾಗಿ ಮುಂದುವರೆದಿದೆ. ಆರಂಭದಿಂದಲೂ ಸಚಿವರು ಪಕ್ಷದ ಸಂಘಟನೆ ಮತ್ತು ಪಕ್ಷದ ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ತಿಂಗಳಲ್ಲಿ 2 ಬಾರಿ ಕೆಪಿಸಿಸಿ ಕಚೇರಿಗೆ ಆಗಮಿಸುವಂತೆ ಪರಮೇಶ್ವರ್‌ ಸೂಚನೆ ನೀಡಿದ್ದರೂ ಕೇವಲ ಇಬ್ಬರೇ ಇಬ್ಬರು ಸಚಿವರು ಅಧ್ಯ ಕ್ಷರ ಆದೇಶ ಪಾಲಿಸಿದ್ದಾರೆ. ಪಕ್ಷ ಸೂಚನೆ ನೀಡಿ ಹತ್ತು ದಿನ ಕಳೆದರೂ ಉಳಿದ ಸಚಿವರು ಕೆಪಿಸಿಸಿ ಕಡೆಗೆ ಮುಖ ಮಾಡಿಲ್ಲ ಎಂಬ ದೂರು ವ್ಯಕ್ತವಾಗಿದೆ.

Advertisement

ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಕೆ.ಸಿ.ವೇಣುಗೋಪಾಲ್‌ ಆಗಮಿಸಿದ ಮೇಲೆ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಪಕ್ಷದ ಕಚೇರಿಗೆ ಆಗಮಿಸು ವಂತೆ ಖಡಕ್‌ ಎಚ್ಚರಿಕೆ ನೀಡಿದ್ದರು. ಅದರ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೇ ತಿಂಗಳಲ್ಲಿ ಕೆಪಿಸಿಸಿ ಕಚೇರಿಗೆ ಐದಾರು ಬಾರಿ ಬಂದು
ಹೋಗಿದ್ದರು. ಅಲ್ಲದೆ, ಒಂದೊಂದು ಜಿಲ್ಲೆಯ ಸಮಸ್ಯೆ ಪರಿಹರಿಸಲು ಸರ್ಕಾರಿ ಕೆಲಸ ಬದಿಗೊತ್ತಿ ಕೆಪಿಸಿಸಿ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದರು. 

ಆದರೆ, ಪಕ್ಷದ ಸೂಚನೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸಿದರೂ, ಸಚಿವರು ಮಾತ್ರ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಪಕ್ಷದ ಸಭೆಗೆ ಮಾತ್ರ ಆಗಮಿಸಿ ಕೈ ತೊಳೆದುಕೊಳ್ಳುತ್ತಿದ್ದರು. ಚುನಾವಣೆಯ ವರ್ಷವಾಗಿರುವುದರಿಂದ ಬಿಜೆಪಿ ಪ್ರತಿಯೊಂದು ವಿಷಯಕ್ಕೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಬಿಜೆಪಿಗೆ ತಿರುಗೇಟು ನೀಡಲು ಸಚಿವರೇ ತಿಂಗಳಲ್ಲಿ ಎರಡು ಬಾರಿ ಪಕ್ಷದ ಕಚೇರಿಗೆ ಆಗಮಿಸಿ ನಾಲ್ಕು ವರ್ಷದಲ್ಲಿ ತಮ್ಮ ಇಲಾಖೆಯ ಸಾಧನೆ ಹಾಗೂ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಬೇಕೆಂದು ಸ್ವತಃ ಹೈಕಮಾಂಡ್‌ ಈ ಬಾರಿ ಸೂಚನೆ ನೀಡಿತ್ತು. ಆದರೆ, ಹೈಕಮಾಂಡ್‌ ಸೂಚನೆ ಮೇರೆಗೆ ಅಧ್ಯಕ್ಷರು ಸಚಿವರಿಗೆ ಪತ್ರ ಬರೆದಿದ್ದರೂ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತ್ರ ಕೆಪಿಸಿಸಿ ಕಚೇರಿಗೆ ಒಂದು ಬಾರಿ ಭೇಟಿ ನೀಡಿ ತಮ್ಮ ಇಲಾಖೆಯ ಸಾಧನೆ ಹೇಳಿಕೊಂಡಿದ್ದಲ್ಲದೆ, ಇಂದಿರಾ ಕ್ಯಾಂಟೀನ್‌, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ, ಸಿ ಫೋರ್‌ ಸಮೀಕ್ಷೆ, ಸಚಿವರ ಮನೆ ಮೇಲೆ ಐಟಿ ದಾಳಿ ಬಗ್ಗೆ ಬಿಜೆಪಿ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದ್ದರು.  ಉಳಿದಂತೆ ಯಾವ ಸಚಿವರೂ ಪಕ್ಷದ ಕಚೇರಿ ಕಡೆಗೆ ಸುಳಿದಿಲ್ಲ. 

ನಾವು ನಿತ್ಯ ಊಟ ಮಾಡೋದೇ ದಲಿತರೊಂದಿಗೆ: ಡಾ| ಜಿ. ಪರಮೇಶ್ವರ್‌ 
ಹಾವೇರಿ: “ನಾವು ನಿತ್ಯ ಊಟ ಮಾಡುವುದೇ ದಲಿತರೊಂದಿಗೆ. ಆದರೆ, ಯಡಿಯೂರಪ್ಪ ತಮ್ಮ ಜೀವನದಲ್ಲಿ ಪ್ರಥಮ ಬಾರಿಗೆ ದಲಿತರನ್ನು ಮನೆಗೆ ಕರೆಸಿ ಊಟ ಮಾಡಿಸಿದ್ದಾರೆ. ಇದು ರಾಜಕೀಯ ಲಾಭಕ್ಕಾಗಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಟೀಕಿಸಿದ್ದಾರೆ.  ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರು ದಲಿತರನ್ನು ಮನೆಗೆ ಕರೆಸಿ ಊಟ ಮಾಡಿಸಲಿ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್‌ ಪಕ್ಷ ಹುಟ್ಟಿನಿಂದಲೂ ದಲಿತರ ಮನೆಗೆ ಹೋಗುತ್ತಿದೆ. ಆದರೆ, ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ದಲಿತರು ನೆನಪಾಗುತ್ತಾರೆ. ದಲಿತರನ್ನು ಕರೆಸಿ ಊಟ ಹಾಕಿದ ಮಾತ್ರಕ್ಕೆ ದಲಿತರು ಬಿಜೆಪಿಗೆ ಮತ ಹಾಕಲ್ಲ ಎಂದರು. 

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಕೆಲಸ ಮಾಡಿದ್ದರೆ ಇದನ್ನು ನಾವೂ ಒಪ್ಪುತ್ತಿದ್ದೆವು. ಮುಖ್ಯಮಂತ್ರಿಯಾಗಿದ್ದಾಗ ಕಚೇರಿಯಲ್ಲಿನ ಅಂಬೇಡ್ಕರ್‌ ಭಾವಚಿತ್ರ ತೆಗೆಯಿಸಿದವರು ಈಗ ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಜನರು ಇದನ್ನು ಗಮನಿಸುತ್ತಾರೆ ಎಂದರು.

Advertisement

ನಾಳೆ ಸಚಿವರಿಗೆ ವೇಣುಗೋಪಾಲ ಪಾಠ
ಬೆಂಗಳೂರು: ಚುನಾವಣೆಯ ಸಿದ್ದತೆಯಲ್ಲಿರುವ ಆಡಳಿತ ಪಕ್ಷದಲ್ಲಿ ಸಚಿವರ ಕಾರ್ಯ ವೈಖರಿ ಮತ್ತು ಪಕ್ಷದ ಕಾರ್ಯಕರ್ತರಿಂದ ಬಂದಿರುವ ಆರೋಪಗಳ ಹಿನ್ನೆಲೆ ಹಾಗೂ ಮುಂದಿನ ಚುನಾವಣೆಯಲ್ಲಿ ಸಚಿವರು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳ ಕುರಿತು ಪಕ್ಷದ ರಾಜ್ಯ ಉಸ್ತುವಾರಿ
ಕೆ.ಸಿ. ವೇಣುಗೋಪಾಲ ಗುರುವಾರ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸದಸ್ಯತ್ವ ನೋಂದಣಿ ಹಾಗೂ ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಕುರಿತು ಇದುವರೆಗೂ ಸಚಿವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದು, ಪಕ್ಷದ ಆದೇಶವನ್ನು ನಿರ್ಲಕ್ಷಿಸಿರುವ ಸಚಿವರಿಗೆ ಕ್ಲಾಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕಾರ್ಯಕರ್ತರಿಂದಲೂ ದೂರು
ಪಕ್ಷ ಹಾಗೂ ಕಾರ್ಯಕರ್ತರ ಬಗ್ಗೆ ಆರಂಭದಿಂದಲೂ ಸಚಿವರು ನಿರ್ಲಕ್ಷ ತೋರುತ್ತಿರುವ ಬಗ್ಗೆ ಪಕ್ಷದ ಅಧ್ಯಕ್ಷರಿಗಷ್ಟೇ ಅಲ್ಲ. ಜಿಲ್ಲಾಮಟ್ಟದಲ್ಲೂ ಕಾರ್ಯಕರ್ತರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರ ಅಹವಾಲು ಸ್ವೀಕರಿಸದೇ ನಿರ್ಲಕ್ಷ್ಯ ತೋರುವುದರಿಂದ ಪಕ್ಷದ ಕಾರ್ಯಕರ್ತರು ಸಚಿವರ ನಡವಳಿಕೆ ಬಗ್ಗೆ ಅಸಮಾಧಾನಗೊಂಡು ರಾಜ್ಯ ನಾಯಕರಿಗೆ ದೂರು ನೀಡಿದ್ದರು. ಅಲ್ಲದೆ, ಇತ್ತೀಚೆಗೆ ಸದಸ್ಯತ್ವ ಅಭಿಯಾನದ ವಿಷಯದಲ್ಲೂ ಸಚಿವರು ತಮಗೆ ವಹಿಸಿದ ಉಸ್ತುವಾರಿ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಕೂಡ ಕೇಳಿ ಬಂದಿದೆ. ಈ ಹಿಂದೆಯೇ ಸಚಿವರು ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸುವಂತೆ ಪರಮೇಶ್ವರ್‌ ಅವರು ಎರಡು ಬಾರಿ ಪತ್ರ ಬರೆದಿದ್ದರು. ಆಗ ಕಿಮ್ಮನೆ ರತ್ನಾಕರ, ಉಮಾಶ್ರೀ, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‌ ಹೊರತು ಪಡಿಸಿ ಬಹುತೇಕ ಸಚಿವರು ಪಕ್ಷದ ಕಚೇರಿ ಕಡೆ ಮುಖ ಮಾಡುವ ಗೋಜಿಗೆ ಹೋಗಿರಲಿಲ್ಲ. ಈ ನಡವಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದ್ದು, ಪಕ್ಷದ ಆದೇಶ ಪಾಲಿಸದ ಸಚಿವರ ವಿರುದ್ಧ ಹೈಕಮಾಂಡ್‌ಗೆ ವರದಿ ನೀಡಲು ಆಲೋಚಿಸಿದೆ. ತಿಂಗಳ ನಂತರ ವರದಿ ಕಳುಹಿಸುವ ಸಾಧ್ಯತೆ ಇದೆ. 

ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಪಕ್ಷದ ಕಚೇರಿಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸುವಂತೆ ಹೈ ಕಮಾಂಡ್‌ ಆದೇಶದಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಇಬ್ಬರು ಸಚಿವರು ಆಗಮಿಸಿದ್ದಾರೆ. ಉಳಿದವರು ಸರದಿಯಲ್ಲಿ ಬರಲು ಸಿದ್ಧರಾಗಿದ್ದಾರೆ. ಹೈಕಮಾಂಡ್‌ ಆದೇಶವಾಗಿರುವುದರಿಂದ ಎಲ್ಲ ಸಚಿವರು ಆಸಕ್ತಿ ತೋರಿದ್ದಾರೆ. 
ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next