ಬೆಂಗಳೂರು: ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನ ಪರಿಷ್ಕರಣೆ ವಿಚಾರವಾಗಿ ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದ್ದು, ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ತ್ರಿಪಕ್ಷೀಯ ಸಭೆ ವಿಫಲವಾಗಿದೆ. ಕಾರ್ಖಾನೆ ಮಾಲೀಕರು ನಾ ಕೊಡೆ ಎಂಬ ಹಠಕ್ಕೆ ಬಿದ್ದಿದ್ದರೆ, ಕಾರ್ಮಿಕರು ನಾ ಬಿಡೆ ಎಂಬ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ, ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ತ್ರಿಪಕ್ಷೀಯ ಸಮಿತಿ ಸಭೆ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದ್ದು, ಈಗ ವಿವಾದ ಸರ್ಕಾರದ ಅಂಗಳಕ್ಕೆ ತಲುಪಿದೆ.
ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೆ.5ರಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ತ್ರಿಪಕ್ಷೀಯ ಸಭೆಯ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಸರ್ಕಾರ ಹೇಳಿತ್ತು. ಅದರಂತೆ, ಸೆ.20ರಂದು ಕಾರ್ಮಿಕ ಆಯುಕ್ತ ಕೆ.ಜಿ.ಶಾಂತಾರಾಮ್ ಅಧ್ಯಕ್ಷತೆಯಲ್ಲಿ ಪುನ: ತ್ರಿಪಕ್ಷೀಯ ಸಮಿತಿ ಸಭೆ ನಡೆಯಿತು. ಆದರೆ, ಸೆ.5ರ ಸಭೆಯಲ್ಲಿ ಇಲಾಖೆ ಪ್ರಸ್ತಾಪಿಸಿದ ಕನಿಷ್ಠ ವೇತನವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದು, ಅದಕ್ಕಿಂತ ಹೆಚ್ಚು ವೇತನ ಕೊಡಲು ಸಾಧ್ಯವೇ ಇಲ್ಲ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ.
ಆದರೆ, ರಾಜ್ಯದ 75ಕ್ಕೂ ಅಧಿಸೂಚಿತ ಉದ್ದಿಮೆಗಳಿಗೆ ನಿಗದಿಪಡಿಸಲಾಗಿರುವ ಕನಿಷ್ಠ ವೇತನವನ್ನು ಗಾರ್ಮೆಂಟ್ಸ್ ಉದ್ದಿಮೆಗೂ ನಿಗದಿಪಡಿಸಬೇಕು ಎಂದು ಗಾರ್ಮೆಂಟ್ಸ್ ನೌಕರರ ಪರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಟ್ಟು ಹಿಡಿದರು. ಹೀಗಾಗಿ, ಸರ್ಕಾರದ ನಿರ್ದೇಶನದಂತೆ ಹಿಂದಿನ ಸಭೆಯ ಪ್ರಸ್ತಾವನೆಯನ್ನು ಮರು ಪರಿಶೀಲಿಸಲು ಕರೆಯಲಾಗಿದ್ದ ತ್ರಿಪಕ್ಷೀಯ ಸಮಿತಿ ಸಭೆಯಲ್ಲಿ ಅಭಿಪ್ರಾಯ ಮಂಡನೆಗೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಯಿತು. ಆದರೆ, ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕ ಪ್ರತಿನಿಧಿಗಳು ತಮ್ಮ, ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಭೆಯಲ್ಲಿ ಸೌಹಾರ್ದಯುತವಾಗಿ ಎಲ್ಲರಿಗೂ ಒಪ್ಪಿಗೆ ಆಗುವಂತಹ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು “ಷರಾ’ ಬರೆದು ಸಭೆಯ ನಡಾವಳಿಗಳನ್ನು ಆಯುಕ್ತರು ಸರ್ಕಾರಕ್ಕೆ ಕಳಿಸಿ ಕೊಟ್ಟಿದ್ದಾರೆ. ಇದೀಗ ಸರ್ಕಾರವೇ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕಿದೆ.
ಉದ್ದಿಮೆ ಮುಚ್ಚಬೇಕಾಗುತ್ತದೆ: ಬೇರೆ ಅಧಿಸೂಚಿತ ಉದ್ದಿಮೆಗಳಿಗೆ ನೀಡುತ್ತಿರುವ ಕನಿಷ್ಠ ವೇತನವನ್ನು ಗಾರ್ಮೆಂಟ್ಸ್ ವಲಯಕ್ಕೂ ನೀಡಿದರೆ, ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಉದ್ದಿಮೆಗಳನ್ನು ಮುಚ್ಚಬೇಕಾಗುತ್ತದೆ. ವೇತನ ನೀಡುವ ಉದ್ದಿಮೆದಾರರ ಸಾಮರ್ಥಯ ಪರಿಗಣಿಸಬೇಕು. ನಷ್ಟದಿಂದ ಕಾರ್ಖಾನೆಗಳು ಮುಚ್ಚಲ್ಪಟ್ಟರೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾದ ವೇತನ ದರಗಳು ಹೆಚ್ಚಾಗಿದ್ದರೂ ಸಹ ಕಾರ್ಮಿಕರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ, ಈಗ ಅದನ್ನೂ ಪರಿಷ್ಕರಿಸಬೇಕು ಎಂದರೆ ಕಷ್ಟ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಖಾನೆ ಮಾಲೀಕರ ಪ್ರತಿನಿಧಿಗಳು ಪ್ರತಿಪಾದಿಸಿದರು.
ಕಾನೂನು ಹೋರಾಟಕ್ಕೆ ಚಿಂತನೆ: ತ್ರಿಪಕ್ಷೀಯ ಸಮಿತಿ ಸಭೆ ಒಮ್ಮತದ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದೆ. ವೇತನ ಹೆಚ್ಚಳಕ್ಕೆ ಕಾರ್ಖಾನೆ ಮಾಲೀಕರು ಒಪ್ಪುತ್ತಿಲ್ಲ. ಕನಿಷ್ಠ ವೇತನ ನಿಗದಿಪಡಿಸುವಾಗ ಉದ್ದಿಮೆದಾರರ ಸಾಮರ್ಥಯದ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಹಲವಾರು ಪ್ರಕರಣಗಳಲ್ಲಿ ಸ್ಪಷ್ಟ ಆದೇಶಗಳನ್ನು ಹೊರಡಿಸಿದೆ. ಬೇರೆ ಅಧಿಸೂಚಿತ ಉದ್ದಿಮೆಗಳ ನೌಕರರಿಗೆ ಸಿಗುತ್ತಿರುವ ಕನಿಷ್ಠ ವೇತನ ಗಾರ್ಮೆಂಟ್ಸ್ ನೌಕರರಿಗೂ ಸಿಗಬೇಕು ಅನ್ನುವುದು ನಮ್ಮ ವಾದ. ಒಮ್ಮತದ ತೀರ್ಮಾನ ಆಗದ ಹಿನ್ನೆಲೆಯಲ್ಲಿ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ಕಾರ್ಮಿಕರ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಸತ್ಯಾನಂದ
“ಉದಯವಾಣಿ’ಗೆ ತಿಳಿಸಿದ್ದಾರೆ.
ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಆಯುಕ್ತರ ಪ್ರಸ್ತಾವನೆ ಸರ್ಕಾರದ ಬಳಿ ಇದೆ. ಈಗ ಸರ್ಕಾರವೇ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದೆ.
-ಕೆ.ಜಿ. ಶಾಂತಾರಾಮ್, ಆಯುಕ್ತರು, ಕಾರ್ಮಿಕ ಇಲಾಖೆ
* ರಫೀಕ್ ಅಹ್ಮದ್