6 -5=2 ಹಾರಾರ್ ಸಿನೆಮಾದ ಮೂಲಕ ಸೂಪರ್ ಸಕ್ಸಸ್ ನಿರ್ದೇಶಕ ಅಶೋಕ್ ಕೆ.ಎಸ್. ಈ ಬಾರಿ “ದಿಯಾ’ ಚಿತ್ರದ ಮೂಲಕ ಟ್ರಾಯಂಗಲ್ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರಂಭದಿಂದಲೇ ಸಹಜತೆಗೆ ತೀರಾ ಸಮೀಪದಲ್ಲಿ ಸಾಗುವ ಸಿನಿಮಾ ಒಂದು ಹಂತದ ಬಳಿಕ ಪ್ರೇಕ್ಷಕನ ಊಹೆಯನ್ನೂ ಮೀರಿ ಚಲಿಸುತ್ತದೆ. ಲೈಫ್ ಈಸ್ ಫುಲ್ ಆಫ್ ಸರ್‌ಪ್ರೈಸ್ ಅನ್ನುವ ಮಾತಿಗೆ ಅನ್ವರ್ಥದಂತಿದೆ ಈ ಸಿನಿಮಾದ ಕಥೆ. ಸಾಮಾನ್ಯ ಕತೆಯನ್ನೇ ಅಸಾಮಾನ್ಯ ಮಟ್ಟಕ್ಕೆರಿಸಿದೆ. “ದಿಯಾ’ ಸಿನೆಮಾದ ಕಥೆ ಮೇಲ್ನೋಟಕ್ಕೆ ಒಂದು ಹೆಣ್ಣುಮಗಳ ಬದುಕಿನ ಪುಟದ ಹಾಗೆ ಕಂಡರೂ ಅದು ಅಷ್ಟೇ ಅಗಿಲ್ಲ. ಬದುಕನ್ನು ಅನೇಕ ಆಯಾಮಗಳಿಂದ ನೋಡುವ ಪ್ರಯತ್ನವನ್ನೂ ಮಾಡುತ್ತದೆ.
ಪ್ರೀತಿ ಇನ್ನೇನು ಸಿಕ್ಕಿಯೇ ಬಿಟ್ಟಿತು ಅನ್ನುವಾಗ ಪ್ರೀತಿಸಿದವ ಇಲ್ಲವಾಗುತ್ತಾನೆ. ಅವನಿಲ್ಲದೇ ಬದುಕಿಲ್ಲ ಎಂದು ನಿಶ್ಚಯಿಸಿ ಸಾಯಲು ಹೊರಟ ದಿಯಾ ಮತ್ತೆ ಬದುಕಿನತ್ತ ಹೊರಳುತ್ತಾಳೆ. ಹೊಸ ಬದುಕು ಚಿಗುರೊಡೆಯುತ್ತದೆ. ಅಲ್ಲೊಬ್ಬ ಗೆಳೆಯ ಸಿಗುತ್ತಾನೆ. ಅವಳ ನೋವಿನ ಆಳವಾದ ಗಾಯಕ್ಕೆ ಮುಲಾಮು ಹಚ್ಚುತ್ತಾನೆ. ಇವರಿಬ್ಬರ ಸ್ನೇಹ ಗಾಢವಾಗಿ ಪ್ರೀತಿಯೂ ಚಿಗುರಿ ಇಬ್ಬರೂ ಮದುವೆಯಾಗಿ ಸುಖವಾಗಿರುತ್ತಾರೆ ಅಂದುಕೊಂಡರೆ ತಪ್ಪಾಗುತ್ತದೆ. ಅಲ್ಲಿ ಮತ್ತೂಂದು ತಿರುವು. ಸತ್ತು ಹೋಗಿದ್ದ ಹಳೇ ಪ್ರೇಮಿ ದಿಢೀರ್ ಪ್ರತ್ಯಕ್ಷನಾಗುತ್ತಾನೆ. ನೀನಿಲ್ಲದೇ ಬದುಕಿಲ್ಲ ಅಂತ ಅವಳನ್ನು ತಬ್ಬಿಕೊಳ್ಳುತ್ತಾನೆ. ದಿಯಾ ಮತ್ತೆ ಆಘಾತ ಮೌನಕ್ಕೆ ಜಾರುತ್ತಾಳೆ.
ಸಂಪೂರ್ಣ ಹೊಸತನದಿಂದ ಕೂಡಿರೋ ರೋಮ್ಯಾಂಟಿಕ್ ಪ್ರೇಮ್ ಕಹಾನಿ ದಿಯಾ ಚಿತ್ರದಲ್ಲಿದೆ. ಚಿತ್ರದ ಮೇಕಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಆಗಾಗ ಚಿತ್ರದಲ್ಲಿ ಬರೋ ಟ್ವಿಸ್ಟ್ ಗಳು ಸಖತ್ ಥ್ರಿಲ್ ನೀಡುತ್ತವೆ. ಯಾವುದೇ ಆಡಂಬರ, ಅಬ್ಬರ ಇಲ್ಲದೆ ಚಿತ್ರ ಸುಂದರವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಕುತೂಹಲದ ಅಂಚಿಗೆ ತೆಗೆದುಕೊಂಡು ಹೊಗುತ್ತದೆ. ದೀಕ್ಷಿತ್, ಪೃಥ್ವಿ ಅಂಬರ್, ದಿಯಾ ಪಾತ್ರದಲ್ಲಿ ಅಭಿನಯಿಸಿರುವ ಖುಷಿ ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.