Advertisement

ಹರಿಣಗಳ ಸರಣಿ ಪರಾಕ್ರಮ

03:45 AM Feb 06, 2017 | Harsha Rao |

ಜೊಹಾನ್ಸ್‌ಬರ್ಗ್‌: ಪ್ರವಾಸಿ ಶ್ರೀಲಂಕಾವನ್ನು ಮೂರನೇ ಏಕದಿನ ಪಂದ್ಯದಲ್ಲೂ ಮಣಿಸಿದ ದಕ್ಷಿಣ ಆಫ್ರಿಕಾ ಸರಣಿಯನ್ನು ವಶಪಡಿಸಿಕೊಂಡಿದೆ. ಜತೆಗೆ ಟೀಮ್‌ ರ್‍ಯಾಂಕಿಂಗ್‌ನಲ್ಲೂ ಅಗ್ರಸ್ಥಾನಿ ಆಸ್ಟ್ರೇಲಿಯಕ್ಕೆ ಸರಿಸಮನಾಗಿ ಕಾಣಿಸಿಕೊಂಡಿದೆ.

Advertisement

“ನ್ಯೂ ವಾಂಡರರ್ ಸ್ಟೇಡಿಯಂ’ನಲ್ಲಿ ಶನಿವಾರ ಅಹರ್ನಿಶಿಯಾಗಿ ನಡೆದ ಮುಖಾಮುಖೀ ಯಲ್ಲಿ ಎಬಿಡಿ ಬಳಗ 108 ಎಸೆತ ಬಾಕಿ ಉಳಿದಿರುವಾಗಲೇ 7 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ 39.2 ಓವರ್‌ಗಳಲ್ಲಿ 163ಕ್ಕೆ ಕುಸಿದರೆ, ದಕ್ಷಿಣ ಆಫ್ರಿಕಾ 32 ಓವರ್‌ಗಳಲ್ಲಿ 3 ವಿಕೆಟಿಗೆ 164 ರನ್‌ ಬಾರಿಸಿ ಸರಣಿ ಗೆಲುವಿನ ಬಾವುಟ ಹಾರಿಸಿತು. ಇದು 2013ರ ಬಳಿಕ ದಕ್ಷಿಣ ಆಫ್ರಿಕಾ ತವರಿನಲ್ಲಿ ಸಾಧಿಸಿದ ಸತತ 7ನೇ 
ಸರಣಿ ಗೆಲುವು.

5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಈಗ 3-0 ಮುನ್ನಡೆಯಲ್ಲಿದೆ. ಉಳಿದೆರಡು ಪಂದ್ಯಗಳು ಕೇಪ್‌ಟೌನ್‌ (ಫೆ. 7) ಹಾಗೂ ಸೆಂಚುರಿಯನ್‌ನಲ್ಲಿ (ಫೆ. 10) ನಡೆಯಲಿವೆ. 

ಲಂಕೆಯ ಕುಸಿತದಲ್ಲಿ ಆಫ್ರಿಕಾದ ಸಾಂ ಕ ಬೌಲಿಂಗ್‌ ದಾಳಿ ಪ್ರಮುಖ ಪಾತ್ರ ವಹಿಸಿತು. ವೇಗಿ ಡೇನ್‌ ಪ್ರಿಟೋರಿಯಸ್‌ 19 ರನ್ನಿಗೆ 3 ವಿಕೆಟ್‌ ಉಡಾಯಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ರಬಾಡ, ಫೆಲುಕ್ವಾಯೊ ಮತ್ತು ತಾಹಿರ್‌ ತಲಾ 2 ವಿಕೆಟ್‌ ಕಿತ್ತರು. 

ಲಂಕೆಗೆ ಡಿಕ್ವೆಲ್ಲ (74) ಮತ್ತು ನಾಯಕ ತರಂಗ (31) ಉತ್ತಮ ಆರಂಭವನ್ನೇ ಒದಗಿಸಿದ್ದರು. 12 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 60 ರನ್‌ ಪೇರಿಸಿದರು. ಆಗ ಲಂಕಾ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ ಈ ಜೋಡಿ ಬೇರ್ಪಟ್ಟಿದ್ದೇ ತಡ, ಲಂಕೆಯ ವಿಕೆಟ್‌ಗಳು ಬಡಬಡನೆ ಬೀಳತೊಡಗಿದವು. ಮತ್ತೆ 103 ರನ್‌ ಸೇರಿಸುವಷ್ಟರಲ್ಲಿ ತಂಡ ಆಲೌಟ್‌ ಆಗಿತ್ತು.

Advertisement

ಚೇಸಿಂಗ್‌ ವೇಳೆ ನಾಯಕ ಡಿ ವಿಲಿಯರ್ ಅಜೇಯ 60 ರನ್‌ ಬಾರಿಸಿದರು (61 ಎಸೆತ, 5 ಬೌಂಡರಿ). ಇವರೊಂದಿಗೆ 28 ರನ್‌ ಮಾಡಿದ ಡ್ಯುಮಿನಿ ನಾಟೌಟ್‌ ಆಗಿ ಉಳಿದರು. ಆಮ್ಲ 34 ರನ್‌, 100ನೇ ಪಂದ್ಯವಾಡಿದ ಡು ಪ್ಲೆಸಿಸ್‌ 24 ರನ್‌ ಮಾಡಿದರು. ಈ ಪಂದ್ಯದ ಏಕೈಕ ಸಿಕ್ಸರ್‌ ಡು ಪ್ಲೆಸಿಸ್‌ ಬ್ಯಾಟಿನಿಂದ ಸಿಡಿಯಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-39.2 ಓವರ್‌ಗಳಲ್ಲಿ 163 (ಡಿಕ್ವೆಲ್ಲ 74, ತರಂಗ 34, ಪ್ರಿಟೋರಿಯಸ್‌ 19ಕ್ಕೆ 3, ತಾಹಿರ್‌ 21ಕ್ಕೆ 2, ಫೆಲುಕ್ವಾಯೊ 26ಕ್ಕೆ 2). ದಕ್ಷಿಣ ಆಫ್ರಿಕಾ-32 ಓವರ್‌ಗಳಲ್ಲಿ 3 ವಿಕೆಟಿಗೆ 164 (ಡಿ ವಿಲಿಯರ್ ಔಟಾಗದೆ 60, ಆಮ್ಲ 34).

ಪಂದ್ಯಶ್ರೇಷ್ಠ: ಡ್ವೇನ್‌ ಪ್ರಿಟೋರಿಯಸ್‌.

Advertisement

Udayavani is now on Telegram. Click here to join our channel and stay updated with the latest news.

Next