Advertisement
ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳಲ್ಲಿ ಬರುವ ಎಲ್ಲ 40 ಮೆಟ್ರೋ ನಿಲ್ದಾಣಗಳಿಗೆ ಬೆಳಗಿನಜಾವ 4ರ ಸುಮಾರಿಗೆ ಏಕಕಾಲದಲ್ಲಿ ತೆರಳಿದ ಕಾರ್ಯಕರ್ತರು, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಇರುವ ಹಿಂದಿ ನಾಮಫಲಕಗಳಿಗೆ ಮಸಿ ಬಳಿದರು. ನಂತರ ಆ ನಾಮಫಲಕಗಳ ಪಕ್ಕದಲ್ಲಿ ಹಿಂದಿ ವಿರೋಧಿ ಕರಪತ್ರಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.
Related Articles
ಸಾಮಾನ್ಯ ವೇಳೆಯಲ್ಲಿ ಮಸಿ ಬಳಿಯಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅವಕಾಶ ನೀಡುವುದಿಲ್ಲ. ಕೆಲವೊಮ್ಮೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ಜನರಿಗೆ ತೊಂದರೆ ಆಗುವ ಸಾಧ್ಯತೆಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದಕ್ಕಾಗಿ ಎರಡು ದಿನಗಳ ತಯಾರಿ ಮಾಡಿಕೊಳ್ಳಲಾಗಿತ್ತು. ಪ್ರತಿ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ತಲಾ 10 ಜನರ ಎರಡು ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ಕರವೇ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ ತಿಳಿಸಿದರು.
Advertisement
ನಸುಕಿನ 4ರ ಸುಮಾರಿಗೆ ಮಸಿ ಬಳಿಯಲಾಗಿದೆ. ಆದರೆ, ಇದಾದ 15-20 ನಿಮಿಷಗಳಲ್ಲಿ ಪೊಲೀಸರು ರಾಸಾಯನಿಕದಿಂದ ಮಸಿಯನ್ನು ತೊಳೆದಿದ್ದಾರೆ. ಈ ಪ್ರಯತ್ನ ನಿರಂತರವಾಗಿರಲಿದೆ. ಮುಂದಿನ ಹೋರಾಟದ ಬಗ್ಗೆ ಇನ್ನೆರಡು ದಿನಗಳಲ್ಲಿ ವೇದಿಕೆ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದೂ ಅವರು ಹೇಳಿದರು. ಈ ಮಧ್ಯೆ ಕೆ.ಆರ್. ಮಾರುಕಟ್ಟೆ ನಿಲ್ದಾಣದ ಬಳಿ ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆಯ 8ರಿಂದ 10 ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು ಎನ್ನಲಾಗಿದೆ.
ಮೆಟ್ರೋ ನಾಮಫಲಕಗಳಿಗೆ ಮಸಿ 6 ಮಂದಿಯ ಸೆರೆ ಬೆಂಗಳೂರು: ಮೆಟ್ರೋ ನಿಲ್ದಾಣದ ನಾಮಫಲಕಗಳಲ್ಲಿ ಹಿಂದಿ ಬರಹಗಳಿಗೆ ಮಸಿ ಬಳಿದ ಪ್ರಕರಣ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡ) ಬಣದ 6 ಮಂದಿ ಕಾರ್ಯಕರ್ತರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ನಾಮಫಲಕಗಳಿಗೆ ಗುರುವಾರ ಬೆಳಗಿನ ಜಾವ 4ರ ಸುಮಾರಿಗೆ ಮಸಿ ಬಳಿಯುತ್ತಿದ್ದಾಗ, ಕರವೇ ಕಾರ್ಯಕರ್ತರಾದ ಮಲ್ಲಿಕಾರ್ಜುನ್, ತ್ಯಾಗರಾಜ್, ಕಿರಣ್‌ಕುಮಾರ್, ರಘು, ಶ್ರೀಧರ್ ಚಂದ್ರು ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಜಾಮೀನಿನ ಆಧಾರದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟ ಮೇಲೆ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪಶ್ಚಿಮ ವಿಭಾಗ ಹಾಗೂ ಉತ್ತರ ವಿಭಾಗದ ಮೆಟ್ರೋ ನಿಲ್ದಾಣದ ನಾಮಫಲಕಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿಯುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ. ಈ ಕಾರ್ಯದಲ್ಲಿ ಪಾಲ್ಗೊಂಡಿದ್ದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.