Advertisement

ಕಾಯಕ ಶ್ರದ್ಧೆ ಸಿದ್ದರಾಮೇಶ್ವರರ ಸಂದೇಶ

12:17 PM Jan 16, 2018 | Team Udayavani |

ಬೀದರ: ತಾವು ಮಾಡುವ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಅನುಸರಿಸಿದಲ್ಲಿ ಆದರ್ಶ ಜೀವನ ನಡೆಸಲು ಸಾಧ್ಯ ಎಂದು ಜಿಪಂ ಅಧ್ಯಕ್ಷೆ
ಭಾರತಬಾಯಿ ಶೇರಿಕಾರ ಕರೆ ನೀಡಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿವಯೋಗಿ ಶಿದ್ಧರಾಮೇಶ್ವರ ಶರಣರು ವಚನಕಾರರಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.

ಸಾವಿರಾರು ವಚನಗಳನ್ನು ರಚಿಸಿರುವ ಇವರು, ತಮ್ಮದೇ ಮಾರ್ಗದ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಕೆರೆ-ಕಟ್ಟೆ, ಬಾವಿಗಳನ್ನು ನಿರ್ಮಿಸಿ ಅನೇಕ ಬಡವರಿಗೆ ಕೆಲಸ ನೀಡಿದ್ದರು. ಅಲ್ಲದೇ ಅನೇಕ ಪವಾಡಗಳ ಮೂಲಕ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ಶಾಸಕರು, ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌ ಮಾತನಾಡಿ, ಪ್ರಕೃತಿ ನಿಯಮದಲ್ಲಿ ಮೇಲು-ಕೀಳುಗಳು ಇರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಮಾನತೆ, ಅನ್ಯೋನ್ಯತೆಯಿಂದ ಜೀವಿಸಬೇಕು ಎನ್ನುವುದು ವಚನಕಾರರ ಆಶಯವಾಗಿತ್ತು. ಅವರ ಚಿಂತನೆಗಳನ್ನು ಎಲ್ಲರೂ ಪಾಲಿಸಬೇಕು. ಹಿಂದುಳಿದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನೆರವಾಗುವಂತೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ಬಡವರು ಇದರ ಸದುಪಯೋಗ ಪಡೆಯಬೇಕು. ತಮ್ಮ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಲು ನೆರವು ನೀಡಬೇಕು ಎಂದು ಸಲಹೆ ನೀಡಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಕರ್ಮದ ತತ್ವದಡಿ ಸಮಾಜದ ಓರೆ-ಕೋರೆಗಳನ್ನು ಸುಧಾರಿಸಲು ಶರಣ ಸಿದ್ಧರಾಮೇಶ್ವರರು ವಚನಗಳ ಮೂಲಕ ಪ್ರಯತ್ನಿಸಿದ್ದರು. ಕರ್ಮಜೀವಿಯಾಗಿ ಸ್ವಾವಲಂಬನೆಯ ಜೀವನ ನಡೆಸುವಂತೆ ಪ್ರೇರಣೆ ನೀಡಿದ್ದ ಇವರು, ಸದೃಢ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅವರ ತತ್ವಾದರ್ಶಗಳನ್ನು ಕೇವಲ ಓದಿಗೆ ಮಾತ್ರ ಸೀಮಿತವಾಗಿಸದೇ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

Advertisement

ನಿವೃತ್ತ ಪ್ರಾಧ್ಯಾಪಕ ಡಾ| ಸೋಮನಾಥ ಎಳವಾರ ವಿಶೇಷ ಉಪನ್ಯಾಸ ನೀಡಿದರು. ಸಮಾಜದ ಮುಖಂಡರಾದ ಮಾಣಿಕರಾವ್‌ ವಾಡೇಕರ್‌, ಗುರುನಾಥ ಪಾಟೀಲ, ಪುಂಡಲೀಕರಾವ್‌ ಲಿಂಗದಳ್ಳಿ ಹಾಗೂ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ಜಿಲ್ಲಾಡಳಿತದಿಂದ ಪ್ರಕಟಿಸಲಾಗಿರುವ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು

ಶಿವಯೋಗಿ ಸಿದ್ಧರಾಮೇಶ್ವರರು ಎಲ್ಲಾ ಯೋಗಗಳಲ್ಲಿಯೂ ಪರಿಣಿತರಾಗಿದ್ದರು. ಸಾಮಾಜಿಕ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದವರು. ಬಸವಣ್ಣನವರ ನಂತರ ಕನ್ನಡದಲ್ಲಿ ಅತಿ ಹೆಚ್ಚು ಶಾಸನಗಳು ಇವರ ಹೆಸರಿನಲ್ಲಿ ದೊರೆತಿವೆ. ಸೊಲ್ಲಾಪುರವನ್ನು ಭೂಕೈಲಾಸವಾಗಿ ಪರಿವರ್ತಿಸಿದ್ದ ಇವರು, ಸ್ವರ್ಗ-ನರಕಗಳ ಬಗ್ಗೆ ಜನರಲ್ಲಿದ್ದ ತಪ್ಪು ನಂಬಿಕೆಗಳನ್ನು ದೂರ ಮಾಡಿ, ಉತ್ತಮ ನಡೆ, ನುಡಿ, ಚಿಂತನೆ ಮತ್ತು ಕರ್ಮಗಳ ಮೂಲಕ ಕೈಲಾಸ ಪಡೆಯಬಹುದೆಂದು ತಮ್ಮ ವಚನಗಳು ಮತ್ತು ಸಾಧನೆಯ ಮೂಲಕ ತೋರಿಸಿಕೊಟ್ಟ ಮಹನೀಯರು.
ಡಾ| ಸೋಮನಾಥ ಎಳವಾರ, ನಿವೃತ್ತ ಪ್ರಾಧ್ಯಾಪಕ.

ವಚನ ಸಾಹಿತ್ಯಕ್ಕೆ ಸಿದ್ಧರಾಮೇಶ್ವರರ ಕೊಡುಗೆ ಅನನ್ಯ
ಬಸವಕಲ್ಯಾಣ: ವಚನ ಸಾಹಿತ್ಯಕ್ಕೆ ಶಿವಯೋಗಿ ಸಿದ್ಧರಾಮೇಶ್ವರರ ಕೊಡುಗೆ ಅನನ್ಯವಾದದ್ದು ಎಂದು ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಹೇಳಿದರು. 

ನಗರದ ಹಳೆ ತಹಶೀಲ್ದಾರ ಕಚೇರಿ ಬಳಿಯ ಸರ್ಕಾರಿ ಸಮುದಾಯ ಭವನದಲ್ಲಿ ರವಿವಾರ ತಾಲೂಕು
ಆಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕದ ಜತೆಗೆ ಸಮಾಜ ಸುಧಾರಣೆಗೆ ಮಹತ್ವ ನೀಡಿದ ದ್ಧರಾಮೇಶ್ವರರು ಎಲ್ಲಕಡೆ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದರು ಎಂದರು. 

ಪರ್ತಾಪೂರ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಶರಣಪ್ಪ ವಾಡೇಕರ್‌ ವಿಶೇಷ ಉಪನ್ಯಾಸ ನೀಡಿ, ಸಿದ್ದರಾಮೇಶ್ವರ
ತತ್ವ-ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಮೀರ ಅಜರಲಿ ನವರಂಗ ಮಾತನಾಡಿದರು. ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಉಪಾಧ್ಯಕ್ಷ ಸಂಗಮೇಶ ಬಿರಾದರ, ನಗರಸಭೆ ಉಪಾಧ್ಯಕ್ಷೆ ಚಮ್ಮಾಬಾಯಿ ಮಾಲಗಾರ,
ತಾಪಂ ಇಒ ವಿಜಯಕುಮಾರ ಮಡ್ಡೆ ಉಪಸ್ಥಿತರಿದ್ದರು. ತಹಸೀಲ್ದಾರ ಜಗನ್ನಾಥರೆಡ್ಡಿ ಸ್ವಾಗತಿಸಿದರು. ಪಶು
ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರನಾಥ ನಿರೂಪಿಸಿದರು.

ಇದಕ್ಕೂ ಮುನ್ನ ನಗರದ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಳೆ ತಹಶೀಲ್ದಾರ ಕಚೇರಿ ವರೆಗೆ ಅಲಂಕೃತ
ವಾಹನದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು. 

ನಗರಸಭೆ ಅಧ್ಯಕ್ಷ ಅಜರಲಿ ನವರಂಗ, ತಹಶೀಲ್ದಾರ ಜಗನ್ನಾಥರೆಡ್ಡಿ, ಬೋವಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಡಾಂಗಡೆ, ಮುಖಂಡ ಯುವರಾಜ ಭೆಂಡೆ, ಪುಷ್ಪರಾಜ ಹಾರಕೂಡೆ, ಸಂಜೀವ ಗಾಯಕವಾಡ, ಸಂಜುಕುಮಾರ ಗೋಡಬೋಲೆ, ಗುಂಡಪ್ಪ ಚವ್ಹಾಣ, ಅಡೆಪ್ಪ ಪವಾರ, ಶಾಮ ಪವಾರ, ವಿಜಯಕುಮಾರ ಜಾಧವ, ಮಾಣಿಕಪ್ಪ ಪವಾರ, ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next