ಹುಮನಾಬಾದ: ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಕ್ರೀಡೆಗೆ ಮಹತ್ವ ನೀಡಬೇಕು. ಕ್ರೀಡೆಗಾಗಿ ಜಿಪಂ ವತಿಯಿಂದ ಎಲ್ಲ ರೀತಿಯ ಸೌಲಭ್ಯ ಹಾಗೂ ಸೌಕರ್ಯಗಳು ಒದಗಿಸುವುದಾಗಿ ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.
ತಾಲೂಕಿನ ಮಾಣಿಕನಗರದ ಮಾಣಿಕಪ್ರಭು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಹುಮನಾಬಾದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳು ಅನುಷ್ಠಾನಗೊಳಿಸಿದೆ. ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸೌಕರ್ಯ ನೀಡುತ್ತಿದೆ. ಕಾರಣ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಯಲ್ಲಿ ಕ್ರೀಡೆಯಲ್ಲಿಯೂ ಭಾಗವಹಿಸಬೇಕು. ಪಾಲಕರು ಮಕ್ಕಳನ್ನು ಕ್ರೀಡೆ ಆಡಲು ಅನುವು ಮಾಡಿಕೊಡಬೇಕು ಎಂದು ಹೇಳಿದರು. ರಾಜ್ಯದಲ್ಲಿ ಸಾಹಿತಿ, ಚಿಂತಕರ ಹತ್ಯೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಅಧಿಕಾರಿಗಳು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮಾಣಿಕ ಪ್ರಭು ಸಂಸ್ಥಾನದ ಆನಂದರಾಜ ಪ್ರಭುಗಳು, ತಹಶೀಲ್ದಾರ ದೇವೆಂದ್ರಪ್ಪ ಪಾಣಿ, ಗ್ರಾಪಂ ಅಧ್ಯಕ್ಷ ಬಸವರಾಜ ಪೊಲೀಸ್‌ಪಾಟೀಲ, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಎಪಿಎಂಸಿ ಅಧ್ಯಕ್ಷ ಡಾ| ಭದ್ರೇಶ ಪಾಟೀಲ, ತಾಪಂ ಉಪಾಧ್ಯಕ್ಷೆ ಸುಗಂಧ ಅಣ್ಣೆಪ್ಪ, ತಾಪಂ ಸದಸ್ಯೆ ಸುಶೀಲಾಬಾಯಿ ತುಂಬಾ, ಸಂಗೀತಾ ಜನ್ನಾ, ಸಲೀಮೋದ್ದಿನ್ ಪಟೇಲ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ, ಮುರುಘೇಂದ್ರ ಸಜ್ಜನಶೆಟ್ಟಿ, ಮಾರುತಿ ಪೂಜಾರಿ, ಶಿವರಾಜ ಮೇತ್ರೆ, ಕ್ಷೇತ್ರ ಸಮನ್ವಯಾಧಿಕಾರಿ ಶಿವಕುಮಾರ ಪಾರಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಓಂಕಾರ ರೋಗನ, ಕಿರಣ ಕುಲಕರ್ಣಿ, ದೈಹಿಕ ಶಿಕ್ಷಣಾಧಿಕಾರಿ ಲಿಂಗರಾಜ ಎಖೇಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ, ಅನಂತರೆಡ್ಡಿ ಇದ್ದರು.