Advertisement

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೆಸ್ಕಾಂ ಕಚೇರಿ ಸ್ಥಳಾಂತರ

09:54 PM May 18, 2020 | Sriram |

ಕಾಪು: ಹಲವು ವರ್ಷಗಳಿಂದ ಹಳೇ ಕಟ್ಟಡದಲ್ಲಿ ಭದ್ರತೆ ರಹಿತವಾಗಿ ಕಾರ್ಯಾಚರಿಸುತ್ತಿದ್ದ ಕಾಪು ಮೆಸ್ಕಾಂನ ಉಪ ವಿಭಾಗ ಕಚೆೇರಿಯ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೋಮವಾರದಿಂದ ಕಾಪು ಪೊಲೀಸ್‌ ಠಾಣೆಯ ಮುಂಭಾಗದಲ್ಲಿರುವ ಶೆಣೈ ಕಾಂಪ್ಲೆಕ್ಸ್‌ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ಚಟುವಟಿಕೆ ಪ್ರಾರಂಭಿಸಿದೆ.

Advertisement

ಕೋವಿಡ್‌  19 ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನ ಕಾರಣದಿಂದಾಗಿ ಸರಳ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ಇರುವ ಹಿನ್ನೆಲೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ, ಮೆಸ್ಕಾಂ ಕಾಪು ಉಪ ವಿಭಾಗ ಕಚೇರಿಯ ಸ್ಥಳಾಂತರ ಪ್ರಕ್ರಿಯೆಯನ್ನು ನೆರವೇರಿಸಲಾಯಿತು.

ಸ್ಥಳಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಮೆಸ್ಕಾಂ ಕಾಪು ಉಪ ವಿಭಾಗ ಕಚೇರಿಯು ಬಂಗ್ಲೆ ಮೈದಾನದ ಇಕ್ಕಟ್ಟಿನ ಕಟ್ಟಡದಲ್ಲಿದ್ದು ಅದನ್ನು ಸ್ಥಳಾಂತರಗೊಳಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಪೇಟೆಯಿಂದ ಹೊರಗೆ ಹೆದ್ದಾರಿ ಬದಿಯಲ್ಲಿ ಇದ್ದ ಉಪ ವಿಭಾಗ ಕಚೇರಿಯು ಇದೀಗ ಪೇಟೆ ಭಾಗಕ್ಕೆ ಸ್ಥಳಾಂತರಗೊಂಡಿದ್ದು ಇದರಿಂದಾಗಿ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹರೀಶ್‌ ಕುಮಾರ್‌ ಮಾತನಾಡಿದರು. ಮೆಸ್ಕಾಂ ಉಡುಪಿ ವಿಭಾಗದ ಸೂಪ ರಿಂಡೆಂಟ್‌ ಎಂಜಿನಿಯರ್‌ ನರಸಿಂಹ ಪಂಡಿತ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ದಿನೇಶ್‌ ಉಪಾಧ್ಯಾಯ, ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ನರಸಿಂಹ, ಲೆಕ್ಕಾಧಿಕಾರಿ ಸತೀಶ್‌ ಪೂಜಾರಿ, ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹರೀಶ್‌ ಕುಮಾರ್‌, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಜೆ.ಪಿ. ರಾಮ, ಗೋಕುಲ್‌ದಾಸ್‌ ಶೆಣೈ, ಪ್ರಭಾಕರ ಶೆಣೈ, ಶ್ರೀಧರ್‌ ಶೆಣೈ, ಪ್ರಸಾದ್‌ ಶೆಣೈ, ವಿದ್ಯುತ್‌ ಗುತ್ತಿಗೆದಾರರು ಉಪಸ್ಥಿತರಿದ್ದರು.

ಉದಯವಾಣಿಯಲ್ಲಿ
ಪ್ರಕಟವಾಗಿತ್ತು ಲೇಖನ
ಕಾಪು ಮೆಸ್ಕಾಂ ಉಪವಿಭಾಗವು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡವು ತೀರ ನಾದುರಸ್ತಿಯಲ್ಲಿದ್ದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದ್ದು ಮೆಸ್ಕಾಂ ಉಪ ವಿಭಾಗಕ್ಕೆ ಹೊಸ ಕಟ್ಟಡದ ಆವಶ್ಯಕತೆಯಿದೆ. ಸರಕಾರದ ಮಟ್ಟದಲ್ಲಿ ಜಮೀನು ನೀಡಿ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳಾಂತರಗೊಳ್ಳಬೇಕಿದೆ. ಅದುವರೆಗೆ ಬೇರೆ ಏನಾದರೂ ವ್ಯವಸ್ಥೆಗಳಾಗಬೇಕಿದೆ. ದಾಖಲೆಗಳು ನೀರಿನಲ್ಲಿ ಒದ್ದೆಯಾಗುತ್ತಿವೆ. ಸಬ್‌ಸ್ಟೇಷನ್‌ ಇಲ್ಲದೇ ವ್ಯವಸ್ಥೆಗಳ ಅವ್ಯವಸ್ಥೆಯ ಆಗರವಾಗಿವೆ ಎಂದು ಉದಯವಾಣಿ ಪತ್ರಿಕೆಯಲ್ಲಿ ವಿಶೇಷ ಲೇಖನವನ್ನೂ ಪ್ರಕಟಿಸಲಾಗಿತ್ತು. ಆ ಬಳಿಕ ಮೆಸ್ಕಾಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೆಸ್ಕಾಂ ಉಪ ವಿಭಾಗ ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆದರೆ ಸರಿಯಾದ ಕಟ್ಟಡದ ವ್ಯವಸ್ಥೆಯಿಲ್ಲದೇ ಸ್ಥಳಾಂತರ ಪ್ರಕ್ರಿಯೆ ವಿಳಂಬವಾಗಿತ್ತು.
          
2 3 ವರ್ಷಗಳಲ್ಲಿ ಪ್ರಯತ್ನ
ಕಾಪು ಮೆಸ್ಕಾಂ ಉಪವಿಭಾಗಕ್ಕೆ ಹೊಸ ಸಬ್‌ಸ್ಟೇಷನ್‌, ಸ್ಟಾಕ್‌ ಯಾರ್ಡ್‌ ಮತ್ತು ಗೋಡೌನ್‌ ಕೂಡ ಅಗತ್ಯವಾಗಿದ್ದು, ಈ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಾಪು ಬಂಗ್ಲೆ ಮೈದಾನದಲ್ಲಿರುವ ಪುರಸಭಾ ಕಟ್ಟಡದ ಬಳಿ ಮಿನಿ ವಿಧಾನಸೌಧ ಮಂಜೂರಾಗಿದ್ದು, ಅದರ ಬಳಿಯಲ್ಲಿ 20 ಸೆಂಟ್ಸ್‌ ಜಮೀನನ್ನು ಮೆಸ್ಕಾಂಗೆ ಮಂಜೂರುಗೊಳಿಸಲು ಜಿಲ್ಲಾಡಳಿತದ ಮೂಲಕವಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2 3 ವರ್ಷಗಳಲ್ಲಿ ಮೆಸ್ಕಾಂ ಉಪವಿಭಾಗ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಪ್ರಯತ್ನಿಸಲಾಗುವುದು.
 ಲಾಲಾಜಿ ಆರ್‌. ಮೆಂಡನ್‌, ಶಾಸಕರು, ಕಾಪು

Advertisement
Advertisement

Udayavani is now on Telegram. Click here to join our channel and stay updated with the latest news.

Next