ಆಧುನಿಕ ಬಸವಣ್ಣನವರ ಕಾಯಕ, ದಾಸೋಹವನ್ನು ಇಡೀ ವಿಶ್ವಕ್ಕೆ ಸಾರಿರುವ ಭಕ್ತರೆಲ್ಲರ ಪಾಲಿನ ನಡೆದಾಡುವ ದೇವರಾಗಿ ಪವಾಡ ಸೃಷ್ಟಿಸಿರುವ ಕರ್ನಾಟಕ ರತ್ನ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ಪುಣ್ಯ ಸ್ಮರಣೆಗೆ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಿ, ಗುರುವಿಗೆ ಭಕ್ತಿನಮನ ಸಲ್ಲಿಸಿದರೆ, ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿ ಅವರು ಭಕ್ತಿ ಭಾವದಿಂದ ಶ್ರೀಗಳ ಗದ್ದುಗೆ ಪೂಜೆ ನೆರೆವೇರಿಸಿ, ನಂತರ ಶ್ರೀಗಳ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇಟ್ಟು ಮಾಡಿದ ಮೆರವಣಿಗೆ ಶ್ರೀ ಮಠದಲ್ಲಿ ಇತಿಹಾಸ ಸೃಷ್ಟಿಸಿತು.
ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷ ನಡೆದಾಡುವ ದೇವರ 11ನೇ ದಿನದ ಪುಣ್ಯ ಸ್ಮರಣೆಯಲ್ಲಿ ಭಕ್ತಿ ಸಂಗಮ ಮೇಳೈಸಿತು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತ ಸಮೂಹ ಶ್ರೀಗಳ ಪುಣ್ಯ ಸ್ಮರಣೆಗೆ ಸೇರಿದ್ದ ಜನಸ್ತೋಮ ಕಂಡು ಪುಳಕಿತರಾದರು. ಸಿದ್ಧಗ ಂಗಾ ಮಠಾಧ್ಯಕ್ಷರು, ಶ್ರೀಗಳ ಅನನ್ಯ ಸೇವೆ ನೆನೆದು ವೇದಿಕೆಯಲ್ಲಿಯೇ ಭಾವುಕರಾದರು. ಬೆಳಗ್ಗೆ ಭಕ್ತಿಯಿಂದ ಶ್ರೀಗಳ ಗದ್ದುಗೆ ಪೂಜೆ ನರವೇರಿಸಿ, ಶ್ರೀಗಳ ಪ್ರೀತಿಗೆ ಪಾತ್ರರಾದರು.
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಗುರುವಾರ ನಡೆದ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾ ಧೀಶರು, ಹರ ಗುರು ಚರಮೂರ್ತಿಗಳು, ಲಕ್ಷಾಂತರ ಭಕ್ತ ಸಮೂಹ ಹಾಗೂ ಅನೇಕ ಗಣ್ಯಾತಿ ಗಣ್ಯರು ಸಾಕ್ಷಿಯಾದರು.
ನಾಡಿನ ಭಕ್ತಾದಿಗಳ ಮನ ಮನೆಗಳ ದೈವಿ ಸ್ವರೂಪವಾಗಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋ ಗಿ ಮಂದಿರದ ಗದ್ದುಗೆಯಲ್ಲಿ ಮುಂಜಾ ನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.
ಹಿರಿಯ ಶ್ರೀಗಳ ಅಪೇಕ್ಷೆಯಂತೆ ನಸುಕಿನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ನಂತರ ಉದ್ದಾನ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬೆಳಗ್ಗೆ 5.30ಕ್ಕೆ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಪೂಜಾ ವಿಧಿ ವಿಧಾನಗಳು ಸಾಂಗೋಪಸಾಂಗವಾಗಿ ನೆರವೇರಿದವು. ಹಲವು ಮಠಾಧೀಶರು, ಹರಗುರುಚರಮೂರ್ತಿಗಳು ಶ್ರೀಗಳ ಗದ್ದುಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಸಿದ್ಧ್ದಲಿಂಗ ಸ್ವಾಮೀಜಿಯವರು ಗದ್ದುಗೆ ಪೂಜೆ ನೆರವೇರಿಸಿದ ಬಳಿಕ ನಾಡಿನ ಮೂಲೆ ಮೂಲೆಗಳಿಂದ ಹರಿದು ಬರುತ್ತಿದ್ದ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಮುಂಜಾನೆ ಯೇ ನಗರದ ವಿವಿಧ ಶಾಲಾ ಮಕ್ಕಳು ಸಮ ವಸ್ತ್ರ ಧರಿಸಿ ಸರದಿಯ ಸಾಲಿನಲ್ಲಿ ಶ್ರೀಗಳ ಗದ್ದು ಗೆ ದರ್ಶನ ಪಡೆದದ್ದು ಗಮನ ಸೆಳೆಯಿತು.
ಸುತ್ತೂರು ಮಠದ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಸಚಿವರಾದ ವಿ. ಸೋಮಣ್ಣ, ಸೊಗಡು ಶಿವಣ್ಣ ಸೇರಿದಂತೆ ಸಚಿವರು, ಶಾಸಕರು ಶಿವ ಯೋಗಿ ಮಂದಿರಕ್ಕೆ ತೆರಳಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
* ಚಿ. ನಿ. ಪುರುಷೋತ್ತಮ್