ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷ ನಡೆದಾಡುವ ದೇವರ ದ್ವಿತೀಯ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಭಕ್ತಿ ಸಂಗಮ ಮೇಳೈ ಸಿತು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತ ಪುಣ್ಯ ಸ್ಮರಣೆಗೆ ಸಾಕ್ಷಿ ಯಾದರು. ಜನಸ್ತೋಮ ಕಂಡು ಪುಳಕಿತರಾದ ಸಿದ್ಧಗಂಗಾ ಮಠಾಧ್ಯಕ್ಷರು, ಶ್ರೀಗಳ ಅನನ್ಯ ಸೇವೆ ನೆನೆದು ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಆಶಿರ್ವದಿಸುತ್ತಿದ್ದಾರೆ ಎನ್ನುವ ಭಾವನೆ ವ್ಯಕ್ತವಾ ಗುತ್ತದೆ ಎಂದಾಗ ಭಕ್ತರು ಹರ್ಷ ವ್ಯಕ್ತಪಡಿಸಿದರು.
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದ ಗಲಕ್ಕೂ ಪ್ರಸಿದ್ಧರಾಗಿ 111 ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿ, ಕಾಯಕ ದಾಸೋಹದ ಮೂಲಕ ಹೆಸರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯ ರಾಗಿ ಜ.21ಕ್ಕೆ ಇಂದಿಗೆ ಎರಡು ವರ್ಷ ಪೂರೈಸುತ್ತಿ ರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ದಲ್ಲಿ ಗುರುವಾರ ನಡೆದ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ 2ನೇ ವರ್ಷದ ಪುಣ್ಯಸಂಸ್ಮರ ಣೋತ್ಸಸವಕ್ಕೆ ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಮಠಾಧೀಶರುಗಳು, ಗಣ್ಯರು ಸಾಕ್ಷಿಯಾದರು.
ನಾಡಿನ ಭಕ್ತಾದಿಗಳ ಮನ ಮನೆಗಳ ದೈವಿ ಸ್ವರೂಪವಾಗಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆ ಯಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಅಷ್ಟೋತ್ತರ, ವೇದಘೋಷ, ಭಜನೆಗಳು ಮೊಳಗಿದವು. ಹಿರಿಯ ಶ್ರೀಗಳ ಅಪೇಕ್ಷೆಯಂತೆ ನಸುಕಿನಲ್ಲಿಯೇ ಇಷ್ಟಲಿಂಗ ಪೂಜೆ ನೆರ ವೇರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ನಂತರ ಶಿವಯೋಗಿ ಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬೆಳಗ್ಗೆ 5.30ಕ್ಕೆ ಶ್ರೀ ಸಿದ್ಧಲಿಂಗ ಸ್ವಾಮೀಜಿ ಯವರ ನೇತೃತ್ವದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಪೂಜೆ ಸಾಂಗೋಪಾಂಗ ವಾಗಿ ನೆರವೇರಿತು. ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಹೂವು ಮತ್ತು ರುದ್ರಾಕ್ಷಿಗಳಿಂದ ಅಲಂಕಾರ ಮಾಡಲಾಗಿತ್ತು ಹಲವು ಮಠಾಧೀಶರುಗಳು, ಹರಗುರುಚರಮೂರ್ತಿಗಳು ಪಾಲ್ಗೊಂಡಿದ್ದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ ಯವರು ಗದ್ದುಗೆ ಪೂಜೆ ನೆರವೇರಿಸಿದ ಬಳಿಕ ಭಕ್ತರಿಗೆ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಬೆಳ್ಳಿ ರಥದಲ್ಲಿ ಮೆರವಣಿಗೆ: ಗದ್ದುಗೆ ಪೂಜೆ ಬಳಿಕ ವಿವಿಧ ಪುಷ್ಪಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದ ಬೆಳ್ಳಿ ರಥದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮೆರವಣಿಗೆಯು ಶಿವ ಯೋಗಿ ಮಂದಿರದ ಮುಂಭಾಗದಿಂದ ಆರಂಭವಾಯಿತು. ಮೆರವಣಿಗೆ ಯಲ್ಲಿ ಪೂರ್ಣಕುಂಭ ಹೊತ್ತ ಸುಮಂಗಲಿಯರೂ ಹೆಜ್ಜೆ ಹಾಕಿದರು. ಮೆರವಣಿಗೆಯು ಸಾಗಿದುದ್ದಕ್ಕೂ ನಡೆದ ವಿವಿಧ ಜಾನಪದ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಮಠದಲ್ಲಿ ನೆರೆದಿದ್ದ ಭಕ್ತರನ್ನು ಆಕರ್ಷಿಸಿತು. ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಲು ಉತ್ತರ ಕರ್ನಾಟಕ ಭಾಗದ ಬಾಗಲ ಕೋಟೆ, ವಿಜಯಪುರ, ಬಳ್ಳಾರಿ, ಯಾದಗಿರಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ರಾತ್ರಿಯೇ ಶ್ರೀಮಠಕ್ಕೆ ಧಾವಿಸಿ ವಾಸ್ತವ್ಯ ಹೂಡಿ, ಶಿವನಾಮ ಸ್ಮರಣೆ, ಭಜನೆಗಳಲ್ಲಿ ತಲ್ಲಿನರಾಗಿದ್ದರು.
ಭಕ್ತರಿಗೆ ದಾಸೋಹ: ಶ್ರೀಕ್ಷೇತ್ರಕ್ಕೆ ಆಗಮಿಸಿದ್ಧ ಸಾವಿ ರಾರು ಭಕ್ತ ಸಮೂಹಕ್ಕೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಶ್ರೀಮಠದ ಭಕ್ತಾದಿ ಗಳು, ಪ್ರಸ್ತುತ ವಿದ್ಯಾರ್ಥಿ ಗಳು, ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾ ಗಿಯೇ ಪುಣ್ಯ ಸ್ಮರಣೆ ಕೈಂಕರ್ಯದಲ್ಲಿ ಟೊಂಕಕಟ್ಟಿ ನಿಂತಿದ್ದರು. ಬೆಳಗಿನ ಉಪಾ ಹಾರಕ್ಕೆ ಕಾರಾ ಪೊಂಗಲ್ ಸಿಹಿ ಪೊಂಗಲ್ ಮದ್ಯಾಹ್ನ ಊಟಕ್ಕೆ ಸಿಹಿ ಬೂಂದಿ, ಖಾರ ಬೂಂದಿ, ಚಿತ್ರಾನ್ನ, ಪಲ್ಯ, ಕೋಸಂಬರಿ, ಅನ್ನ ಸಾಂಬರು, ಪಾಯಸ, ಮಜ್ಜಿಗೆ ಸೇರಿದಂತೆ ದಾಸೋ ಹದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಸಿಕೃಷ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವೀರಾಪುರದಲ್ಲಿ 111 ಅಡಿ ಪುತ್ಥಳಿ ನಿರ್ಮಾಣಕ್ಕೆ ಸಿಎಂ ಚಾಲನೆ: ಡಾ. ಶಿವಕುಮಾರ ಮಹಾಸ್ವಾಮಿಗಳವರ 2ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭದಲ್ಲಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಯವರ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಹುಟ್ಟೂರು ವೀರಾಪುರ ದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 111 ಅಡಿ ಎತ್ತರದ ಪ್ರತಿಮೆ ಮತ್ತು ಗ್ರಾಮದ ಸಮಗ್ರ ಯೋಜನೆಯ 3ಡಿ ಚಿತ್ರವನ್ನು ಅನಾವರಣ ಗೊಳಿಸುವರು.
ಇದನ್ನೂ ಓದಿ:ಮಮತಾಗೆ ಮತ್ತೊಂದು ಹಿನ್ನಡೆ: ಪಶ್ಚಿಮಬಂಗಾಳ ಅರಣ್ಯ ಖಾತೆ ಸಚಿವ ಬ್ಯಾನರ್ಜಿ ರಾಜೀನಾಮೆ
ಭಕ್ತಿಭಾವದಿಂದ ಸಿಎಂ ಗದ್ದುಗೆ ದರ್ಶನ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿ. ಡಾ.ಶ್ರೀ ಶಿವಕುಮಾರ ಸ್ವಾಮಿ ಗದ್ದುಗೆಗೆ ಭಕ್ತಿ ಭಾವದಿಂದ ನಮನ ಸಲ್ಲಿಸಿದರು. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮುಖ್ಯಮಂತ್ರಿಗಳ ಹಣೆಗೆ ವಿಭೂತಿ ಹಚ್ಚಿ ಆಶೀರ್ವದಿಸಿದರು. ಸಿಎಂ ತಮಗೆ ಎದುರಾಗಿರುವ ಸಂಕಷ್ಟಗಳು ನಿವಾರಣೆಯಾಗಲೆಂದು ಶ್ರೀಗಳ ಗದ್ದುಗೆ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದರು.