Advertisement

ಕೀರ್ತನಾರ ಸುಮಧುರ ಕೀರ್ತನೆ

05:53 PM Nov 07, 2019 | mahesh |

ಸಂಗೀತ ಪರಿಷತ್‌ ಮಂಗಳೂರು ಮತ್ತು ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಜೆ.ಬಿ. ಕೀರ್ತನಾ ಭಾರಧ್ವಾಜ್‌ ಅವರ ಸಂಗೀತ ಕಛೇರಿಯನ್ನು ಶಾರದಾ ವಿದ್ಯಾಲಯದಲ್ಲಿ ಅಕ್ಟೋಬರ್‌ ತಿಂಗಳ ಕಾರ್ಯಕ್ರಮದಲ್ಲಿ ಆಯೊಜಿಸಲಾಗಿತ್ತು. ಸುಮಾರು 3 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಆರಂಭದಿಂದ ಅಂತ್ಯದವರೆಗೂ ಆತ್ಮವಿಶ್ವಾಸದಿಂದ ಕೂಡಿದ ಮುಕ್ತ ಕಂಠದ ಘನ ಕಛೇರಿಯನ್ನು ಆಲಿಸುವ ಸೌಭಾಗ್ಯ ರಸಿಕರದಾಯಿತು.

Advertisement

ಕಲ್ಯಾಣಿ ಅಟ್ಟತಾಳ ವರ್ಣ ಸರಾಗವಾಗಿ ಮೂಡಿ ಬಂದು ಅಣ್ಣ ಸ್ವಾಮಿ ಶಾಸ್ತ್ರಿ ಅವರ ಅಸಾವೇರಿ ರಾಗದ ಶ್ರೀ ಕಾಂಚಿ ನಾಯಿಕೆ ಕಛೇರಿಗೆ ಗಟ್ಟಿಯಾದ ಬುನಾದಿ ಎನಿಸಿತು. ಸಾರವತ್ತಾದ ಬಿಲಹರಿಯ ಆಲಾಪನೆ ಉತ್ತಮವಾದ ಸ್ವರ ಕಲ್ಪನೆಗಳೊಂದಿಗೆ ದೀಕ್ಷಿತರ ಕಾಮಾಕ್ಷಿ ಶ್ರೀ ವರಲಕ್ಷ್ಮಿಯನ್ನು ಉತ್ಕೃಷ್ಟವಾಗಿ ಪ್ರಸ್ತುತಪಡಿಸಿದರು.
ಶಾಮಾಶಾಸ್ತ್ರಿಗಳ ಲಲಿತಾ ರಾಗದ ನನು ಬ್ರೋವು ಲಲಿತಾವನ್ನು ಭಾವಪೂರ್ಣವಾಗಿ ಹಾಡಿದ ಕೀರ್ತನಾ, ನಂತರ ಲಘು ಆಲಾಪನೆಯೊಂದಿಗೆ ಮುತ್ತಯ್ಯ ಭಾಗವತರ ಸಾರಂಗ ಮಲ್ಹಾರ್‌ನ ಶ್ರೀ ಮಹಾಬಲಗಿರಿ ನಿವಾಸಿನಿಯ ಸಾರಸಾಕ್ಷಿ ಹರಿಕೇಶ ಮನೋಹರಿಯಲ್ಲಿ ನೆರವಲ್‌ ಮತ್ತು ಸುಂದರ ಸಂಗತಿಗಳಿಂದ ನಿರೂಪಿಸಿ ರಂಜಿಸಿದರು. ಶಾಮಾಶಾಸ್ತ್ರಿಗಳ ಪರಸ್‌ನ ನೀಲಯದಾಕ್ಷಿ ನೀವೆ ಜಗತ್ಸಾಕ್ಷಿಯ ನಂತರ ಎರಡು ಸ್ತರದ ವಿದ್ವತ್‌ಪೂರ್ಣ ಹಂಸಾನಂದಿಯ ರಾಗಸಂಚಾರ, ಆಕರ್ಷಕ ತಾನಂ ಮತ್ತು ಪಲ್ಲವಿ ನಿನ್ನೆ ನಮ್ಮಿತಿ ನೀವೆ ಗತಿ ನೀರಜದಳ ನೇತ್ರೆಯಲ್ಲಿ ಚುರುಕಾದ ನಾಟಕಪ್ರಿಯ, ಚಾರುಕೇಶಿ ಮತ್ತು ಲಲಿತ ರಾಗಮಾಲಿಕೆಗಳ ಪ್ರಸ್ತುತಿ ಅನನ್ಯ ಮತ್ತು ಅನುಕರಣೀಯ.

ಪುರಂದರದಾಸರ ಮುಖಾರಿಯ ಪಾಲಿಸೆಮ್ಮ ಮುದ್ದು ಶಾರದೆ, ಮುತ್ತಯ್ಯ ಭಾಗವತರ ನಿರೋಷ್ಠ ರಾಗದ ರಾಜ ರಾಜ ರಾಧಿತೆ ಹಾಡುಗಳು ನವರಾತ್ರಿಯ ಸಂದರ್ಭದಲ್ಲಿ ಭಕ್ತಿ ಭಾವದಲ್ಲಿ ತೇಲಾಡುವಂತೆ ಮಾಡಿದವು. ಮಧುರೈ ಟಿ ಶ್ರೀನಿವಾಸನ್‌ ಅವರ ಸುರುಟಿ ರಾಗದ ತಿಲ್ಲಾನವನ್ನು ಸುಶ್ರಾವ್ಯವಾಗಿ ಹಾಡಿ ಈ ಕಛೇರಿಯನ್ನು ಸಂಪನ್ನಗೊಳಿಸಿದರು.

ಪಿಟೀಲಿನಲ್ಲಿ ವೈಭವ್‌ ರಮಣಿ ಗಾಯಕರನ್ನು ಸೂಕ್ಷ್ಮವಾಗಿ ಅನುಸರಿಸಿದರೂ ಇನ್ನೂ ಪಕ್ವತೆ ಬೇಕೆನಿಸಿತು. ತುಮಕೂರು ರವಿಶಂಕರ್‌ ಲಯಪೂರ್ಣ ವಾದನದೊಂದಿಗೆ ಮನಗೆದ್ದರು.

ಕೃತಿ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next