Advertisement

ಮಧುರಾನುಭವ ನೀಡಿದ ಮಧುರಾಕೃತಿ

09:28 PM Aug 15, 2019 | mahesh |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಆಕಾಡೆಮಿಯ ಶಶಿಶಂಕರ ಸಭಾಭವನದಲ್ಲಿ ಈ ಬಾರಿಯು ನೃತ್ಯಾಂತರಂಗ ವೇದಿಕೆಯ 74ನೇ ಸಂಚಿಕೆಯಲ್ಲಿ ಮಧುರಾಕೃತಿ ಎಂಬ ಶೀರ್ಷಿಕೆಯಲ್ಲಿ ಮೂಡಿಬಂದ ನೃತ್ಯದ ವಿಷಯ ಶ್ರೀ ಕೃಷ್ಣ ಪರಮಾತ್ಮನದಾಗಿತ್ತು. ವಿ| ಪ್ರೀತಿಕಲಾ ಇವರು ಕೃಷ್ಣನ ವಿವಿಧ ನೃತ್ಯಗಳನ್ನು ಪ್ರಸ್ತುತ ಪಡಿಸಿ ಪ್ರೌಢಿಮೆ ಮೆರೆದರು.

Advertisement

ವಿಶೇಷ ಮತ್ತು ವಿರಳವಾಗಿ ಉಪಯೋಗಿಸಲ್ಪಡುವ ರಾಗವಾದ ಕದ್ಯೋತ್ಕಾಂತಿ ರಾಗ ಮತ್ತು ಭಗವದ್ಗೀತೆಯ ಆಯ್ದ ಅಧ್ಯಾಯದ ಶ್ಲೋಕಕ್ಕೆ ಆರಭಿರಾಗ, ಆದಿತಾಳದಲ್ಲಿ ವಿ| ದೀಪಕ್‌ ಕುಮಾರ್‌ರಿಂದ ಸಂಯೋಜಿಸಲ್ಪಟ್ಟ ಪುಷ್ಪಾಂಜಲಿ ನೃತ್ಯ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತದಂತಿತ್ತು. ಮುಂದಿನ ವರ್ಣದಲ್ಲಿ ಶ್ರೀಕೃಷ್ಣನ ಕೃಷ್ಣಾಷ್ಟೋತ್ತರ ಶತನಾಮಾವಳಿಯ ಆಯ್ದ ಶ್ಲೋಕಗಳಿಗೆ ರೀತಿಗೌಳ ರಾಗ ಹಾಗೂ ಆದಿತಾಳದಲ್ಲಿ ರಚಿಸಲ್ಪಟ್ಟ ಶ್ರೀಕೃಷ್ಣನ ಜನ್ಮದಿಂದ, ಪೂತನಿಯ ಸಂಹಾರ, ಶಕಟಾಸುರ ಮರ್ಧನ ಹಾಗೂ ಗೋವಧ‌ìನಗಿರಿಯನ್ನು ಎತ್ತಿದ ಸನ್ನಿವೇಶ ಸಹಿತ ಗೀತೋಪದೇಶದವರೆಗೂ ಮೂಡಿಬಂದ ವರ್ಣ ಅಮೋಘವಾಗಿತ್ತು. ಮಧುರಾಕೃತಿ ಎಂದು ಕರೆಯಲ್ಪಡುವ ಕೃಷ್ಣನ ತ್ರಿಭಂಗಿ ಎಂಬ ಸ್ಥಾನಕದಲ್ಲಿ ಕಲಾವಿದೆ ಕೃಷ್ಣನನ್ನೇ ಸಾಕ್ಷಾತ್‌ಕರಿಸಿದಂತಿತ್ತು. ವರ್ಣದ ಚಿಟ್ಟೆಸ್ವರದ ಸಾಹಿತ್ಯದಲ್ಲಿ “ತ್ರಿಭಂಗಿ ಮಧುರಾಕೃತಿ’ ಎಂಬ ಸಾಹಿತ್ಯವನ್ನು ಬಳಸಿ ಕಾರ್ಯಕ್ರಮದ ನಾಮ ಶೀರ್ಷಿಕೆಗೆ ಅನ್ವಯವಾಗುವಂತೆ ಸಂಯೋಜಿಸಿದ ರೀತಿ ಗುರುಗಳ ಸೃಜನಶೀಲತೆಯ ಆಳವನ್ನು ಬಿಂಬಿಸಿತು ಹಾಗೂ ತ್ರಿಭಂಗಿಯನ್ನು ಸಾದರಪಡಿಸಿದ ಕಲಾವಿದೆಯ ಪ್ರಾವೀಣ್ಯತೆ ನೃತ್ಯ ಸಂಯೋಜನೆಗೆ ಸಾರ್ಥಕತೆಯನ್ನು ತರುವಂತಿತ್ತು. ವರ್ಣದ ಸಂಪೂರ್ಣ ಚೌಕಟ್ಟಿಗೆ ಒಳಪಟ್ಟು ಅದ್ಭುತ ಜತಿ ಮತ್ತು ಲಯಗಳಿಂದ ಕಲಾ ರಸಿಕರನ್ನು ಹಿಡಿದಿಡುವಲ್ಲಿ ಕಲಾವಿದೆ ಯಶಸ್ವಿಯಾದರು.

ಮೂರನೇ ನೃತ್ಯ ಅತ್ಯಂತ ವಿಶೇಷವಾದ ಅಷ್ಟಪದಿ ಶುದ್ಧಸಾರಂಗರಾಗ, ಮಿಶ್ರಛಾಪುತಾಳದ ಗುರು ಭೃಗಾ ಬೆಸಲ್‌ರಿಂದ ಸಂಯೋಜಿಸಲ್ಪಟ್ಟ ಅಭಿನಯ ಪ್ರಧಾನವಾದ ನೃತ್ಯ. ಕೃಷ್ಣನ ವಿರಹದಿಂದ ಆತನಿಗೆ ಕಾದು ನಂತರ ಆತನನ್ನು ಸೇರುವ ರಾಧೆಯ ಮನಸ್ಥಿತಿಯವರೆಗಿನ ವಿವಿಧ ನಾಯಕಿಯಾವಸ್ಥೆಗಳನ್ನು ಕಲಾವಿದೆ ವ್ಯಕ್ತಪಡಿಸಿದ್ದು ಭಾವುಕರನ್ನಾಗಿಸಿತು. ಕೇವಲ ಅಭಿನಯ ಮಾತ್ರದಿಂದ ಎಲ್ಲಾ ವರ್ಗದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಹ ಕ್ಲಿಷ್ಟಕರವಾದ ಕೆಲಸವನ್ನು ಸುಲಲಿತವಾಗಿ ಮಾಡಿದ ಕಲಾವಿದೆಯ ಪ್ರಬುದ್ಧತೆ ಪ್ರಶಂಶನೀಯ.

ಕೊನೆಯದಾಗಿ ಕೃಷ್ಣನ ವರ್ಣನೆಯ ಸಾಹಿತ್ಯಕ್ಕೆ ಬೇಹಾಗ್‌ರಾಗ-ಆದಿತಾಳದಲ್ಲಿ ಪಾಪನಾಶಮ್‌ ಶಿವನ್‌ ಇವರಿಂದ ರಚಿಸಲ್ಪಟ್ಟ ಅದ್ಭುತವಾದ ತಿಲ್ಲಾನದ ಪ್ರದರ್ಶನ ಉತ್ಕೃಷ್ಟವಾಗಿತ್ತು. ಹಿಮ್ಮೇಳದ ಹಾಡುಗಾರಿಕೆಯಲ್ಲಿ ಕೃಷ್ಣ ಆಚಾರ್‌ ಪಾಣೆಮಂಗಳೂರು ಉತ್ತಮ ನಿರ್ವಹಣೆ ನೀಡಿದರು. ಕಲಾವಿದೆಯ ಮನೋಧರ್ಮಕ್ಕೆ ಅನುಗುಣವಾಗಿ ಕೃಷ್ಣಾಚಾರರು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮೃದಂಗದಲ್ಲಿ ಸಹಕರಿಸಿದ ಚಂದ್ರಶೇಖರ್‌ರವರು ನಿಜವಾದ ಕೇಂದ್ರಬಿಂದು ಎಂದು ಹೇಳಿದರೆ ತಪ್ಪಾಗಲಾರದು. ನಟುವಾಂಗ ಮತ್ತು ಮೃದಂಗದ ಸಮ್ಮಿಲನ ಅತೀ ಮುಖ್ಯವಾಗಿದ್ದು, ಅತಿ ಮಧುರವಾಗಿ ಮೃದಂಗವಾದನದಲ್ಲಿ ಅದ್ಭುತ ಕೈಚಳಕ ತೋರಿದರು. ಕಲಾವಿದೆಯ ನೃತ್ಯಕ್ಕೆ ಮತ್ತಷ್ಟು ಮೆರುಗು ತರುವಲ್ಲಿ ಇವರ ಪಾತ್ರ ಅಪಾರ ಎಂದರೆ ಅತಿಶಯೋಕ್ತಿಯಲ್ಲ.

ಕೊಳಲಿನಲ್ಲಿ ರಾಜಗೋಪಾಲ್‌ ಪಯ್ಯನ್ನೂರು ಆಪ್ಯಾಯಮಾನವಾದ ಕೊಳಲು ವಾದನ ಮಾಡಿ ಮೆರುಗು ನೀಡಿದರು. ವಿಷಯಾಧಾರಿತ ನೃತ್ಯಕ್ಕೆ ಶ್ರೀಕೃಷ್ಣನೇ ಸಂತುಷ್ಟನಾಗಬಹುದೇ ಎಂಬ ರೀತಿಯಲ್ಲಿ ಕೊಳಲು ನುಡಿಸಿದ ಅವರ ಕಲಾಪ್ರೌಢಿಮೆ ಅಮೋಘವಾದದ್ದು. ಸಂಪೂರ್ಣ ಹಿಮ್ಮೇಳವನ್ನು ಲಯಬದ್ಧವಾಗಿ ಕೊಂಡುಹೋಗುವ ಮೂಲಾಧಾರ ನಟುವಾಂಗ ಎಂದರೆ ತಪ್ಪಾಗಲಾರದು. ಅಂತಹ ನಟವಾಂಗದಲ್ಲಿ ವಿ|ದೀಪಕ್‌ ಕುಮಾರ್‌ ಮನೋಜ್ಞವಾಗಿ ಸಹಕರಿಸಿದರು. ಈ ಮಧುರಾಕೃತಿ ಎಂಬ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವ ಮಧುರಾನುಭವವನ್ನು ನೀಡಿತು.

Advertisement

ವಿಕ್ರಮ್‌ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next