Advertisement

ಸಭೆ ಬಹಿಷ್ಕರಿಸಿ ಗ್ರಾಪಂಗೆ ಬೀಗ

05:19 PM Sep 08, 2017 | |

ಜಾಲಹಳ್ಳಿ: ಸಾರ್ವಜನಿಕರ ಹಾಗೂ ಗ್ರಾಪಂ ಸದಸ್ಯರ ಸಮಸ್ಯೆಗಳಿಗೆ ಅಧ್ಯಕ್ಷರು ಮತ್ತು ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಪಂ ಸರ್ವ ಸದಸ್ಯರು ಸಭೆ ಬಹಿಷ್ಕರಿಸಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಪ್ರಸಂಗ ಗುರುವಾರ ಜರುಗಿತು.

Advertisement

ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ರಂಗನಾಥ ಮಕಾಸಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಗ್ರಾಮದಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದ ದುರಸ್ತಿ, 14ನೇ ಹಣಕಾಸು ಯೋಜನೆ, ವಿದ್ಯುತ್‌ ಬಲ್ಬ್, ಇ-ಸ್ವತ್ತು ಸೇರಿದಂತೆ ಹಲವು ಸಮಸ್ಯೆಗಳು ನನೆಗುದಿಗೆ ಬಿದ್ದಿವೆ. ಸಮಸ್ಯೆಗಳಿಗೆ ಅಧ್ಯಕ್ಷರು ಹಾಗೂ ಪಿಡಿಒ ಸರಿಯಾಗಿ ಸ್ಪಂದಿಸುತ್ತಿಲ್ಲ.

ಇದರಿಂದ ಗ್ರಾಪಂ ಸದಸ್ಯರು ವಾರ್ಡ್‌ಗಳಲ್ಲಿ ತಲೆ ಎತ್ತಿ ತಿರುಗಾಡದಂತ ಪರಸ್ಥಿತಿ ನಿರ್ಮಾಣವಾಗಿದೆ. ಮೊದಲು ನನೆಗುದಿಗೆ ಬಿದ್ದ ಸಮಸ್ಯೆಗಳು ಪರಿಹಾರವಾಗಲಿ.

ಅಲ್ಲಿಯವರೆಗೆ ಸಭೆ ನಡೆಸುವುದು ಬೇಡ ಎಂದು ಸರ್ವ ಸದಸ್ಯರು ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒರನ್ನು ಒಳಗಡೆ ಕೂಡಿ
ಹಾಕಿ, ಕಚೇರಿಗೆ ಬೀಗ ಹಾಕಿ ಧರಣಿ ಕುಳಿತರು.

ನೀರು ಶುದ್ಧೀಕರಣ ಘಟಕ ಕೆಟ್ಟು ಎರಡು ತಿಂಗಳಾಗಿದೆ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪಿಸುವ
ಪರಸ್ಥಿತಿ ನಿರ್ಮಾಣವಾಗಿದೆ, 14ನೇ ಹಣಕಾಸು ಯೋಜನೆ ಅನುದಾನ ಬಳಕೆಗೆ ವಿಳಂಬವಾಗುತ್ತಿದೆ. ಸಾರ್ವಜನಿಕರು ಇ-ಸ್ವತ್ತು ದಾಖಲಾತಿ ಪಡೆಯಲು ವರ್ಷದಿಂದ ಗ್ರಾಮ ಪಂಚಾಯಿತಿಗೆ ಅಲೆಯುತ್ತಿದ್ದಾರೆ. ಗ್ರಾಮ ಪಂಚಾಯತಿ ಆಡಳಿತ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಮೇಲಾಧಿಕಾರಿಗಳು ಆಗಮಿಸಿ
ಸಮಸ್ಯೆ ಪರಿಹರಿಸಬೇಕು. ಅಲ್ಲಿಯವರೆಗೆ ಬೀಗ ತೆರೆಯುವುದಿಲ್ಲ ಎಂದು ಸದಸ್ಯರು ಪಟ್ಟುಹಿಡಿದರು.

Advertisement

ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಇಂಜಿನೀಯರಿಂಗ್‌ ಇಲಾಖೆ ಎಇಇ ವೆಂಕಟೇಶ ಗಲಗ ಆಗಮಿಸಿ, ಸೆ.19ರೊಳಗೆ
ಸಮಸ್ಯೆಗಳನ್ನು ಪರಿಹರಿಸಿ ಸಾಮಾನ್ಯ ಸಭೆ ನಡೆಸುವ ಭರವಸೆ ನೀಡಿದ ನಂತರ ಸದಸ್ಯರು ಪ್ರತಿಭಟನೆ ಹಿಂಪಡೆದರು. ಗ್ರಾಪಂ ಉಪಾಧ್ಯಕ್ಷೆ ತುಳಜಮ್ಮ, ಗ್ರಾಪಂ ಸದಸ್ಯರಾದ ಕೊಪ್ರೇಶ ದೇಸಾಯಿ, ರಮೇಶ ಅನ್ವರಿ, ನರಸಣ್ಣ ನಾಯಕ, ರಾಮಪ್ಪ ಯಲಗಟ್ಟಿ, ರಂಗಪ್ಪ ಮುರಾಳ, ಖುರ್ಷಿದ ಪಟೇಲ, ಭವಾನಿ ನಾಡಗೌಡ, ದಾಕ್ಷಾಯಿಣಿ
ಬಳೆ, ಮಹೇಶ್ವರಿ ಬಿದರಾಣಿ, ಯಲ್ಲಮ್ಮಸಾಲಿ, ಶಿವಮ್ಮ ಬಿಸಿಲ, ಸರಸ್ವತಿ ತೊಗರಿ,  ಅಮೀನಾಬೇಗಂ ಆರ್ತಿ, ಸೀತಮ್ಮ ಪೂಜಾರಿ, ದ್ಯಾವಮ್ಮ ಕಾಳೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next