Advertisement

ಸಭೆಯಲ್ಲಿ ಪ್ರತಿಧ್ವನಿಸಿದ ಅಕ್ರಮ ಮರಳು ಸಾಗಾಣಿಕೆ

01:23 PM Mar 04, 2017 | Team Udayavani |

ಹೊನ್ನಾಳಿ: ತುಂಗಭದ್ರಾ ನದಿ ತಟದಲ್ಲಿ ನಿರಂತರವಾಗಿ ಮರಳು ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂಬ ವಿಷಯ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಪ್ರತಿಧ್ವನಿಸಿತು.

Advertisement

ಡಿಎಸ್‌ಎಸ್‌ ಮುಖಂಡ ಕೊಡತಾಳು ರುದ್ರೇಶ್‌ ಮಾತನಾಡಿ, ತುಂಗಭದ್ರಾ ನದಿಯಲ್ಲಿ ಮರಳನ್ನು ಬಗೆದು ಇದ್ದಂತವರು ಮತ್ತು ರಾಜಕೀಯ ಪ್ರಭಾವ ಇರುವವರು ಅಕ್ರವಾಗಿ ಈಗಾಗಲೇ ಸಾಗಾಟ ಮಾಡಿದ್ದಾರೆ. ಮನೆ ಮತ್ತು ಶೌಚಾಲಯಗಳನ್ನು ಕಟ್ಟಿಕೊಳ್ಳಲು ಮರಳನ್ನು ಎತ್ತಿನ ಗಾಡಿಯಲ್ಲಿ ತಂದರೆ ಅಂತವರ ಮೇಲೆ ದೂರು ದಾಖಲು ಮಾಡುವ ಪ್ರವೃತ್ತಿ ಬೆಳೆದಿದೆ.

ನದಿಯಲ್ಲಿ ಮರಳನ್ನು ಖಾಲಿ ಮಾಡಿದ ಪ್ರಯುಕ್ತ ಈಗ ಕೇವಲ ಮಣ್ಣು ಬರುತ್ತಿದೆ. ಮರಳು ವಿತರಿಸುವ ನೀತಿ ಅನುಸರಿಸಿ ಟೆಂಡರ್‌ ಏಕೆ ಕರಯುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಎನ್‌.ಜೆ.ನಾಗರಾಜ್‌, ನದಿ ತಟದಲ್ಲಿ 35 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅಕ್ರಮವಾಗಿ ಮರಳು ಸಾಗಾಟ ಯಾರೇ ಮಾಡಲಿ ಅವರ ಮೇಲೆ ಕ್ರಮ ಜರುಗಿಸಲಾಗಿದೆ.

ಅಕ್ರವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳು ಮತ್ತು 9 ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ. ಮುಂದಿನ ಒಂದು ವಾರದೊಳಗೆ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕೊಡತಾಳ ರುದ್ರೇಶ್‌, ಕಂದಾಯ ಇಲಾಖೆಯಲ್ಲಿ ನೌಕರಿ ಮಾಡುತ್ತಿರುವ ವ್ಯಕ್ತಿಯೊಬ್ಬ ಅಕ್ರಮ ಮರಳು ಸಾಗಾಟದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. 

ಎಸ್ಸಿ- ಎಸ್ಟಿ ಜನಾಂಗದವರು ಎತ್ತಿನ ಗಾಡಿಯಲ್ಲಿ ಅಲ್ಪಸ್ವಲ್ಪ ಮರಳು ತೆಗೆದುಕೊಂಡರೆ, ದೂರು ದಾಖಲು ಮಾಡುತ್ತೀರಿ, ದಯಮಾಡಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಮರಳಿನ ವಿಚಾರದಲ್ಲಿ ನಾವು ರಾಜೀ ಆಗುವ ಪ್ರಶ್ನೆ ಇಲ್ಲ. ಎಲ್ಲರಿಗೂ ಮರಳು ಸಿಗಬೇಕು.

Advertisement

ಮರಳು ಸಾಗಾಟದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿದರು. ಯರೇಚಿಕ್ಕನಹಳ್ಳಿಯಲ್ಲಿ 2 ಎಕರೆ ಸರ್ಕಾರಿ ಜಮೀನಿನಲ್ಲಿ ದಲಿತರು ಗುಡಿಸಲು ಹಾಕಿಕೊಂಡು ನೆಲೆ ನಿಂತಿದ್ದಾರೆ. ಅವರಿಗೆ ಇದುವರೆಗೂ ನಿವೇಶನ ಹಕ್ಕುಪತ್ರ ನೀಡಿಲ್ಲ ಎಂದು ಡಿಎಸ್‌ ಎಸ್‌ ಮುಖಂಡ ದಿಡಗೂರು ತಮ್ಮಣ್ಣ ಹೇಳಿದರು. 

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ ಯರೇಚಿಕ್ಕನಹಳ್ಳಿ ಗ್ರಾಮದವರೊಬ್ಬರು 2 ಎಕರೆ ಜಮೀನನ್ನು ದೇವರ ಹೆಸರಿನಲ್ಲಿ ದಾನ ಮಾಡಿದ್ದು ಕಾನೂನಿನ ಪ್ರಕಾರ ದೇವರ ಹೆಸರಿನಲ್ಲಿರುವ ಆಸ್ತಿ ಸರ್ಕಾರದ ಆಸ್ತಿಯಾಗುತ್ತದೆ. ಆ ಜಮೀನು ಸರ್ಕಾರದ ಜಮೀನಾಗಿ ಪರಿವರ್ತನೆಯಾಗಬೇಕು. ಈ ವಿಷಯ ಕೋರ್ಟ್‌ ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿದೆ.

ಪೂರ್ಣ ನಿರ್ಣಯವಾದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಪಂ ಇಒ ಡಾ| ಶಿವಪ್ಪಹುಲಿಕೇರಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ದೊಡ್ಡಬಸಪ್ಪ, ಬಿಇಒ ಜಿ.ಎಸ್‌. ರಾಜಶೇಖರಪ್ಪ, ಬೆಸ್ಕಾಂ ಎಇಇ ಜಯಣ್ಣ, ಡಿಎಸ್‌ಎಸ್‌ ಮುಖಂಡ ಎ.ಡಿ.ಈಶ್ವರಪ್ಪ, ಹಿಂದುಳಿದ ವರ್ಗಗಳ ಅಧಿಕಾರಿ ಹಿರೇಮ, ಎಸ್ಸಿ- ಎಸ್ಟಿ ಮುಖಂಡರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next