ದಾವಣಗೆರೆ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಕೇವಲ ಯಾಂತ್ರಿಕವಾಗಿ ಆಚರಿಸದೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಅಗತ್ಯತೆ ಇದೆ ಎಂದು ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ರಾಜ್ಯ ಕಾರ್ಯದರ್ಶಿ ಎಸ್. ಶೋಭಾ ಅಭಿಪ್ರಾಯಪಟ್ಟಿದ್ದಾರೆ.
ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್), ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾ.ಸ.ಬ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಾವಿರಾರು ಮಹಿಳಾ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಅಹಿರ್ನಿಶಿ ಹೋರಾಟ ನಡೆಸಿದ ಸ್ಮರಣೀಯ ದಿನ. ಹಾಗಾಗಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು. 1917 ರಲ್ಲಿ ರಷ್ಯಾದಲ್ಲಿ ಮಹಾಕ್ರಾಂತಿಯ ನಂತರ ಪ್ರತಿ ಮಹಿಳೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ, ಗೌರವ, ಉದ್ಯೋಗ, ಕ್ರೀಡೆ ಕ್ಷೇತ್ರದಲ್ಲಿ ಸಮಾನ ಅವಕಾಶ ನೀಡಲಾಗಿತ್ತು.
ವೇಶ್ಯಾವಾಟಿಕೆಯನ್ನು ಬುಡ ಸಮೇತ ಕಿತ್ತೂಗೆದ ಜಗತ್ತಿನ ಮೊದಲ ದೇಶವಾಗಿ ಹೊರ ಹೊಮ್ಮಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ಪ್ರತಿಭಟಿಸುವ ಮನೋಭಾವ ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕಿ ಜ್ಯೋತಿ ಕುಕ್ಕುವಾಡ ಮಾತನಾಡಿ, ಈ ಕ್ಷಣಕ್ಕೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಅಶೀಲ ಸಾಹಿತ್ಯ, ಸಿನಿಮಾಗಳ ಕಡಿವಾಣಕ್ಕೆ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ| ಕೆ. ಹನುಮಂತಪ್ಪ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿದ್ದಾರೆ.
ಇನ್ನೂ ಹೆಚ್ಚಿನ ಸ್ಥಾನಮಾನಕ್ಕೆ ಹೋರಾಟ ಅಗತ್ಯ. ಅಂತಹ ಸ್ಫೂರ್ತಿಯುತ ಹೋರಾಟಕ್ಕೆ ಮಹಿಳಾ ದಿನಾಚರಣೆ ಉತ್ತಮ ವೇದಿಕೆಯಾಗಲಿ ಎಂದರು. ಸಂಘಟನೆಯ ಜಿ.ಎಸ್. ಬನಶ್ರೀ, ಸ್ಮಿತಾ, ಭವ್ಯಶ್ರೀ, ಸವಿತಾ ಹಾವೇರಿ ಇತರರು ಇದ್ದರು. ಉಪನ್ಯಾಸಕಿ ಪ್ರೊ. ತಾರಾಮಣಿ ಪ್ರಾಸ್ತಾವಿಕ ಮಾತುಗಳಾಡಿದರು. ಭಾರತಿ ವಂದಿಸಿದರು.