ಬೆಂಗಳೂರು: ಪೋಲಿಯೋ, ದಡಾರ ಮತ್ತು ರುಬೆಲ್ಲಾ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ಭಾನುವಾರ ಆಯೋಜಿಸಿದ್ದ “ಜಾಗೃತಿ ವಾಕಥಾನ್’ಗೆ ಮೇಯರ್ ಗಂಗಾಂಬಿಕೆ ಅವರು ಚಾಲನೆ ನೀಡಿದರು.
ಬಿಬಿಎಂಪಿ ಹಾಗೂ ರೋಟರಿ ಕ್ಲಬ್ ಜಂಟಿಯಾಗಿ ಎಂ.ಜಿ.ರಸ್ತೆ ಬಳಿ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ ನೂರಾರು ಮಂದಿ ಭಾಗವಹಿಸುವ ಮೂಲಕ ಸಾರ್ವಜನಿಕರಿಗೆ ಪೋಲಿಯೋ, ದಡಾರ ಹಾಗೂ ರುಬೆಲ್ಲಾ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಂತರ ಮಾತನಾಡಿದ ಮೇಯರ್ ಗಂಗಾಂಬಿಕೆ, ಪೋಲಿಯೋ, ದಡಾರ ಮತ್ತು ರುಬೆಲ್ಲಾ ಕುರಿತು ನಗರದಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಹಾಗೂ ಬಿಬಿಎಂಪಿ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಇವುಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಾಗಿರುವುದರಿಂದ ಇಂತಹ ಕಾರ್ಯಕ್ರಮಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೋ ಹಾಕಿಸಲು ಮುಂದಾಗಬೇಕು. ಹಾಗೆಯೇ ನಗರವಾಸಿಗಳು ಎಚ್1ಎನ್1 ಸೋಂಕು ಜ್ವರದ ಬಗ್ಗೆಯೂ ಎಚ್ಚರ ವಹಿಸಬೇಕು. ಈಗಾಗಲೇ ಪಾಲಿಕೆಯಿಂದ ಎಚ್1ಎನ್1 ಕುರಿತಂತೆ ಜಾಗೃತಿ ಕಾರ್ಯಕ್ರಮ ಹಾಗೂ ರೋಗ ನಿಯಂತ್ರಣಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಹರಿ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸುವಂತೆ ಸಂಸ್ಥೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಾಗೆಯೇ ದಡಾರ, ರುಬೆಲ್ಲಾ ನಿರ್ಮೂಲನೆಗಾಗಿಯೂ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಎಂ.ಜಿ.ರಸ್ತೆಯಿಂದ ಆರಂಭವಾದ ವಾಕಥಾನ್ ಕಸ್ತೂರಬಾ ರಸ್ತೆ, ಹಡ್ಸನ್ ವೃತ್ತ, ಸಾರ್ವಜನಿಕ ಗ್ರಂಥಾಲಯ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಜಿಪಿಒ, ಮಿನ್ಸ್ ಸ್ಕ್ವೇರ್ ಮೂಲಕ ಕಬ್ಬನ್ ಉದ್ಯಾನದಲ್ಲಿ ಮುಕ್ತಾಯವಾಯಿತು.
ಬಿಬಿಎಂಪಿಯಿಂದ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರೋಟರಿ ಸಂಸ್ಥೆಯ ಸಹಯೋಗದಲ್ಲಿ ಪೋಲಿಯೋ, ದಡಾರ ಹಾಗೂ ರುಬೆಲ್ಲಾ ಸಮಸ್ಯೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು