ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಿಂದ ವೈಟ್‌ಫೀಲ್ಡ್‌ವರೆಗೆ ಸಿಗ್ನಲ್‌ವುುಕ್ತ ಕಾರಿಡಾರ್ ಯೋಜನೆಯಡಿ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಕಳಪೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಗುತ್ತಿಗೆದಾರರಿಗೆ ಐದು ಲಕ್ಷ ರೂ. ದಂಡ ವಿಧಿಸಲು ಸೂಚಿಸಿದ್ದಾರೆ.
ಹಳೆ ಮದ್ರಾಸ್ ರಸ್ತೆಯಿಂದ ವೈಟ್‌ಫೀಲ್ಡ್‌ವರೆಗಿನ 17.5 ಕಿ.ಮೀ. ಉದ್ದದ ಮಾರ್ಗವನ್ನು ಸಿಗ್ನಲ್‌ವುುಕ್ತ ಕಾರಿಡಾರ್‌ಆಗಿ ಪರಿವರ್ತಿಸುವ ಸುಮಾರು 147 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸುವ ವೇಳೆ ಅವರು ಈ ಸೂಚನೆ ನೀಡಿದರು.
ಸಿಗ್ನಲ್‌ವುುಕ್ತ ಕಾರಿಡಾರ್ ಯೋಜನೆಯಡಿ ಈ ಮಾರ್ಗದಲ್ಲಿ ಎರಡು ಅಂಡರ್‌ಪಾಸ್ ಹಾಗೂ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಜತೆಗೆ 17.5 ಕಿ.ಮೀ. ಉದ್ದದ ರಸ್ತೆಯ ಎರಡೂಬದಿ ಪಾದಚಾರಿ ಮಾರ್ಗವನ್ನು ಟೆಂಡರ್‌ಶ್ಯೂರ್ ಮಾದರಿಯಡಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಆದರೆ ಟೆಂಡರ್ ಪಡೆದ ಸಂಸ್ಥೆ ಷರತ್ತಿನ ಪ್ರಕಾರ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸದಿರುವ ಬಗ್ಗೆ ಮೇಯರ್ ತಪಾಸಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು, ಒಎಫ್ಸಿ ಕೇಬಲ್‌ಗಳು ಎಲ್ಲೆಂದರಲ್ಲಿ ನೇತಾಡುವುದನ್ನು ಕಂಡು ಕೋಪಗೊಂಡ ಮೇಯರ್, ಸ್ಥಳದಲ್ಲೇ ಗುತ್ತಿಗೆ ಸಂಸ್ಥೆಗೆ ಐದು ಲಕ್ಷ ರೂ. ದಂಡ ವಿಧಿಸುವಂತೆ ಸೂಚನೆ ನೀಡಿದರು.
ಇದೇ ರಸ್ತೆಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳದ ಗುತ್ತಿಗೆದಾರ ದಿನಕರ್ ಎಂಬುವರಿಗೆ 25 ಸಾವಿರ ರೂ. ದಂಡ ವಿಧಿಸಲು ಸೂಚಿಸಿದರು. ಪಾದಚಾರಿ ಮಾರ್ಗದ ಮೇಲೆ ಕಟ್ಟಡ ನಿರ್ಮಾಣ ಸಾಮಗ್ರಿ ಸುರಿದಿದ್ದ ಬಿಲ್ಡರ್ ಸಂಸ್ಥೆಗೆ 50 ಸಾವಿರ ರೂ. ದಂಡ ವಿಧಿಸುವಂತೆಯೂ ಸೂಚನೆ ನೀಡಿದ ಮೇಯರ್, ಕೂಡಲೇ ಕಟ್ಟಡ ನಿರ್ಮಾಣ ಸಾಮಗ್ರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಜಿ.ಪದ್ಮಾವತಿ, “ಸಿಗ್ನಲ್‌ವುುಕ್ತ ಕಾರಿಡಾರ್ ಯೋಜನೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ಜತೆಗೆ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಹೋಪ್ ಫಾರ್ಮ, ಬಿಗ್‌ಬಜಾರ್ ಮಳಿಗೆ ಜಂಕ್ಷನ್ ಬಳಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಜತೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು,” ಎಂದು ಹೇಳಿದರು.
2.5 ಕಿಮೀ ನಡೆದೇ ಪರಿಶೀಲನೆ
ಇಂದಿರಾನಗರದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ತಪಾಸಣೆ ಆರಂಭಿಸಿದ ಮೇಯರ್, ದೊಮ್ಮಲೂರು ಸಮೀಪದ ಗೋಪಾಲನ್ ಮಾಲ್‌ವರೆಗೆ ಸುಮಾರು 2.5 ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲೇ ತೆರಳಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವೇಳೆ ಲೋಪಗಳು ಕಂಡುಬಂದಾಗ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ನಾಯಕ ಮಹಮದ್ ರಿಜ್ವಾನ್ ಇತರರು ಉಪಸ್ಥಿತರಿದ್ದರು.