Advertisement

ಕಿದ್ವಾಯಿ ಆಸ್ಪತ್ರೆಯಲ್ಲಿ ಶುದ್ಧ ನೀರು ಘಟಕಕ್ಕೆ ಮೇಯರ್‌ ಶಂಕುಸ್ಥಾಪನೆ

12:04 PM Jan 24, 2017 | |

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆವರಣದಲ್ಲಿ ಶುದ್ಧ ನೀರು ಘಟಕ ಮತ್ತು ಮಳೆ ನೀರು ಚರಂಡಿ ಕಾಮಗಾರಿಗೆ ಮೇಯರ್‌ ಜಿ.ಪದ್ಮಾವತಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. 

Advertisement

ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಸಿಫಾನಿ ಮತ್ತು ದಾಘಾ ಬ್ಲಾಕ್‌ ನಿರ್ಮಾಣ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರುಗಾಲುವೆಯ ಪಥ ಬದಲಾವಣೆ ಮಾಡಲಾಗುತ್ತಿದೆ. ಕಟ್ಟಡಕ್ಕೆ ತೊಂದರೆಯಾಗದಂತೆ ಹೊಸ ಪಥ ನಿರ್ಮಾಣ ಮಾಡಲು ಮೇಯರ್‌ ನಿಧಿಯಿಂದ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸುಮಾರು 197 ಮೀಟರ್‌ ಉದ್ದ, 5 ಮೀಟರ್‌ ಅಗಲ ಹಾಗೂ 2.5 ಮೀಟರ್‌ ಎತ್ತರದ ಚರಂಡಿ ನಿರ್ಮಿಸಲಾಗುತ್ತಿದೆ. 

ಈ ವೇಳೆ ಮಾತನಾಡಿದ ಮೇಯರ್‌ ಪದ್ಮಾವತಿ, ಆಸ್ಪತ್ರೆ ನಿಮಾರ್ಣದಂತಹ ಪುಣ್ಯದ ಕೆಲಸಕ್ಕೆ ಚರಂಡಿಯ ಪಥ ಬದಲಿಸುತ್ತಿರುವುದು ಒಳ್ಳೆಯ ಕಾರ್ಯ ಎಂದು ಭಾವಿಸಿದ್ದೇನೆ. ಪಥ ಬದಲಿಸುವುದರಿಂದ ಸಮಸ್ಯೆಯಾಗುವುದಿಲ್ಲ.ರೋಗಿಗಳಿಗೆ ಅನುಕೂಲವಾಗುವ ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಸಿದ್ಧ ಎಂದರು. 

ಆಸ್ಪತ್ರೆಗೆ ಬರುವ ರೋಗಿಗಳು ಬಹುತೇಕ ಬಡವರಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಪ್ರೀತಿಯಿಂದ ಆರೈಕೆ ಮಾಡುವ ಮೂಲಕ ಅವರ ನೋವು ನಿವಾರಿಸಬೇಕು. ಆಸ್ಪತ್ರೆಯು ಬಹಳಷ್ಟು ಬೆಳವಣಿಗೆ ಹೊಂದಿದ್ದು, ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಹೇಳಿದರು.

ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಿತ್ಯ ನೂರಾರು ಹೊಸ ರೋಗಿಗಳು ಹಾಗೂ ಫಾಲೋಆಪ್‌ಗಾಗಿ ಸಾವಿರಾರು ಹಳೆ ರೋಗಿಗಳು ಆಗಮಿಸುತ್ತಾರೆ. ಇವರಲ್ಲದೆ ಸಾವಿರಾರು ಮಂದಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

Advertisement

ವೈದ್ಯರು ಹಾಗೂ ಸಿಬ್ಬಂದಿ ಮತ್ತು ರೋಗಿಗಳನ್ನು ನೋಡಲು ಬರುವವರು ಹೀಗೆ ನಿತ್ಯ ಸಾವಿರಾರು ವಾಹನಗಳು ಆಗಮಿಸುತ್ತವೆ. ಆದರೆ ಅವುಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತ ನಿಲ್ದಾಣ ವ್ಯವಸ್ಥೆ ಕಲ್ಪಿಸಿಕೊಡುಂತೆ ಮನವಿ ಮಾಡಲಾಗಿದೆ ಎಂದರು. ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮಹಮದ್‌ ರಿಜ್ವಾನ್‌, ಬಿಬಿಎಂಪಿ ಸದಸ್ಯೆ ಗಂಗಾಬಿಕಾ ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಡ, ಶ್ರಮಿಕ ವರ್ಗದ ಹಸಿವು ನೀಗಿಸಲು ಬಿಸಿಯೂಟ ಯೋಜನೆ: ಜಿ.ಪದ್ಮಾವತಿ
ಬೆಂಗಳೂರು:
ಬಡ ಶ್ರಮಿಕ ವರ್ಗವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ಸರ್ಕಾರವು ಪೌರಕಾರ್ಮಿಕರಿಗೆ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ ಎಂದು ಮೇಯರ್‌ ಜಿ. ಪದ್ಮಾವತಿ ಹೇಳಿದ್ದಾರೆ.

ಸೋಮವಾರ ನಗರದ ಬೊಮ್ಮನಹಳ್ಳಿ ವಲಯದಲ್ಲಿ ಪೌರಕಾರ್ಮಿಕರಿಗೆ ಬಿಸಿಯೂಟ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ 32 ಸಾವಿರ ಪೌರಕಾರ್ಮಿಕರಿಗೆ ಬಿಸಿಯೂಟ ನೀಡುವ ಉದ್ದೇಶದಿಂದ ಸರ್ಕಾರ ಪಾಲಿಕೆಗೆ ಅನುದಾನ ನೀಡಿದೆ. ಈಗಾಗಲೇ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಯಲಹಂಕ ಸೇರಿದಂತೆ ಹಲವು ವಲಯಗಳಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಇದೀಗ ಬೊಮ್ಮನಹಳ್ಳಿಯಲ್ಲಿ ಚಾಲನೆ ನೀಡಿದ್ದು ಸದ್ಯದಲ್ಲೇ ಎಲ್ಲಾ ಎಂಟೂ ವಲಯಗಳಲ್ಲೂ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ಬೊಮ್ಮನಹಳ್ಳಿಯ 1496 ಪೌರಕಾರ್ಮಿಕರಿಗೆ ಇಸ್ಕಾನ್‌ನಿಂದ ನಿತ್ಯ ಬಿಸಿಯೂಟ ಪೂರೈಕೆಯಾಗಲಿದೆ. ಇದರ ಜತೆಗೆ ಗುತ್ತಿಗೆ ಪೌರಕಾರ್ಮಿಕರ ವೇತನ ಹೆಚ್ಚಳ, ಪ್ರತಿ ಮೂರು ತಿಂಗಳುಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ವೇಳೆ ಶಾಸಕ ಎಂ. ಸತೀಶ್‌ರೆಡ್ಡಿ, ಬೊಮ್ಮನಹಳ್ಳಿ ವಲಯದ ಒಂಬತ್ತು ವಾರ್ಡ್‌ಗಳ ಪಾಲಿಕೆ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next