Advertisement
ಐದೇ ನಿಮಿಷದ ದಾರಿ ಅದು. ಮನೆ ಮನೆಯನ್ನು ಅಂಗಡಿ ಮುಂಗಟ್ಟಿಗೆ ಸೇರಿಸುತ್ತ ಹರಿವ ಮಣ್ಣಿನ ಹಾದಿ. ಅದು ನಮ್ಮಂತ ಅದೆಷ್ಟೋ ದಾರಿಹೋಕರ ಜೀವನದ ಗುಟ್ಟನ್ನು ಬಲ್ಲದು. ಜೀವನದ ಆಗು ಹೋಗುಗಳಿಗೆಲ್ಲಾ ಸಾಕ್ಷಿ ಎಂಬಂತೆ. ತನ್ನ ಒಡಲಲ್ಲಿ ಅದೆಷ್ಟೋ ಕತೆಗಳನ್ನು ಬಚ್ಚಿಟ್ಟುಕೊಂಡೇ ಕಾಡುವ ಹಾದಿಯದು. ಬದಲಾವಣೆಗೆ ಆ ಹಾದಿಯೂ ಹೊರತಾಗಿ ಉಳಿಯಲಿಲ್ಲ. ಮಣ್ಣಿನ ರಸ್ತೆಯಿಂದ ಡಾಂಬರು ರಸ್ತೆಯಾಗಿ ಹಳೆಕತೆಗಳನ್ನು ಹುದುಗಿಸಿ, ತಾನೇ ಒಂದಿಷ್ಟು ಕಥೆಯಾಗುವ ಹಾದಿ. ಹೋಯಿತು. ಈ ದಾರಿಯೇ ಬದಲಾಗಿದೆ ಎಂದಾದರೆ ಮಾನವ ಸುಮ್ಮನಿದ್ದಾನೇ? ಕಾಲ್ನಡಿಗೆಯಲ್ಲಿ ಬರುವವರಿಗಿಂತ ವಾಹನ ಸವಾರರೇ ಹೆಚ್ಚಾದದ್ದು ಬದಲಾವಣೆ ಜಗದ ನಿಯಮವೆಂಬುದನ್ನು ಸಾರುವಂತಿತ್ತು. ಅಮ್ಮ ಅಂಗಡಿಗೋ, ಸಂತೆಗೋ ಹೋಗಿದ್ದಾಗ ಅವಳ ದಾರಿ ಕಾಯುತ್ತಿದ್ದುದು ಕೇವಲ ನೆನಪೀಗ. ಅಟ್ಟದಲ್ಲಿ ಕುಳಿತು ರಸ್ತೆಯಲ್ಲಿ ಹೋಗುವವರ ಮೇಲೆ ಎಸೆಯುತ್ತಿದ್ದ ಒಣ ಹುಲ್ಲುಗಳು ನಾವು ಮಾಡುತ್ತಿದ್ದ ಚೇಷ್ಟೆಯ ಗುರುತಾಗಿತ್ತು.
Related Articles
Advertisement
ಅಪ್ಪ ಬೆಳೆದು ಓಡಾಡಿದ ದಾರಿಯದು, ಅಮ್ಮ ನನ್ನ ಕೈ ಹಿಡಿದು ನಡೆಸಿದ ಹಾದಿಯದು. ಈಗ ಅಪ್ಪನಿಲ್ಲದ ತವರಿಗೆ ನಮ್ಮನ್ನು ಕರೆಯುತ್ತಿರುವ ದಾರಿಯಾಗಿದೆ. ತೀರಾ ಸಲುಗೆಯಲ್ಲಿ ನಮ್ಮದೇ ಮನೆಯ ಜಗುಲಿಯಂತಿದ್ದ ದಾರಿಯೇಕೋ ದಿನೇ ದಿನೇ ಅಪರಿಚಿತವಾಗ ತೊಡಗಿದೆ. ಈಗ ಅದೇ ರಸ್ತೆ ನಾವು ಜೀವಿಸಿದ ಬದುಕನ್ನೋ, ನಾವು ಕಳೆದುಕೊಂಡ ಮುಗ್ಧತೆಯನ್ನೋ ಅಥವಾ ನಾವು ಮರಳಿ ಗಳಿಸಲಾಗದ ಬಾಲ್ಯವನ್ನೋ, ಕಳೆದುಕೊಂಡ ವ್ಯಕ್ತಿಯನ್ನೋ ನೆನಪಿಸಿ, ಅಳಿಸಿ, ಹಂಗಿಸಿ ನಗುತ್ತಿರುವಂತೆ ಭಾಸವಾಗುತ್ತಿದೆ. ಒಂದು ಕಾಲದಲ್ಲಿ ಕಣ್ಣು ಮತ್ತು ಮನಕ್ಕೆ ಇಷ್ಟು ಹತ್ತಿರವಿದೆಯಲ್ಲಾ ಎಂದೆನಿಸುತ್ತಿದ್ದ ರಸ್ತೆ ನೋಡಿದಷ್ಟೂ ದೂರವೆನಿಸುವ, ಮರೀಚಿಕೆಯಾಗಿ ದೆಯಲ್ಲಾ! ಕಾರ್ಟೂನುಗಳಲ್ಲಿ ತೋರಿಸುವಂತೆ ಟೈಂ ಮಷೀನುಗಳಿದ್ದರೆ ಮತ್ತದೇ ದಿನಗಳನ್ನು ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗುತ್ತಿತ್ತೇನೋ? ಇದಕ್ಕೆಲ್ಲ ಉತ್ತರ ಯಾರಲ್ಲಿದೆ? ನಿರ್ಜೀವ ವಸ್ತು ರಸ್ತೆಗೇನು ಗೊತ್ತು ಭಾವದ ಪ್ರಶ್ನೆಗಳಿಗೆ ಉತ್ತರ? ಪ್ರಶ್ನೆ ನನ್ನದೆಂದಾದ ಮೇಲೆ ಉತ್ತರವೂ ನನ್ನಲ್ಲಿಯೇ ಹುಡುಕಬೇಕಿದೆ. ನೆನಪುಗಳ ಮೆರವಣಿಗೆಯ ಆಗಾಗ ಹೊತ್ತು ತರುವ ಈ ಹಾದಿ ಯಾಕೋ ಮತ್ತೆಮತ್ತೆ ಕರೆಯದೆ ಸುಮ್ಮನೆ ಮಲಗಿದೆ.
*ಪ್ರಭಾ ಭಟ್