ಗೋಕಾಕ: 24 ಜನ ಸಂಗಾತಿ ಯೋಧರ ಪ್ರಾಣ ರಕ್ಷಿಸಿ ತನ್ನ ಪ್ರಾಣ ತೆತ್ತ ಹುತಾತ್ಮ ಯೋಧ ಉಮೇಶ ಮಹಾನಿಂಗ ಹೆಳವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಮಧ್ಯಾಹ್ನ ನಗರದ ಸಾರ್ವಜನಿಕ ಸ್ಮಶಾನದಲ್ಲಿ ನೆರವೇರಿತು.
ಸಿಆರ್‌ಪಿಎಫ್‌ನ 143 ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಉಮೇಶ (25) ಅವರು ಶನಿವಾರ ಸಿಬ್ಬಂ ದಿಯೊಂದಿಗೆ ಮಣಿಪುರ ರಾಜ್ಯದ ಇಂಫಾಲ ನಗರ ಸಮಿಪ ಬಸ್‌ನಲ್ಲಿ ತೆರಳುವಾಗ ನಕ್ಸಲರು ಎಸೆದ ಸ್ಫೋಟಗೊಳ್ಳದಿರುವ ಗ್ರೆನೇಡ್ ಹಿಡಿದು ಬಸ್ಸಿನಿಂದ ಹೊರ ಜಿಗಿದು ತನ್ನ 24 ಸಹಚರರ ಪ್ರಾಣ ರಕ್ಷಣೆ ಮಾಡಿದ್ದರು.
ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಬೆಳಗಾವಿಯ ಜಾಂಬೋಟಿಯಲ್ಲಿರುವ ಸಿಆರ್‌ಪಿಎಫ್‌ನ ಬ್ಲಾಕ್ ಕೋಬ್ರಾ ಯುನಿಟ್ ಸಿಬ್ಬಂದಿ ವಾಹನದ ಮೂಲಕ ಗೋಕಾಕ ನಗರಕ್ಕೆ ಸುಮಾರು 11 ಗಂಟೆಗೆ ತೆಗೆದುಕೊಂಡು ಆಗಮಿಸುತ್ತಿದ್ದಂತೆ ನೂರಾರು ಯುವಕರು ಬರಮಾಡಿಕೊಂಡು ಮೃತ ಯೋಧನ ಮನೆಯವರೆಗೆ ಬೈಕ್ ರ್ಯಾಲಿ ನಡೆಸಿದರು. ಸುಮಾರು 11.30ಕ್ಕೆ ಹುತಾತ್ಮ ಯೋಧನ ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಬಂಧು ಬಳಗದ ದುಃಖ ಮೇರೆ ಮೀರಿತ್ತು. ಉಮೇಶ ಹೆಳವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಹಿಂದೂ ವಿಧಿ ವಿಧಾನಗಳ ಪ್ರಕಾರ ಎಕ್ಕೆಗಿಡಕ್ಕೆ ಧಾರೆ ಎರೆದು, ತಾಳಿ ಕಟ್ಟಿಸುವ ಮೂಲಕ ಮದುವೆ ಶಾಸ್ತ್ರ ನೆರವೇರಿಸಲಾಯಿತು.
ದೇಶ ಪ್ರೇಮದ ಹಾಡುಗಳು ಮೊಳಗುತ್ತಿದ್ದಂತೆ ಹುತಾತ್ಮ ಯೋಧ ಉಮೇಶನ ಮನೆಯ ಮುಂದೆ ಸೇರಿದ್ದ ಜನರು ಪುಷ್ಪಾಂಜಲಿ ಸಲ್ಲಿಸಿ ಕಣ್ಣೀರಿಟ್ಟು ಯೋಧನಿಗೆ ಗೌರವ ಸಲ್ಲಿಸಿದರು.
ಯೋಧನ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರು ಯೋಧನ ಮನೆಯೆದುರು ಜಮಾಯಿಸಿದ್ದರು.ನಗರದ ಎನ್‌ಎಸ್‌ಎಫ್ ಆವರಣದ ಹತ್ತಿರವಿರುವ ಸಾರ್ವಜನಿಕ ಸ್ಮಶಾನದಲ್ಲಿ ಮಧ್ಯಾಹ್ನ 3.15ರ ಸುಮಾರಿಗೆ ಅಂತ್ಯ ಸಂಸ್ಕಾರ ನೆರವೇರಿತು.
ಸಿಆರ್‌ಪಿಎಫ್ ಯೋಧರು ಗಾಳಿಯಲ್ಲಿ ಮೂರು ಮೂರು ಸುತ್ತು ಗುಂಡು ಹಾರಿಸಿ ಯೋಧನಿಗೆ ಗೌರವ ಸಲ್ಲಿಸಿದರು. ಶೂನ್ಯ ಸಂಪಾದನಾ ಮಠದ ಮುರಘರಾಜೇಂದ್ರ ಮಹಾಸ್ವಾಮೀಜಿ, ಸಂಸದ ಸುರೇಶ ಅಂಗಡಿ, ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ ಜಾರಕಿಹೊಳಿ, ಬಿಜೆಪಿ ಮುಖಂಡರಾದ ಅಶೋಕ ಪೂಜಾರಿ, ಈರಣ್ಣಾ ಕಡಾಡಿ, ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಕೆಎಸ್‌ಆರ್‌ಟಿಸಿ ಎಂಡಿ ರಾಜೇಂದ್ರ ಚೋಳನ್ ಇತರರು ಯೋಧನ ಅಂತಿಮ ದರ್ಶನ ಪಡೆದರು.