ಹೈದಾರಾಬಾದ್: ಮದುವೆ ಅಂದರೆ ಅಲ್ಲಿ ಸಂಭ್ರಮವಿರುತ್ತದೆ. ಹೆಣ್ಣಿನ ಪೋಷಕರು ತನ್ನ ಮಗಳ ಮದುವೆ ಯಾವುದೇ ತೊಂದರೆ ಇಲ್ಲದೆ ಆಗಲಿಯೆಂದು, ಯಾವ ಅಡೆ ತಡೆ ಇರದ ಹಾಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿರುತ್ತಾರೆ. ಆದರೆ ಇಲ್ಲೊಂದು ಮದುವೆ ಕ್ಷುಲ್ಲಕ ಕಾರಣಕ್ಕೆ ಮುರಿದು ಬಿದ್ದ ಘಟನೆ ನಡೆದಿದೆ.
ತೆಲಂಗಾಣದ ಜಗದ್ಗಿರಿಗುಟ್ಟದಲ್ಲಿ ರಿಂಗ್ಬಸ್ತಿ ಮೂಲದ ಗಂಡು ಹಾಗೂ ಬಿಹಾರದ ಮಾರವಾಡಿ ಸಮುದಾಯದ ಹುಡುಗಿ ನಡುವೆ ಮದುವೆ ನಿಗದಿ ಆಗಿತ್ತು. ಮದುವೆಯ ಒಂದು ದಿನದ ಹೆಣ್ಣಿನ ಕಡೆಯವರು ಗಂಡಿನ ಕಡೆಯ ಆಪ್ತರಿಗೆ ಭಾನುವಾರ (ನ.27 ರಂದು) ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಶಹಪುರನಗರದ ಹಾಲ್ ವೊಂದರಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದು, ಗಂಡಿನ ಕಡೆಯವರು ಊಟಕ್ಕೆ ಬಂದಿದ್ದರು.
ಮಾರವಾಡಿ ಸಮುದಾಯ ಆದ ಕಾರಣ ಹೆಣ್ಣಿನ ಕಡೆಯವರು ಊಟಕ್ಕೆ ಸಸ್ಯಹಾರಿ ಪದಾರ್ಥವನ್ನು ಮಾಡಿದ್ದರು. ಕೆಲವರು ಊಟ ಮಾಡಿದ್ದಾರೆ. ಆದರೆ ಗಂಡಿನ ಸ್ನೇಹಿತರು ಚಿಕನ್ ಯಾಕಿಲ್ಲ. ನಮಗೆ ಚಿಕನ್ ಬೇಕೆಂದು ಹಾಲ್ ನಲ್ಲೇ ರಾದ್ಧಾಂತ ಮಾಡಿ, ತನ್ನ ಸ್ನೇಹಿತನಿಗೆ ( ಮದುವೆ ಗಂಡು) ಹೇಳಿದ್ದಾರೆ. ಊಟ ಮಾಡದೇ ಹಾಗೆಯೇ ಸಿಟ್ಟಿನಲ್ಲಿ ಹೊರ ಹೋಗಿದ್ದಾರೆ.
ಈ ವಿಚಾರ ವರ ಹಾಗೂ ಅವರ ಮನೆಯವರೆಗೆ ಅವಮಾನದಂತಾಗಿತ್ತು. ಹೆಣ್ಣಿನ ಕಡೆಯವರಲ್ಲಿ ಮಾತುಕತೆ ನಡೆಸಿದಾಗ ಅದು ವಿಕೋಪಕ್ಕೆ ತಿರುಗಿದೆ. ನಾನು ಮದುವೆ ಆಗಲ್ಲ ಎಂದು ಹಟ ಹಿಡಿದು, ಹಾಲ್ ನಿಂದ ಹೊರ ಹೋಗಿದ್ದಾನೆ.
ಮರುದಿನ ಮದುವೆ ನಿಗದಿಯಾಗಿದ್ದು, ಗಂಡಿನ ಕಡೆಯವರು ಈ ರೀತಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಮದುವೆಯನ್ನು ರದ್ದು ಮಾಡಿರುವುದರಿಂದ ಹೆಣ್ಣಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಎರಡೂ ಕುಟುಂಬದವನ್ನು ಕೂರಿಸಿಕೊಂಡು, ಸಮಾಧಾನಪಡಿಸಿ, ಮದುವೆಯನ್ನು ನ.30 ರಂದು ( ಬುಧವಾರ) ನಿಗದಿ ಮಾಡಿದ್ದಾರೆ.