ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಜೂನ್ 14ರಂದು ಮುಂಬೈನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಮುಂಬೈ ಪೊಲೀಸರು ಆರಂಭಿಕವಾಗಿ ಇದೊಂದು ಆತ್ಮಹತ್ಯೆ ಎಂದು ತಿಳಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜತೆ ಕಾರ್ಯನಿರ್ವಹಿಸಿದ್ದ ಹಲವಾರು ಮ್ಯಾನೇಜರ್ ಗಳ ಹೆಸರು ಹೊರಗೆ ಬಂದಿತ್ತು. ಈಗಾಗಲೇ ಕೆಲವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಿಹಾರ ಮತ್ತು ಮುಂಬೈ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಮ್ಯಾನೇಜರ್ಸ್ ವಿವರಗಳು ಇಲ್ಲಿವೆ…
ಯಾರೀಕೆ ರೋಹಿಣೆ ಐಯ್ಯರ್:
ರೋಹಿಣಿ ಸುಶಾಂತ್ ಸಿಂಗ್ ನ ಗೆಳತಿ. ಅಷ್ಟೇ ಅಲ್ಲ ಸುಶಾಂತ್ ಸಿಂಗ್ ರಜಪೂತ್ ಪಿಆರ್ (ಪಬ್ಲಿಕ್ ರಿಲೇಷನ್ಸ್) ಆಗಿ ಕೆಲಸ ಮಾಡಿದ್ದಳು. ಸುಶಾಂತ್ ಸಾವಿನ ನಂತರ ಜೂನ್ 15ರಂದು ರೋಹಿಣಿ ಐಯ್ಯರ್ ತನ್ನ ಇನ್ಸ್ ಟಾಗ್ರಾಮ್ ನಲ್ಲಿ ತಮ್ಮಿಬ್ಬರ ಫೋಟೋ ಶೇರ್ ಮಾಡಿ, ನೀನು ಯಾವಾಗಲೂ ನನ್ನ ಜತೆ ಇರುವುದಾಗಿ ಮಾತು ಕೊಟ್ಟಿದ್ದೆ. ಏನೇ ನಾನು ನಗುತ್ತಲೇ ಇರುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಆದರೆ ಈಗ ನಮ್ಮಿಬ್ಬರ ಮಾತುಗಳು ತಪ್ಪಾಗಿಬಿಟ್ಟಿದೆ ಎಂದು ಬರೆದುಕೊಂಡಿದ್ದಳು.
ಸುಶಾಂತ್ ಸಿಂಗ್ ರಜಪೂತ್ ಪ್ರತಿಭೆಯನ್ನು ಗುರುತಿಸುವಲ್ಲಿ ಬಾಲಿವುಡ್ ಯಾಕೆ ವಿಫಲವಾಯಿತು ಎಂದು ಪ್ರಶ್ನಿಸಿದ್ದ ಐಯ್ಯರ್, ಸುಶಾಂತ್ ಸಾವಿನ ನಂತರ ಸರಣಿ ಟ್ವೀಟ್ ಮಾಡಿದ್ದು, ಜನರು ಸುಶಾಂತ್ ಸಾವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಳು.
ಜೂನ್ 22ರಂದು ಬಾಂದ್ರಾ ಪೊಲೀಸ್ ಠಾಣೆಗೆ ಐಯ್ಯರ್ ಬೆಳಗ್ಗೆ 11ಗಂಟೆಗೆ ಆಗಮಿಸಿದ್ದು, ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದರು.
ರಾಧಿಕಾ ನಿಹಾಲಿನಿ:
ಸುಶಾಂತ್ ಸಿಂಗ್ ರಜಪೂತ್ ನ ಮಾಜಿ ಪ್ರಚಾರಕಿ ರಾಧಿಕಾ ನಿಹಾಲಿನಿ. ಈಕೆ ಥಿಂಕ್ ಇಂಕ್ ಎಂಬ ಪಿಆರ್ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆ ಸುಶಾಂತ್ ಪಿಆರ್ ಆಗಿ ಕರ್ತವ್ಯ ನಿರ್ವಹಿಸಿದ್ದಳು.
ಜೂನ್ 18ರಂದು ಮುಂಬೈ ಪೊಲೀಸರು ರಾಧಿಕಾಳನ್ನು ವಿಚಾರಣೆಗೊಳಪಡಿಸಿದ್ದರು. ಇದೇ ದಿನ ಶ್ರುತಿ ಮೋದಿಯನ್ನು ಕೂಡಾ ವಿಚಾರಣೆ ನಡೆಸಿದ್ದರು.
ಶ್ರುತಿ ಮೋದಿ:
ಸುಶಾಂತ್ ಸಿಂಗ್ ರಜಪೂತ್ ವ್ಯವಹಾರವನ್ನು ಶ್ರುತಿ ನೋಡಿಕೊಳ್ಳುತ್ತಿದ್ದು, ಈಕೆ ಸುಶಾಂತ್ ಸಿಂಗ್ ನ ಬ್ಯುಸಿನೆಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಳು.
ಶ್ರುತಿ ಮೋದಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 07, ಆಗಸ್ಟ್ 10 ಹಾಗೂ ಆಗಸ್ಟ್ 11 ಸೇರಿದಂತೆ ಮೂರು ಬಾರಿ ವಿಚಾರಣೆ ನಡೆಸಿದ್ದರು. ಸುಶಾಂತ್ ಸಿಂಗ್ ಜೀವನದಲ್ಲಿ ರಿಯಾ ಆಗಮಿಸಿದ ನಂತರ ಪ್ರತಿಯೊಂದು ನಿರ್ಧಾರವನ್ನು ಆಕೆಯೇ ತೆಗೆದುಕೊಳ್ಳುತ್ತಿದ್ದಳು ಎಂದು ಆಗಸ್ಟ್ 11ರಂದು ತನಿಖೆ ವೇಳೆ ಹೇಳಿಕೆ ನೀಡಿದ್ದಳು. ಜೂನ್ 18ರಂದು ಮುಂಬೈ ಪೊಲೀಸರು ಕೂಡಾ ಶ್ರುತಿಯನ್ನು ವಿಚಾರಣೆಗೊಳಪಡಿಸಿದ್ದರು.
ಶ್ರುತಿ ಮೋದಿ ಕೂಡಾ ರಿಯಾ ಚಕ್ರವರ್ತಿಯ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಳು. ಅಲ್ಲದೇ ಬಿಹಾರ ಪೊಲೀಸರ ಬಳಿ ಸುಶಾಂತ್ ತಂದೆ ದಾಖಲಿಸಿದ್ದ ಎಫ್ ಐಆರ್ ನಲ್ಲಿಯೂ ಶ್ರುತಿ ಮೋದಿ ಹೆಸರಿತ್ತು. 2020ರ ಫೆಬ್ರುವರಿ ನಂತರ ಶ್ರುತಿ ಸುಶಾಂತ್ ಸಂಪರ್ಕದಲ್ಲಿ ಇರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
ಸಿದ್ದಾರ್ಥ ಪಿಥಾನಿ:
ಸುಶಾಂತ್ ಸಿಂಗ್ ರಜಪೂತ್ ಅವರ ಕ್ರಿಯೇಟಿವ್ ಕಂಟೆಂಟ್ ಮ್ಯಾನೇಜರ್ ಆಗಿ ಸಿದ್ದಾರ್ಥ ಪಿಥಾನಿ ಕಾರ್ಯನಿರ್ವಹಿಸುತ್ತಿದ್ದ. ಸುಶಾಂತ್ ಕಂಪನಿಗಾಗಿ ಪಿಥಾನಿ ಗ್ರಾಫಿಕ್ಸ್ ಮಾಡಿಕೊಟ್ಟಿದ್ದರು. ಈ ಕಂಪನಿಯನ್ನು ಸುಶಾಂತ್ ಸಿಂಗ್, ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಸೇರಿ ಆರಂಭಿಸಿದ್ದರು.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಥಾನಿಯನ್ನು ಎರಡು ಬಾರಿ ವಿಚಾರಣೆಗೆ ಗುರಿಪಡಿಸಿದ್ದರು. ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆ ಕೊಡುವಂತೆ ಸುಶಾಂತ್ ಕುಟುಂಬ ಸದಸ್ಯರು ತನ್ನ ಮೇಲೆ ಒತ್ತಡ ಹೇರಿರುವುದಾಗಿ ಪಿಥಾನಿ ಮಾಧ್ಯಮದ ಜತೆ ಮಾತನಾಡುತ್ತ ತಿಳಿಸಿದ್ದರು. ಸುಶಾಂತ್ ಸಿಂಗ್ ಗೆ ನ್ಯಾಯ ಸಿಗಬೇಕಾಗಿದೆ ಎಂದು ಪಿಥಾನಿ ಹೇಳಿದ್ದರು.
ದಿಶಾ ಸಾಲ್ಯಾನ್:
ಕ್ವಾನ್ ಎಂಟರ್ ಟೈನ್ ಮೆಂಟ್ ಹೆಸರಿನ ಸೆಲೆಬ್ರಿಟಿ ಕಂಪನಿಗೆ ದಿಶಾ ಸೇರಿಕೊಂಡಿದ್ದಳು. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಅವರ ಕೆಲಸವನ್ನು ನಿರ್ವಹಿಸಿದ್ದಳು. 2018ರಲ್ಲಿ ಛಿಚೋರೆ ಸಿನಿಮಾ ಸೆಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ದಿಶಾ ಭೇಟಿಯಾಗಿದ್ದಳು. ಅಲ್ಲದೇ ವರುಣ್ ಶರ್ಮಾ ಅವರ ಟ್ಯಾಲೆಂಟ್ ಮ್ಯಾನೇಜರ್ ಆಗಿ ದಿಶಾ ಕೆಲಸ ಮಾಡಿದ್ದಳು, ಅಷ್ಟೇ ಅಲ್ಲ ಸುಶಾಂತ್ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಳು.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೂ ಮುನ್ನ ಜೂನ್ 9ರಂದು ದಿಶಾ ಸಾಲ್ಯಾನ್ ಎತ್ತರದ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು.
ಜಯಂತಿ ಸಾಹಾ:
ಸುಶಾಂತ್ ಸಿಂಗ್ ರಜಪೂತ್ ಟ್ಯಾಲೆಂಟ್ ಮ್ಯಾನೇಜರ್ ಆಗಿ ಜಯಂತಿ ಸಾಹಾ ಕೆಲಸ ಮಾಡಿದ್ದರು. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಖಾತೆಯನ್ನು ನಿರ್ವಹಿಸಿದ್ದರು. ಆಗಸ್ಟ್ 13ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಯಂತಿಯನ್ನು ವಿಚಾರಣೆಗೊಳಪಡಿಸಿದ್ದರು.
ರೇಷ್ಮಾ ಶೆಟ್ಟಿ:
ಟ್ಯಾಲೆಂಟ್ ಮ್ಯಾನೇಜರ್ ರೇಷ್ಮಾ ಶೆಟ್ಟಿ, ಈಕೆ ಬಾಲಿವುಡ್ ನ ಹಲವಾರು ಸೆಲೆಬ್ರಿಟಿಗಳಿಗೆ ಕಾರ್ಯನಿರ್ವಹಿಸಿದ್ದು, ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರಾಗಿದೆ. ಜೂನ್ 10ರಂದು ಮುಂಬೈ ಪೊಲೀಸರು ಈಕೆಯನ್ನು ಐದು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು.