Advertisement

ಮಾವು ಮೇಳಕ್ಕೆ ಇಂದು ತೆರೆ

06:46 AM Jun 24, 2019 | Lakshmi GovindaRaj |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮಾವು ಅಭಿವೃದ್ಧಿ ನಿಗಮ ಆಯೋಜಿಸಿರುವ ಪ್ರಸಕ್ತ ಸಾಲಿನ “ರೈತರ ಮಾವು ಹಾಗೂ ಹಲಸು ಮೇಳ’ಕ್ಕೆ ಸೋಮವಾರ (ಜೂ.24) ತೆರೆ ಬೀಳುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಾವಿನ ವಹಿವಾಟು ಶೇ.40 ರಷ್ಟು ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಹಾಗೂ ಮಾವು ನಿಗಮ ಈ ಮೇಳವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತದೆ.

Advertisement

ಈ ಬಾರಿ ಮೇ 30 ರಿಂದ ಲಾಲ್‌ಬಾಗ್‌ನಲ್ಲಿ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಭಾಗಗಳಿಂದ ಆಯ್ದ 120 ರೈತರು ಭಾಗವಹಿಸಿದ್ದರು. ಮೇಳದಲ್ಲಿ ಸುಮಾರು 900 ಟನ್‌ನಷ್ಟು ಮಾವು ಬಿಕರಿಯಾಗಿ ಅಂದಾಜು 6 ಕೋಟಿ ರೂ. ವಹಿವಾಟು ನಡೆದಿದೆ.

ಇನ್ನು ಕಳೆದ ಬಾರಿಗೆ ಹೋಲಿಸಿದರೆ ಇದರ ಪ್ರಮಾಣ ಸಾಕಷ್ಟು ಕಡಿಮೆ ಇದ್ದು, ಕಳೆದ ಬಾರಿ 1,733 ಟನ್‌ ಮಾವು ಬಿಕರಿಯಾಗಿದ್ದು, 10.4 ಕೋಟಿ ರೂ. ವಹಿವಾಟಾಗಿತ್ತು. “ಕಳೆದ ಬಾರಿ ಮೇಳವು ಜನರ ಉತ್ತಮ ಪ್ರತಿಕ್ರಿಯೆಯಿಂದ ಒಂದು ವಾರ ಹೆಚ್ಚುವರಿಯಾಗಿ ನಡೆದಿತ್ತು ಹಾಗೂ ಈ ಬಾರಿ ಹವಾಮಾನ ವೈಪರಿತ್ಯದಿಂದ ಫ‌ಸಲು ತಡವಾಯಿತು ಜತೆಗೆ ಇಳುವರಿಯು ಕಡಿಮೆಯಾಯಿತು’ ಎನ್ನುತ್ತಾರೆ ಮಾವು ನಿಗಮದ ಅಧಿಕಾರಿಗಳು.

ಇನ್ನು ಲಾಲ್‌ಬಾಗ್‌ ಹೊರತು ಪಡೆಸಿ ಕಬ್ಬನ್‌ ಉದ್ಯಾನದಲ್ಲಿ 2 ಮಳಿಗೆ ಮತ್ತು 6 ಮೆಟ್ರೋ ನಿಲ್ದಾಣಗಳಲ್ಲಿ ಮಾವು ಮಳಿಗೆಯನ್ನು ಹಾಕಲಾಗಿತ್ತು. ಈ ಸಾಲಿನಲ್ಲಿಯೂ ಮ್ಯಾಂಗೋ ಪಿಕ್ಕಿಂಗ್‌ ಟೂರ್‌ ಹಮ್ಮಿಕೊಂಡಿದ್ದು, ಕಳೆದ ಮೂರು ಭಾನುವಾರದಂದು ಒಟ್ಟು 10 ಬಸ್‌ಗಳಲ್ಲಿ 500ಕ್ಕೂ ಹೆಚ್ಚು ಮಾವು ರಸಿಕರನ್ನು ರಾಮನಗರ, ತುಮಕೂರಿನ ತೋಟಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯೂ ಮೂರ್‍ನಾಲ್ಕು ಟನ್‌ಗಳಷ್ಟು ಮಾವು ಖರೀದಿಯಾಗಿವೆ.

ಬಹುರಾಷ್ಟ್ರೀಯ ಕಂಪನಿ ಆವರಣದಲ್ಲೂ ಮಾವು ಮೇಳ: ಇದೇ ಮೊದಲ ಬಾರಿ ವಿಶೇಷವಾಗಿ ನಗರದ ಐದು ಬಹುರಾಷ್ಟ್ರೀಯ ಕಂಪನಿಗಳ ಆವರಣದಲ್ಲಿ ರೈತರ ಮಾವಿನ ಮಳಿಗೆ ಹಾಕಿದ್ದರು. ಅಲ್ಟಿಮೆಟ್ರಿಕ್ಸ್‌, ಲಾಗ್‌ಮಿಇನ್‌ ಸಿಸ್ಟಮ್ಸ್‌, ಇನ್ಫೂಟ್ಸ್‌ ನಂತಹ ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲಕ್ಕೆ ವಾರದಲ್ಲಿ ಒಂದು ಎರಡು ದಿನ ಕಂಪನಿ ಆವರಣದಲ್ಲಿಯೇ ಮಾವು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಬಾದಾಮಿ, ಮಲ್ಲಿಕಾ. ದಶೇರಿ, ಸೆಂಧೂರ ಸೇರಿದಂತೆ ವಿವಿಧ ತಳಿಯ ಮೂರು ಟನ್‌ ಮಾವು ಮಾರಾಟವಾಗಿದ್ದು, ಸುಮಾರು 25 ಲಕ್ಷ ರೂ. ವಹಿವಾಟು ನಡೆದಿದೆ.

Advertisement

ಅಂಚೆ ಸೇವೆಯಲ್ಲಿ 4.5 ಟನ್‌ ಮಾವು ಮಾರಾಟ: ಮಾವು ನಿಗಮ ಅಂಚೆ ಇಲಾಖೆಯೊಂದಿಗೆ ಮಾವು ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, “ಬ್ಯುಸಿನೆಸ್‌ ಪಾರ್ಸೆಲ್‌ ಸರ್ವೀಸ್‌’ ಸೇವೆ ಆರಂಭಿಸಲಾಗಿದೆ. ಮಾವು ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ಲ್ಲೂ ಮಾವು ಖರೀದಿಸಬಹುದಿತ್ತು. ಇಲ್ಲಿ 13 ರೈತರು ನೋಂದಣಿಯಾಗಿದ್ದ, ಅವರು ಬೆಳೆದಿರುವ ವಿವಿಧ ಮಾವುಗಳ ಪಟ್ಟಿ ಲಭ್ಯವಿತ್ತು. ಈ ಅಂಚೆ ಆನ್‌ಲೈನ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಒಟ್ಟು ಈವರೆಗೂ 4.5 ಟನ್‌ ಮಾವು ಈವರೆಗೂ ಮಾರಾಟವಾಗಿದೆ. ಮುಂದಿನ 15 ದಿನಗಳು ಈ ಸೇವೆ ಮುಂದುವರೆಯಲಿದೆ ಎಂದು ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿ 650 ಟನ್‌ ಮಾರಾಟ: ನಗರದ ವಿವಿಧೆಡೆ ಇರುವ 250 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಒಟ್ಟು 650 ಟನ್‌ ಮಾವು ಮಾರಾಟವಾಗಿದೆ. ಮುಂದಿನ ಒಂದು ತಿಂಗಳು ಎಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ಮಾವು ಲಭ್ಯವಿರಲಿದ್ದು, ರಸಾಯನಿಕ ಮುಕ್ತ ಮಾರುಕಟ್ಟೆಗಿಂತ ಕಡಿಮೆ ದರ ಹಾಗೂ ಶೇ.10 ರಷ್ಟು ರಿಯಾಯಿತಿಯಲ್ಲಿ ಮಾವು ಖರೀಸಲು ಹಾಪ್‌ಕಾಮ್ಸ್‌ ಮಳಿಗೆಗೆ ಭೇಟಿನೀಡಬಹುದು.

ಈ ಬಾರಿಯ ಮಾವಿನ ಸುಗ್ಗಿಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ ವರ್ಷ ನಿಫಾ ವೈರಸ್‌ ಎಂದು ಬೆಲೆ ಕುಗ್ಗಿತ್ತು. ಬೇಡಿಕೆ ಇಲ್ಲದೆ ತೋತಾಪರಿ ಕೆ.ಜಿ.ಗೆ 3-4 ರೂ.ಬೆಲೆ ಸಿಕ್ಕಿತ್ತು. ಈಗ 14-15 ರೂ ಇದೆ. ಕಡಿಮೆ ಇಳುವರಿ ಸಿಕ್ಕರು ಉತ್ತಮ ಬೆಲೆಯಿಂದ ರೈತರು ಒಂದಿಷ್ಟು ಖುಷಿಯಾಗಿದ್ದಾರೆ.
-ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್‌

Advertisement

Udayavani is now on Telegram. Click here to join our channel and stay updated with the latest news.

Next