– ಟೈಲರ್ ವೃತ್ತಿಯೇ ಜೀವನಾಧಾರ
Advertisement
ಹರಿಯಾಣ: ಕೈಕಾಲುಗಳಿದ್ದವರೇ ಜೀವನಾಧಾರ ಕೆಲಸಕ್ಕೂ ಆಲಸ್ಯ ತೋರುವುದನ್ನು ನೋಡಿರುತ್ತೇವೆ. ಅಂಥವರ ಮಧ್ಯೆ ಅವರನ್ನೂ ನಾಚಿಸುವಂತೆ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ ಹರ್ಯಾಣದ ಎರಡೂ ಕೈಗಳಿಲ್ಲದ ಮದನ್ ಲಾಲ್! ಹೌದು, 45ರ ಹರೆಯದ ಮದನ್ ಸಾಧನೆ ಪ್ರತಿಯೊಬ್ಬ ವಿಕಲಾಂಗರಿಗೂ ಸ್ಫೂರ್ತಿ. ಯಾವುದೇ ವೃತ್ತಿಪರ ಟೈಲರ್‌ಗೂ ಕಡಿಮೆ ಇಲ್ಲ ಎನ್ನುವಂತೆ ಹೊಲಿಗೆ ಕೆಲಸ ಮಾಡಿಕೊಂಡು ಬಾಳಬಂಡಿ ಸಾಗಿಸುತ್ತಿದ್ದಾರೆ. ಹುಟ್ಟುವಾಗಲೇ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ, ಸ್ವತಂತ್ರ ಬದುಕು ನಡೆಸಬೇಕೆನ್ನುವ ಅವರಲ್ಲಿನ ಛಲದಿಂದ ಇಂದು ಹೊಲಿಗೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಕಾಲುಗಳಿಂದಲೇ ಅಳತೆ ಪಡೆದು, ಕಟಿಂಗ್ ಕೂಡ ಮಾಡಿಕೊಳ್ಳುತ್ತಾರೆ. ಮಹಿಳೆಯರು, ಪುರುಷರು ಹಾಗೂ ಮಕ್ಕಳ ನಿತ್ಯ ಅಗತ್ಯ ಬಟ್ಟೆಗಳನ್ನು ಸಲೀಸಾಗಿ ಹೊಲಿದು ಕೊಡುತ್ತಾರೆ.
ತಮ್ಮೂರಿನಲ್ಲೇ ಚಿಕ್ಕದೊಂದು ಹೊಲಿಗೆ ಅಂಗಡಿ ಮಾಡಿಕೊಂಡಿರುವ ಮದನ್ ಲಾಲ್ ಈ ಬಗ್ಗೆ ಹೇಳುವುದು ಹೀಗೆ- ‘ಅಂಗವೈಕಲ್ಯ ಜೀವನಕ್ಕೆ ಸವಾಲಾಗಲಿದೆ’ ಎಂದನಿಸಿದ ದಿನವೇ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಕೆಲಸ ಕಲಿತುಕೊಳ್ಳುವ ನಿರ್ಧಾರಕ್ಕೆ ಬಂದೆ. ಅದ್ಯಾಕೋ ಹೊಲಿಗೆ ನನ್ನ ಪಾಲಿಗೆ ಸುಲಭ ಅನಿಸಿತು. ಕಾಲುಗಳಿಂದಲೇ ಹೊಲಿಗೆ ಮಾಡಲು ನಿರಂತರ ಅಭ್ಯಾಸ ನಡೆಸಿದೆ. ಈಗ ಅದೇ ಕಾಲುಗಳೇ ಜೀವಾನಾಧಾರ. ಕಾಲುಗಳೂ ಇಲ್ಲದಿರುತ್ತಿದ್ದರೆ ಬದುಕು ದುಸ್ತರವಾಗಿರುತ್ತಿತ್ತು’ ಎನ್ನುತ್ತಾರೆ.
ಛಲದಿಂದಲೇ ಸಾಧನೆಗೈದ ಮದನ್
ವಿಕಲಾಂಗ ಎನ್ನುವ ಕಾರಣಕ್ಕಾಗಿ ಎದುರಿಸಿದ ಸವಾಲುಗಳ ಬಗ್ಗೆ ಮದನ್ ಹೇಳಿಕೊಂಡಿರುವ ಪ್ರಕಾರ, ಶಿಕ್ಷಣ ಪಡೆಯುವ ಹಂಬಲ ಇದ್ದರೂ ಎರಡೂ ಕೈಗಳಿಲ್ಲದ ಕಾರಣ ಶಾಲೆಗಳಲ್ಲಿ ಪ್ರವೇಶವೇ ಸಿಕ್ಕಿರಲಿಲ್ಲ. ಈ ಅನುಭವ ಆದಾಗಲೆಲ್ಲ ಏನಾದರೂ ಸಾಧಿಸಿ ತೋರಿಸಬೇಕು ಎನ್ನುವ ಛಲ ಅವರಲ್ಲಿ ಮೂಡುತ್ತಿತ್ತು. ಸರಕಾರದಿಂದಲೂ ಸಹಾಯ ಸಿಗದು, ಪೋಷಕರು ಏನೂ ಕಲಿಸಲಾರರು ಎಂದು ಅರಿತ ಮದನ್, 23ನೇ ವಯಸ್ಸಿನಲ್ಲಿ ಹೊಲಿಗೆ ಕಲಿತುಕೊಳ್ಳಲು ಸಾಕಷ್ಟು ಟೈಲರ್‌ಗಳನ್ನು ಭೇಟಿ ಮಾಡಿದರು. ಎಲ್ಲರೂ ಕೈಗಳಿಲ್ಲದ ಕಾರಣ ನಿರಾಕರಿಸಿದರು. ಬಳಿಕ ಫತೇಬಾದ್‌ಗೆ ಹೋಗಿ, ‘ಒಂದೇ ಒಂದು ಚಾನ್ಸ್ ಕೊಡಿ’ ಎಂದು ಗೋಗರೆದಿದ್ದಕ್ಕೆ ಓರ್ವ ಟೈಲರ್ ಅವಕಾಶ ನೀಡಿದ್ದು, ಮದನ್ ನನ್ನಿಂದ ಸಾಧ್ಯ ಅನ್ನೋದನ್ನು ತೋರಿಕೊಟ್ಟರು. ಇದರಿಂದ ಟೈಲರ್ ಕೂಡ ಖುಷಿಪಟ್ಟು ಒಂದು ವರ್ಷ ತರಬೇತಿ ನೀಡಿದ್ದಾರೆ. ವಷ್ಯಾಂತ್ಯದಲ್ಲೇ ತಮ್ಮದೇ ಆದ ಒಂದು ಅಂಗಡಿ ತೆರೆದು ಯಶಸ್ವಿಯಾಗಿದ್ದಾರೆ.