ಕೊಳ್ಳಲು ನಡೆಸುತ್ತಿರುವ ದುಸ್ಸಾಹಸಗಳು ಆ ದೇಶವನ್ನು ಬಿಕ್ಕಟ್ಟಿನ ಪ್ರಪಾತಕ್ಕೆ ಕೆಡವಿದೆ. ಸದ್ಯ ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ಅನೇಕ ವಿಪಕ್ಷ ನಾಯಕರ ಸಹಿತ ಹಲವು ಮಂದಿಯನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿದೆ. ಭಾರತದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಉಂಟಾದ ಸ್ಥಿತಿಯೇ ಈಗ ಮಾಲ್ಡೀವ್ಸ್‌ನಲ್ಲಿ ಆಗಿದೆ. ಜನರ ಪ್ರತಿರೋಧದ ಧ್ವನಿಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಇಡೀ ದೇಶ ಅಸಹನೆ ಮತ್ತು ಆಕ್ರೋಶದಿಂದ ಕುದಿಯುತ್ತಿದೆ. ಈ ಸಂದರ್ಭದಲ್ಲಿ ಸ್ವಯಂ ದೇಶಭ್ರಷ್ಟರಾಗಿ ಶ್ರೀಲಂಕಾದಲ್ಲಿ ಆಶ್ರಯ ಪಡೆದಿರುವ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಮಾಲ್ಡೀವ್ಸ್ ಬಿಕ್ಕಟ್ಟು ಬಗೆಹರಿಸಲು ಕೂಡಲೇ ಭಾರತ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಭಾರತದ ಪಾಲಿಗೆ ಇದು ಬಹಳ ನಾಜೂಕಿನ ಸಂದರ್ಭ. ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಾದ ಕ್ರಮ ಮಾತ್ರವಲ್ಲ ಅಪಾಯಕಾರಿ ನಡೆಯೂ ಆಗಬಹುದು. ಅಲ್ಲದೆ ಮಾಲ್ಡೀವ್ಸ್ ವ್ಯೂಹಾತ್ಮಕವಾಗಿಯೂ ಭಾರತಕ್ಕೆ ಬಹಳ ಮುಖ್ಯವಾಗಿರುವ ದೇಶ. ಈ ಕಾರಣಗಳಿಗಾಗಿ ಭಾರತ ಎಚ್ಚರಿಕೆಯ ಹೆಜ್ಜೆಯಿರಿಸುವುದು ಅಗತ್ಯ.
Advertisement
ಹಾಗೆಂದು ಮಾಲ್ಡೀವ್ಸ್‌ನ್ನು ಅದರ ಪಾಡಿಗೆ ಬಿಟ್ಟು ಬಿಡುವಂತೆಯೂ ಇಲ್ಲ. ಹಾಗೆ ಬಿಟ್ಟ ಕೂಡಲೇ ಚೀನ ಅಲ್ಲಿಗೆ ಧಾವಿಸುತ್ತದೆ. ಈಗಾಗಲೇ ಚೀನ ಮತ್ತು ಮಾಲ್ಡೀವ್ಸ್ ನಡುವೆ ವ್ಯಾಪಾರ ವಹಿವಾಟು ಸಂಬಂಧ ಬಹಳ ನಿಕಟವಾಗಿದೆ. ಮಾಲ್ಡೀವ್ಸ್ ಜತೆಗೆ ಚೀನ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ. ಭಾರತಕ್ಕೆ ಹತ್ತಿರವಾಗಿ ಹಿಂದು ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವುದರಿಂದ ಮಾಲ್ಡೀವ್ಸ್‌ನಲ್ಲಿ ತನ್ನದೊಂದು ನೆಲೆ ಸ್ಥಾಪಿಸಿಕೊಳ್ಳಲು ಚೀನ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ಆಂತರಿಕ ಬಿಕ್ಕಟ್ಟಿನ ಲಾಭವೆತ್ತಿಕೊಂಡು ಚೀನ ತನ್ನ ಕಾರ್ಯ ಸಾಧಿಸಿಕೊಂಡರೆ ಭಾರತದ ಬಗಲಿಗೆ ಅಪಾಯ ಬಂದಂತಾಗುತ್ತದೆ. ಯಾವ ಕಾರಣಕ್ಕೂ ಮಾಲ್ಡೀವ್ಸ್ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸಬಾರದು ಎಂದಿರುವ ಚೀನದ ಇಂದಿನ ಹೇಳಿಕೆಯೂ ಈ ದಿಕ್ಕಿನಲ್ಲಿಯೇ ಇದೆ. ಹೀಗಾಗಿಯೇ ಇದೀಗ ಉಭಯ ಸಂಕಟದ ಪರಿಸ್ಥಿತಿಯನ್ನು ಸೃಷ್ಟಿಸಿರುವುದು.
Related Articles
Advertisement
ಜಗತ್ತು ಈ ಹಿಂದೆಯೂ ಅಧಿಕಾರ ಲಾಲಸಿಗಳಾಗಿದ್ದ ಹಲವು ಸರ್ವಾಧಿಕಾರಿಗಳನ್ನು ಕಂಡಿದೆ. ಎಲ್ಲ ಸರ್ವಾಧಿಕಾರಿಗಳ ಅಂತ್ಯವೂ ದುರಂತಮಯವಾಗಿದ್ದರೂ ಸರ್ವಾಧಿಕಾರಿಗಳು ಮಾತ್ರ ಪಾಠ ಕಲಿಯುವುದಿಲ್ಲ ಅಥವಾ ಅಧಿಕಾರದ ಅಮಲು ಅವರಿಗೆ ಪಾಠ ಕಲಿಯಲು ಬಿಡುತ್ತಿಲ್ಲ. ಸದ್ಯಕ್ಕೆ ಯಮೀನ್ ಕೂಡ ಈ ಮಾದರಿಯ ಸರ್ವಾಧಿಕಾರಿಗಳ ಸಾಲಿಗೆ ಸೇರುವ ಲಕ್ಷಣ ಕಾಣಿಸುತ್ತಿದೆ.