Advertisement

ಪ್ರಮುಖ ರಸ್ತೆಗಳಿಗೆ ಬರಲಿವೆ ಸಿಸಿ ಕ್ಯಾಮೆರಾ

06:37 AM Jan 20, 2019 | |

ಬೆಂಗಳೂರು: ರಾಜಧಾನಿಯ ಜನತೆಯ ಸುರಕ್ಷತೆ ಹಾಗೂ ಅಪರಾಧ ಪ್ರಕರಣಗಳ ಪತ್ತೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳ ಪ್ರಮುಖ 460 ಕಡೆಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಪಾಲಿಕೆ ಮುಂದಾಗಿದ್ದು, ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಟೆಂಡರ್‌ ಆಹ್ವಾನಿಸಿದೆ.

Advertisement

ನಾಗರಿಕರ ಸುರಕ್ಷತೆ, ಅಪರಾಧ ಪ್ರಕರಣಗಳ ತಡೆ ಹಾಗೂ ಸಂಚಾರ ದಟ್ಟಣೆ ಪರಿಶೀಲನೆ ಸೇರಿದಂತೆ ಇನ್ನಿತರ ಉದ್ದೇಶಗಳಿಗಾಗಿ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಪಾಲಿಕೆ ಯೋಜನೆ ರೂಪಿಸಿದೆ. ಅದರಂತೆ ಬೆಂಗಳೂರು ನಗರ ಪೊಲೀಸ್‌ ಹಾಗೂ ಸಂಚಾರ ಪೊಲೀಸರ ಸಹಕಾರ ಪಡೆಯಲಾಗಿದ್ದು, ಎಲ್ಲಿ ಕ್ಯಾಮೆರಾ ಅಳವಡಿಸಬೇಕು ಎಂಬುದನ್ನು ಪೊಲೀಸರು ತಿಳಿಸಲಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿ ಅಂದಾಜು 2 ಸಾವಿರ ಕಿ.ಮೀ. ಉದ್ದದ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಿವೆ. ಆದರೆ, ಪ್ರಮುಖ ಜಂಕ್ಷನ್‌ಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಸಿಸಿ  ಕ್ಯಾಮೆರಾಗಳಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನ ಬಳಸಿ ನಗರದ 460 ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲು ಪಾಲಿಕೆ ನಿರ್ಧರಿಸಿದೆ. ಪಾಲಿಕೆಯ ಪ್ರಮುಖ ರಸ್ತೆಗಳು ಸೇರಿದಂತೆ 34 ಪೊಲೀಸ್‌ ಠಾಣೆಗಳು, ಪಾಲಿಕೆ ಕೇಂದ್ರ ಕಚೇರಿ ಹಾಗೂ ಬೆಂಗಳೂರು ಸಂಚಾರ ನಿಯಂತ್ರಣ ಕೊಠಡಿಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಈ ಕ್ಯಾಮೆರಾಗಳು 30 ದಿನಗಳ ದೃಶ್ಯಾವಳಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಲಿದ್ದು, ಯುಪಿಎಸ್‌ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಲಿವೆ. ಸಿಸಿ ಕ್ಯಾಮೆರಾ ಅಳವಡಿಕೆಯ ಜವಾಬ್ದಾರಿ ಪಡೆಯುವ ಗುತ್ತಿಗೆದಾರರು 460 ಕಡೆಗಳಲ್ಲಿ ಕ್ಯಾಮೆರಾ ಅಳವಡಿಕೆ, ನಿರ್ವಹಣೆ ವ್ಯವಸ್ಥೆ ಸೇರಿದಂತೆ ಇತರೆ ಕೆಲಸಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ. ಜತೆಗೆ ಅಳವಡಿಸಿರುವ ಕ್ಯಾಮೆರಾಗಳನ್ನು ಮೂರು ವರ್ಷಗಳ ಕಾಲ ನಿರ್ವಹಿಸಬೇಕಾಗುತ್ತದೆ. 

ನಿರ್ವಹಣಾ ವ್ಯವಸ್ಥೆ ಹೇಗಿರಲಿದೆ?: 460 ಕಡೆ ಅಳವಡಿಸುವ ಸಿಸಿ ಕ್ಯಾಮೆರಾಗಳ ನಿಯಂತ್ರಣ ಹಾಗೂ ಪರಿಶೀಲನೆಗಾಗಿ ಗುತ್ತಿಗೆ ಪಡೆಯುವ ಸಂಸ್ಥೆಗಳೇ ನಿಯಂತ್ರಣ ಕೇಂದ್ರವನ್ನು ನಿರ್ಮಿಸಬೇಕಿದ್ದು, ಅಗತ್ಯ ಸ್ಥಳವನ್ನು ಬಿಬಿಎಂಪಿ ನೀಡಲಿದೆ. ಅದರಂತೆ ಪೊಲೀಸ್‌ ಠಾಣೆಯ ನಿರ್ವಹಣಾ ಕೊಠಡಿ, ಬಿಬಿಎಂಪಿ ನಿರ್ವಹಣಾ ಕೊಠಡಿ ಹಾಗೂ ಸಂಚಾರ ಪೊಲೀಸರ ನಿರ್ವಹಣಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಪರಿಶೀಸಲು ವ್ಯವಸ್ಥೆ ಮಾಡಿಕೊಡಬೇಕಿದೆ. ಇದರೊಂದಿಗೆ ಸಿಸಿ ಕ್ಯಾಮೆರಾಗಳನ್ನು ಹಿರಿಯ ಅಧಿಕಾರಿಗಳು ಮೊಬೈಲ್‌ ಅಥವಾ ಟ್ಯಾಬ್‌ ಮೂಲಕ ಪರಿಶೀಲಿಸುವಂತಹ ತಂತ್ರಜ್ಞಾನವನ್ನು ರೂಪಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next