ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿ ಭಾಗದಲ್ಲಿ ಗ್ರಾಮಗಳ ಇರುವ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಿ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಭೀಮರೆಡ್ಡಿ ತಿಳಿಸಿದ್ದಾರೆ. ತಾಲೂಕಿನ ಶಿವರಾಮಪುರ-ಕುಂಚಾವ ರಂ-ಜಿಲವರ್ಷ ಗ್ರಾಮಗಳ ಮಧ್ಯೆ ಇರುವ 4.5 ಕಿಮೀ ರಸ್ತೆ ಡಾಂಬರಿಕರಣಗೊಳಿಸಲು ವಿಶೇಷ ಅಭಿವೃದ್ಧಿ ಯೋಜನೆ ಅಡಿ 4.8 ಕೋಟಿ ರೂ. ಖರ್ಚು ಮಾಡಲಾಗಿದೆ. ಲಚಮಾಸಾಗರ-ಶಿವರಾಮಪುರ 3.5 ಕಿಮೀ ರಸ್ತೆಗೆ ಎಚ್‌ಕೆಆರ್‌ಡಿಬಿ ಯೋಜನೆ ಅಡಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ. ಶಹಾಪುರ-ಮಗದಂಪುರ ರಸ್ತೆ ಡಾಂಬರಿಕರಣಕ್ಕೆ 35 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆಗೆ ಅನುಕೂಲವಾಗಿದೆ. ಕುಂಚಾವರಂ ಗಡಿಭಾಗಕ್ಕೆ ಲೋಕೋಪಯೋಗಿ ಇಲಾಖೆಯಿಂದ 2017-18ನೇ ಸಾಲಿನಲ್ಲಿ ರಸ್ತೆ ಡಾಂಬರೀಕರಣಕ್ಕಾಗಿ ಒಟ್ಟು 12 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ಕುಂಚಾವರಂ ಗ್ರಾಮದ ಅಂಬೇಡ್ಕರ ವೃತ್ತದಿಂದ ಸರಕಾರಿ ಬಾಲಕರ ವಸತಿ ನಿಲಯದವರೆಗೆ 45 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಕುಂಚಾವರಂ- ಧರ್ಮಾಸಾಗರ ತಾಂಡಾದವರೆಗೆ ರಸ್ತೆ ಡಾಂಬರೀಕರಣಕ್ಕಾಗಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿ ಒಂದು ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗಬೇಕಾಗಿದೆ. ಶಿವರೆಡ್ಡಿಪಳ್ಳಿ-ಕುಂಚಾವರಂ ರಸ್ತೆ ಅಭಿವೃದ್ಧಿಗೆ ಎಚ್‌ಕೆಅರ್‌ಡಿಬಿ ಯೋಜನೆ ಅಡಿ ಒಂದು ಕೋಟಿ ರೂ. ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ವೆಂಕಟಾಪುರ-ಪೆದ್ದಾತಾಂಡಾ ರಸ್ತೆಗೆ ನಬಾರ್ಡ್ ಯೋಜನೆ ಅಡಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಭೀಮರೆಡ್ಡಿ ತಿಳಿಸಿದ್ದಾರೆ.ಕುಂಚಾವರಂ ಗಡಿ ಪ್ರದೇಶಗಳಲ್ಲಿ ಎಲ್ಲ ಪ್ರಮುಖ ರಸ್ತೆಗಳು ಡಾಂಬರೀಕರಣಗೊಳ್ಳುತ್ತಿವೆ. ಹಿಂದುಳಿದ ಪ್ರದೇಶ ಜನರಿಗೆ ಸಾರಿಗೆ ಸೌಲಭ್ಯ ದೊರೆಯಲಿದೆ ಎಂದು ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ ತಿಳಿಸಿದ್ದಾರೆ.