Advertisement

ಲೋಕಸಭೆ ಚುನಾವಣೆಯೇ ಪ್ರವಾಸದ ಪ್ರಮುಖ ಅಜೆಂಡಾ

09:33 AM Aug 08, 2017 | Team Udayavani |

ಬೆಂಗಳೂರು: ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮೂರು ದಿನಗಳ ರಾಜ್ಯ ಪ್ರವಾಸ 2019ರ ಲೋಕಸಭೆ ಚುನಾವಣೆಯತ್ತಲೇ ಕೇಂದ್ರೀಕೃತವಾಗಿದೆ.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ 11 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸಿ 2019ರ ಚುನಾವಣೆಯಲ್ಲಿ ಅವುಗಳ ಪೈಕಿಯೂ ಕೆಲವು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಅಮಿತ್‌ ಶಾ ವಿಶೇಷ ಗಮನಹರಿಸಿದ್ದಾರೆ.
ಅಮಿತ್‌ ಶಾ ಪ್ರವಾಸದ ವೇಳಾಪಟ್ಟಿಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯ ಕ್ರಮಗಳಿವೆಯಾದರೂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅಜೆಂಡಾ ಇಲ್ಲ. ಶಾ ಅವರು ಪ್ರವಾಸದ ವೇಳೆ ಪಕ್ಷದ ಪದಾಧಿಕಾರಿಗಳು, ವಿವಿಧ ಘಟಕಗಳ ಸಭೆ ಜತೆಗೆ ಶಾಸಕರು
ಮತ್ತು ಸಂಸದರೊಂದಿಗೂ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲೇ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ, ಲೋಕಸಭೆ ಚುನಾವಣೆ ವಿಚಾರದಲ್ಲಿ ಮಾತ್ರ ವಿಶೇಷ ಗಮನ ಹರಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 17 ಕ್ಷೇತ್ರಗಳಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಹೀಗಾಗಿ ಸೋಲು ಅನುಭವಿಸಿರುವ 11 ಕ್ಷೇತ್ರಗಳತ್ತ ಗಮನಹರಿಸಲಿರುವ ಶಾ, ಆ ನಿಟ್ಟಿನಲ್ಲಿ ತಮ್ಮ ಪ್ರವಾಸದ ಕೊನೆಯ ದಿನ (ಆ. 14) ಈ 11 ಕ್ಷೇತ್ರಗಳ ಪ್ರಮುಖರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.

ಎಸ್‌ಸಿ, ಎಸ್ಟಿ, ಓಬಿಸಿ ಸಂಘಟನೆಗೆ ಆದ್ಯತೆ: ಮಿನಿ ಲೋಕಸಭೆ ಚುನಾವಣೆ ಎಂದೇ ಹೇಳಲಾಗುತ್ತಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇತ್ತೀಚೆಗೆ ಬಿಜೆಪಿ ಅತ್ಯಧಿಕ ಸ್ಥಾನಗಳೊಂದಿಗೆ ಬಹುಮತಕ್ಕೆ ಬರಲು ಕಾರಣವಾಗಿದ್ದು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರ ಮತಗಳು ಪಕ್ಷದ ಪರ ಧ್ರುವೀಕರಣಗೊಂಡಿರುವುದು. ಇದೇ ಮಾದರಿಯನ್ನು ಕರ್ನಾಟಕಕ್ಕೂ ಅಳವಡಿಸಿಕೊಳ್ಳಲು ಮುಂದಾಗಿರುವ ಅಮಿತ್‌ ಶಾ, ತಮ್ಮ ರಾಜ್ಯ ಭೇಟಿ ಸಂದರ್ಭದಲ್ಲಿ ಈ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಿದ್ದಾರೆ.

ಉತ್ತರಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರ ಮತಗಳು ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳತ್ತ ಇತ್ತು. ರಾಜ್ಯದಲ್ಲಿ ಈ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್‌ನತ್ತ ವಾಲಿವೆ. ಉತ್ತರ ಪ್ರದೇಶದಲ್ಲಿ ಈ ಸಮುದಾಯದ ಮತಗಳನ್ನು ಎಸ್ಪಿ ಮತ್ತು ಬಿಎಸ್ಪಿಯಿಂದ ದೂರ ಮಾಡಿ ಬಿಜೆಪಿಯತ್ತ ಸೆಳೆದು ಕೊಂಡಂತೆ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಯತ್ತ ಸೆಳೆಯಲು ಶಾ ಮುಂದಾಗಿದ್ದಾರೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next