Advertisement

ಅನುಭವ ಮಂಟಪಕ್ಕೆ ಅನ್ವರ್ಥವಾದ ಮಹಾಸಂಗಮ

10:47 PM Feb 16, 2020 | Lakshmi GovindaRaj |

ಬೆಂಗಳೂರು: ಮೂರು ನದಿಗಳು ಬಂದು ಸೇರಿದ ಕೂಡಲಸಂಗಮದಂತೆ ನಾನಾ ದಿಕ್ಕುಗಳಿಂದ ಹರಿದು ಬಂದ ಶರಣರ ಮಹಾಸಂಗಮ ಅದು. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಶಿವನ ಧ್ಯಾನದಲ್ಲಿ ಕುಳಿತ ಭಕ್ತ ಸಮೂಹ, ಹಣೆ ಮೇಲೆ ವಿಭೂತಿ, ಕೈಯಲ್ಲಿ ಶಿವಲಿಂಗ, ಬಾಯಲ್ಲಿ ಮಂತ್ರಪಠಣ. ಈ ಮಧ್ಯೆ ಆಗಾಗ್ಗೆ ಅನುರಣಿಸುವ ವಚನಗಳ ಸಾಲು….

Advertisement

ಇದೆಲ್ಲವನ್ನೂ ಒಳಗೊಂಡ ಆ ಅಸಂಖ್ಯ ಪ್ರಮಥರ ಗಣಮೇಳ, ಅನುಭವ ಮಂಟಪಕ್ಕೆ ಅನ್ವರ್ಥ ದಂತಿತ್ತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ನೈಸ್‌ ರಸ್ತೆಯ “ನಂದಿ’ ಮೈದಾನ. ತಮಿಳುನಾಡು, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಶರಣರ ಸಾಗರವೇ ಮೇಳಕ್ಕೆ ಹರಿದು ಬಂದಿತ್ತು. ಬೆಳಿಗ್ಗೆಯೇ ರೈಲು, ಬಸ್‌ಗಳಲ್ಲಿ ಬಂದಿಳಿದ ಭಕ್ತರು ಸಹಜ ಶಿವಯೋಗಕ್ಕೆ ಅಣಿಯಾಗುತ್ತಿದ್ದರು. ಹೆಸರೇ ಸೂಚಿಸುವಂತೆ ಅದು “ಶಿವಯೋಗ ಸಂಭ್ರಮ’ವಾಗಿತ್ತು.

ಮೈದಾನದಲ್ಲಿ ಬೃಹತ್‌ ವೇದಿಕೆಗಳನ್ನು ಹಾಕಲಾಗಿತ್ತು. ಅದರ ಮುಂಭಾಗ ಅನುಭವಮಂಟಪವನ್ನು ಹೋಲುತ್ತಿತ್ತು. ಒಂದೆಡೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಮತ್ತೂಂದೆಡೆ ಮುರುಘಾ ಶರಣರ ಭಾವಚಿತ್ರಗಳನ್ನು ಹಾಕಲಾಗಿತ್ತು. ಅದು ಬಂದವರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿತ್ತು.

ಭಕ್ತರು, ಶರಣರು ಕೈಮುಗಿದು ಒಳಗೆ ಪ್ರವೇಶಿಸುತ್ತಿದ್ದರು. ಮಂಟಪದೊಳಗೆ ಇಡೀ ದಿನ ವಚನಗಳ ಗಾಯನ-ನೃತ್ಯ, ವಚನ ಚಳವಳಿಯ ಮೆಲುಕು, ಕಲ್ಯಾಣ ಕ್ರಾಂತಿಯ ಪ್ರಸ್ತುತತೆ, ಇದೆಲ್ಲವೂ ಮುಗಿದು ಹರಟುವಾಗಲೂ ಭಜನೆಯಲ್ಲಿ ಶರಣರ ಸಾಲುಗಳು ಅನುರಣಿಸುತ್ತಿದ್ದವು. ಒಟ್ಟಾರೆ 12ನೇ ಶತಮಾನದ ಗತವೈಭವವನ್ನು ಕಟ್ಟಿಕೊಡುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next