Advertisement

ಹೇಳಿದಂತೆ ಕೇಳುವ ಮ್ಯಾಜಿಕ್‌ ಮಿರರ್‌!

12:35 PM Dec 01, 2018 | |

ಬೆಂಗಳೂರು: ಈ ಕನ್ನಡಿ ಹಾಡುತ್ತದೆ. ಬ್ರೇಕಿಂಗ್‌ ನ್ಯೂಸ್‌ ನೀಡುತ್ತದೆ. ಹವಾಮಾನ ಮುನ್ಸೂಚನೆ ಕೊಡುತ್ತದೆ. ಅಷ್ಟೇ ಯಾಕೆ, ಮನೆಗೆ ಕಳ್ಳರು ನುಗ್ಗಿದರೆ, ನಿಮ್ಮ ಮೊಬೈಲ್‌ಗೆ ಮಾಹಿತಿ ನೀಡುವುದರ ಜತೆಗೆ ಆ ವ್ಯಕ್ತಿಯ ಫೋಟೋ ಕೂಡ ಸೆರೆಹಿಡಿಯುತ್ತದೆ!

Advertisement

ಅಚ್ಚರಿ ಆದರೂ ಸತ್ಯ. ಮಂಗಳೂರು ಮೂಲದ ಎಪಿಟಾಸ್‌ ಎಂಪವರಿಂಗ್‌ ಇನ್ನೋವೇಷನ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಈ “ಮ್ಯಾಜಿಕ್‌ ಮಿರರ್‌’ ಅನ್ನು ಅಭಿವೃದ್ಧಿಪಡಿಸಿದೆ. ಈ ಕನ್ನಡಿ ಮುಂದೆ ನಿಂತು ನೀವು ಯಾವುದೇ ಸೂಚನೆ ಕೊಟ್ಟರೂ, ಹೇಳಿದಂತೆ ಕೇಳುತ್ತದೆ.

ಎಫ್ಎಂ ರೇಡಿಯೊ ಆನ್‌ ಮಾಡುವಂತೆ ಹೇಳಿದರೆ, ತಕ್ಷಣ ಹಾಡು ಶುರುವಾಗುತ್ತದೆ. ಯ್ಯೂಟೂಬ್‌ ಎಂದರೆ ಎದುರುಗಡೆ ಕಾಣುತ್ತದೆ. ಬೆಳಗ್ಗೆ ಆಫೀಸಿಗೆ ಹೋಗುವ ಮುನ್ನ ತಯಾರಾಗಲು ಇದರ ಮುಂದೆ ನಿಂತರೆ, ಆ ದಿನದ ಬ್ರೇಕಿಂಗ್‌ ಸುದ್ದಿಗಳನ್ನು ನಿಮ್ಮ ಕಣ್ಮುಂದೆ ತರುವ ಮೂಲಕ ನಿಮ್ಮನ್ನು ಅಪ್‌ಡೇಟ್‌ ಮಾಡುತ್ತದೆ. ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಈ ಕನ್ನಡಿ ಪ್ರಮುಖ ಆಕರ್ಷಣೆಯಾಗಿದೆ.

ಕನ್ನಡಿ ಹಿಂದೆ ಧ್ವನಿವರ್ಧಕ, ಕ್ಯಾಮೆರಾ, ವೈ-ಫೈ ಸಂಪರ್ಕ ವ್ಯವಸ್ಥೆ, ಮುಂದೆ ವೀಡಿಯೋ ಡಿಸ್‌ಪ್ಲೇ ಒಳಗೊಂಡಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆ ಮೂಲಕ ಸುಮಾರು 25ಕ್ಕೂ ಅಧಿಕ ಅಪ್ಲಿಕೇಷನ್‌ಗಳನ್ನು ತುಂಬಲಾಗಿದೆ.

ಅದನ್ನು ಮೊಬೈಲ್‌ನೊಂದಿಗೆ ಲಿಂಕ್‌ ಮಾಡಿ, ಬಹುಪಯೋಗಿಯಾಗಿ ಬಳಸಿಕೊಳ್ಳಲು ಸಹ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಈ ಮಿರರ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಎಪಿಟಾಸ್‌ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದೀಪ್‌ ದೇವಶ್ಯಾ ತಿಳಿಸಿದರು. ಅಷ್ಟೇ ಅಲ್ಲ, ಇದರಲ್ಲಿ ಹಾಲಿಡೆ ಮೋಡ್‌ ಎಂಬ ಆಯ್ಕೆ ಇದೆ.

Advertisement

ಮನೆಯವರೆಲ್ಲಾ ಹೊರಗಡೆ ಹೋಗುವಾಗ, ಕನ್ನಡಿಯನ್ನು ಹಾಲಿಡೆ ಮೋಡ್‌ನ‌ಲ್ಲಿ ಇಟ್ಟು ಮೊಬೈಲ್‌ಗೆ ಲಿಂಕ್‌ ಮಾಡಿದರೆ ಸಾಕು, ಮನೆಗೆ ಯಾವುದೇ ವ್ಯಕ್ತಿ ಪ್ರವೇಶಿಸಿದ ತಕ್ಷಣ ಮೊಬೈಲ್‌ಗೆ ಸಂದೇಶ ಬರುತ್ತದೆ. ಅದನ್ನು ಆಧರಿಸಿ ನೀವು ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬಹುದು. ಕನ್ನಡಿಯಲ್ಲಿ ಕ್ಯಾಮೆರಾ ಇರುವುದರಿಂದ ವ್ಯಕ್ತಿಯ ಭಾವಚಿತ್ರವನ್ನೂ ಇದು ಸೆರೆಹಿಡಿಯುತ್ತದೆ. ಇದರ ಬೆಲೆ 40 ಸಾವಿರ ರೂ. ಎಂದು ಅವರು ಹೇಳಿದರು.

ನೋಂದಣಿ ಕಡ್ಡಾಯ: ಇದೇ ಮೊದಲ ಬಾರಿಗೆ ಇಂತಹದ್ದೊಂದು ಕನ್ನಡಿ ಅಭಿವೃದ್ಧಿಪಡಿಸಲಾಗಿದ್ದು, ಇದರ ಹೆಸರು ಸ್ಪೆಕ್ಯುಲೊ (sಟಛಿculಟ). ಆದರೆ, ಹೀಗೆ ನೀವು ಹೇಳಿದ ಮಾತು ಇದು ಕೇಳಬೇಕಾದರೆ, ಆ ಕನ್ನಡಿಯಲ್ಲಿ ನಿಮ್ಮ ಬಿಂಬ ಮತ್ತು ನಿಮ್ಮ ಹೆಸರು ಮೊದಲೇ ನೋಂದಣಿ ಮಾಡಿರಬೇಕು. ಪ್ರಸ್ತುತ ಕನಿಷ್ಠ ನಾಲ್ಕು ಜನರ ವಿವರಗಳನ್ನು  ಇದರಲ್ಲಿ ನೋಂದಣಿ ಮಾಡಲು ಅವಕಾಶ ಇದೆ. ನೋಂದಾಯಿತರ ಧ್ವನಿ ಗುರುತಿಸಿ, ಸೂಚನೆಗಳನ್ನು ಪಾಲಿಸುತ್ತದೆ.

ಟೀ ಟೈಮ್‌ನಲ್ಲಿ ಬಂದ ಐಡಿಯಾ: ಅಂದಹಾಗೆ ಇಂತಹದ್ದೊಂದು ಮ್ಯಾಜಿಕ್‌ ಕನ್ನಡಿ ಅಭಿವೃದ್ಧಿಪಡಿಸುವ ಐಡಿಯಾ ಹುಟ್ಟಿಕೊಂಡಿದ್ದು ಕೂಡ ವಿಶಿಷ್ಟವಾಗಿದೆ. ಕಂಪನಿಯಲ್ಲಿರುವ ಸ್ನೇಹಿತರ ತಂಡ ಹೋಟೆಲ್‌ ಒಂದರಲ್ಲಿ ಕುಳಿತು ಕಾಫಿ ಹೀರುವಾಗ, ಕನ್ನಡಿ ವಿಷಯ ಚರ್ಚೆಗೆ ಬಂತು. ಸಾಮಾನ್ಯವಾಗಿ ಯಾವುದೇ ವ್ಯಕ್ತಿ ದಿನಕ್ಕೆ ಕನಿಷ್ಠ ಹತ್ತು ನಿಮಿಷ ಕನ್ನಡಿ ಮುಂದೆ ಕಾಲ ಕಳೆಯುತ್ತಾನೆ. ಅದೇ ಸಮಯವನ್ನು ಮಾಹಿತಿ/ ಮನರಂಜನೆಯಾಗಿ ಯಾಕೆ ಬಳಸಿಕೊಳ್ಳಬಾರದು ಎಂಬ ಆಲೋಚನೆ ಬಂತು. ಅದರ ಪ್ರತಿಫ‌ಲವೇ ಈ ಮ್ಯಾಜಿಕ್‌ ಕನ್ನಡಿ ಎಂದು ಕಂಪನಿಯ ಮತ್ತೂಬ್ಬ ಸದಸ್ಯರು ತಿಳಿಸಿದರು.

* ವಿಜಯ್‌ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next