ಮೈಸೂರು: ಮುದ್ದೆಗೂ ಈಗ ಯಾಂತ್ರೀಕರಣದ ಅನುಭವ! ಹೌದು, ಮುದ್ದೆಗೆ ಈ ಯಾಂತ್ರಿಕರಣದ ಟಚ್ ಸಿಕ್ಕಿರುವುದು ಇಲ್ಲಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಿಂದ. ಇಲ್ಲಿನ ವಿಜ್ಞಾನಿಗಳು ಮುದ್ದೆ ಮಾಡುವುದಕ್ಕಾಗಿಯೇ ಯಂತ್ರವೊಂದನ್ನು ಶೋಧಿಸಿದ್ದಾರೆ. ಈ ಯಂತ್ರಕ್ಕೆ ಸೋಮವಾರ ಚಾಲನೆ ನೀಡಿದ ಮಾಜಿ ಪ್ರಧಾನಿ ದೇವೇಗೌಡರು, ಇದರಿಂದಲೇ ತಯಾರಾದ ಮುದ್ದೆ ಜತೆಗೆ ಸೊಪ್ಪಿನ ಸಾರು ಸವಿದು ಕೆಲವು ಸಲಹೆಗಳನ್ನೂ ಕೊಟ್ಟರು.
ಕರ್ನಾಟಕದ ಕೆಲಭಾಗಗಳಿಗಷ್ಟೇ ಪರಿಚಿತವಾಗಿದ್ದ ಮುದ್ದೆಗೆ ಅಂತಾರಾಷ್ಟ್ರೀಯ ಗರಿಮೆ ಕೊಟ್ಟವರು ದೇವೇಗೌಡರು. ಇವರು ಪ್ರಧಾನಿಯಾಗಿದ್ದ ವೇಳೆ ತಮ್ಮ ನೆಚ್ಚಿನ ಮುದ್ದೆಯ ಮಹತ್ವದ ಬಗ್ಗೆ ಮಾತನಾಡುತ್ತಿದ್ದ ಇವರು, ಬಹಳಷ್ಟು ಮಂದಿ ಮುದ್ದೆ ಸವಿಯಲೂ ಕಾರಣವಾಗಿದ್ದರು. ಹೀಗಾಗಿಯೇ ಮುದ್ದೆ ದೆಹಲಿಯ ಪಂಚತಾರ ಹೋಟೆಲ್‌ಗಳಿಗೆ ಪ್ರವೇಶ ಮಾಡಿದ್ದಷ್ಟೇ ಅಲ್ಲ, ವಿದೇಶ ಪ್ರವಾಸದ ವೇಳೆ ಊಟದ ಮೆನುವಿನಲ್ಲಿಯೂ ಮುದ್ದೆ ಸೇರಲು ಕಾರಣವಾಗಿದ್ದರು.
ಸ್ವಲ್ಪ ಮೆದು ಇರಲಿ: ಸಿಎಸ್‌ಆರ್‌ಐ- ಸಿಎಫ್ಟಿಆರ್‌ಐ ಸಿದ್ಧಪಡಿಸಿರುವ ಈ ಯಂತ್ರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ದೇವೇಗೌಡರು, ಮನೆಯಲ್ಲಿ ಮಾಡಿದ ಮುದ್ದೆಯಂತೆಯೇ ಇದೆ. ಆದರೆ ಸ್ವಲ್ಪ ಗಟ್ಟಿಯಾಗಿದೆ ಎಂದರಲ್ಲದೇ, ಸ್ವಲ್ಪ ಮೆದುವಾಗಿರಲಿ ಎಂದು ಸಲಹೆ ನೀಡಿದರು.
ಯಂತ್ರ ಸಿದ್ಧಪಡಿಸಿದ ಸಿಎಫ್ಟಿಆರ್‌ಐನ ಪ್ರಧಾನ ವಿಜ್ಞಾನಿ ಡಾ.ವಿ.ಡಿ. ನಾಗರಾಜು ರಾಗಿ ಮುದ್ದೆ ತಯಾರಿಸುವ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ದೇವೇಗೌಡರಿಗೆ ವಿವರಿಸಿದರು. ರಾಗಿ ಮುದ್ದೆ ತಯಾರಾಗಿ ಹೊರಗೆ ಬರುವುದನ್ನು ಸೂಕ್ಷವಾಗಿ ಗಮನಿಸಿದ ದೇವೇಗೌಡರು, ಬಳಿಕ ಬಿಸಿ ಬಿಸಿ ಸಾರಿನೊಂದಿಗೆ ಮುದ್ದೆ ಸವಿದರು.
ಗಂಟೆಗೆ 250 ಮುದ್ದೆ: ವಿದ್ಯುತ್ ಚಾಲಿತ ಯಂತ್ರಕ್ಕೆ ರಾಗಿ ಹಿಟ್ಟು ಮತ್ತು ನೀರನ್ನು ಹಾಕಿ, ಗುಂಡಿ ಒತ್ತಿದರೆ ಪ್ರತಿ ಗಂಟೆಗೆ 250 ಮುದ್ದೆ ತಯಾರಾಗುತ್ತದೆ. ಈ ಯಂತ್ರದ ಅಂದಾಜು ಬೆಲೆ 3 ರಿಂದ 3.50 ಲಕ್ಷ ರೂ. ಇದೆ.
ಮೈಸೂರಿನ ಸುತ್ತೂರು ಮಠ, ಕೇಂದ್ರ ಕಾರಾಗೃಹ ಮತ್ತು ಪ್ರಮುಖ ಹೊಟೇಲ್‌ಗಳಲ್ಲಿ ಹೇಗೆ ಮುದ್ದೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ ಸಿಎಫ್ಟಿಆರ್‌ಐ ವಿಜ್ಞಾನಿಗಳ ತಂಡ, ಇದಕ್ಕೆ ಯಂತ್ರ ಬಳಕೆ ಮಾಡಿದರೆ ಹೇಗೆ ಎಂಬೆಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ ಮುದ್ದೆ ತಯಾರಿಕೆ ಯಂತ್ರ ಸಿದ್ಧಪಡಿಸಿದೆ. ಅಗತ್ಯಕ್ಕೆ ತಕ್ಕಂತೆ ಮುದ್ದೆಯ ಗಾತ್ರ ಮತ್ತು ಹೆಚ್ಚು ಮುದ್ದೆ ತಯಾರಿಕೆಗೆ ಯಂತ್ರವನ್ನು ಮಾರ್ಪಡಿಸಿಕೊಳ್ಳಬಹುದು ಎಂದು ವಿಜ್ಞಾನಿ ಡಾ.ವಿ.ಡಿ. ನಾಗರಾಜು ತಿಳಿಸಿದರು.