Advertisement
ದ.ಕ., ಮಂಡ್ಯ, ರಾಯಚೂರು, ಶಿವಮೊಗ್ಗ, ಬಾಗಲಕೋಟೆಯನ್ನು ನೀರಾವರಿ ಜಿಲ್ಲೆಗಳೆಂದು ಗುರುತಿಸಲಾಗಿದ್ದು ಶೇ. 25, ಇತರ ಜಿಲ್ಲೆಗಳಿಗೆ ಶೇ. 30 ಪರಿಹಾರ ಮಿತಿ ನಿಗದಿಪಡಿಸಲಾಗಿದೆ. ಈ ಐದು ಜಿಲ್ಲೆಗಳಿಗೆ ಮೂರು ವರ್ಷಗಳ ಅವಧಿಗೆ ವಿಮಾ ಕಂಪೆನಿಗೆ ಟೆಂಡರ್ ಕೂಡಾ ನೀಡಲಾಗಿದೆ. ಬೆಳೆ ನಷ್ಟದ ಪ್ರಮಾಣವನ್ನು ಈ ಮಿತಿಯಲ್ಲಿ ಇರುವುದನ್ನು ಹೆಚ್ಚು ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ರಿಸ್ಕ್ ಪ್ರಮಾಣ ಕಡಿಮೆ ಮಾಡಿದಷ್ಟು ರೈತರಿಗೆ ದೊರೆಯುವ ಪರಿಹಾರದ ಮೊತ್ತ ಕಡಿಮೆಯಾಗಲಿದೆ. ಹೆಕ್ಟೇರ್‌ಗೆ 6,400 ರೂ. ಪಾವತಿಸಿದರೆ ಶೇ. 30 ನಷ್ಟ ಪರಿಹಾರ ಎಂದರೆ 51,800 ರೂ. ದೊರೆಯುತ್ತದೆ. ನಷ್ಟದ ಮಿತಿ ಹೆಚ್ಚು ಮಾಡಿದರೆ ಪರಿಹಾರ ಮೊತ್ತ ಜಾಸ್ತಿ ದೊರೆಯಲಿದೆ. ಈ ಕುರಿತು ಸ್ಪಷ್ಟನೆ ಬಯಸಿದಾಗ, ರೈತರಿಗೆ ತೊಂದರೆಯಾಗುವುದಿಲ್ಲ. ಇದು ರಿಸ್ಕ್ ಪರ್ಸೆಂಟೇಜ್‌ನ ಕನಿಷ್ಠ ಪ್ರಮಾಣವಾಗಿದ್ದು ಹವಾ ಮಾನ ವೈಪರೀತ್ಯವಾದರೆ ಈ ಮೊತ್ತ ಹೆಚ್ಚಾಗಲೂ ಬಹುದು ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ವಿವರಿಸಿದ್ದಾರೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ಕರಿಮೆಣಸು, ವೀಳ್ಯದೆಲೆ, ದ್ರಾಕ್ಷಿ, ದಾಳಿಂಬೆ, ಲಿಂಬೆ, ಪರಂಗಿ, ಶುಂಠಿ, ಹೂಕೋಸು ಬೆಳೆಗಳನ್ನು ಜು. 10ರ ಒಳಗೆ ನೋಂದಾಯಿಸಬೇಕು. ಮಾವು ಬೆಳೆಯನ್ನು ಜು. 31ರ ಒಳಗೆ, ಹಿಂಗಾರು ಹಂಗಾಮಿನ ಬೆಳೆಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ಮೆಣಸಿನಕಾಯಿ ಬೆಳೆಗಳನ್ನು ನ. 15ರ ಒಳಗೆ ನೋಂದಾಯಿಸಬೇಕು. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ವಿಮೆ ಮಾಡಿಸಬಹುದು. ಬೆಳೆ ವಿಮೆ ನೋಂದಣಿಗೆ ಜೂ.30 ಕೊನೆ ದಿನವಾಗಿತ್ತು. ಜೂ. 25ರಂದು ಆದೇಶವಾಗಿ ಜೂ.26ರಂದು ಕಚೇರಿಗಳಿಗೆ ಬಂದಿದ್ದು ಜೂ. 27, 28 ಸರಕಾರಿ ರಜೆ ದಿನ. ಕೇವಲ ಎರಡು ದಿನಗಳ ಗಡುವು ನೀಡಿ ಸರಕಾರ ಆದೇಶ ನೀಡಿದ್ದು ರೈತರಲ್ಲಿ ಗೊಂದಲ ಮೂಡಿಸಿತ್ತು. ದ.ಕ., ಉಡುಪಿಯ ಪ್ರಧಾನ ಬೆಳೆ ಅಡಿಕೆ ಬೆಳೆಗಾರರಿಗೆ ಇದರಿಂದ ತೊಂದರೆಯಾಗಿತ್ತು. ಎಲ್ಲ ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರಕಾರ ನೋಂದಣಿ ಅವಧಿಯನ್ನು 10 ದಿನ ವಿಸ್ತರಿಸಿದೆ.
Related Articles
ಬೆಳೆ ಸಾಲ ಪಡೆದ ರೈತರಿಗೆ ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು ಕಡ್ಡಾಯ ಬೆಳೆವಿಮೆ ಮಾಡಿಸುತ್ತಿವೆೆ. ಆದರೆ ಸರಕಾರದ ಸುತ್ತೋಲೆಯಂತೆ ಬೆಳೆವಿಮೆ ಕಡ್ಡಾಯವಲ್ಲ. ಬೆಳೆ ಸಾಲ ಪಡೆದ ರೈತ ಬೆಳೆವಿಮೆ ನೋಂದಣಿಗಿಂತ 7 ದಿನಗಳ ಮುಂಚೆ ತನಗೆ ಬೆಳೆವಿಮೆ ಅಗತ್ಯವಿಲ್ಲ ಎಂದು ಅಫಿದವಿತ್ ನೀಡಿದರೆ ಅವರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗುವುದು. ಆದರೆ ಅಂತಹ ರೈತರಿಗೆ ಬೆಳೆ ನಷ್ಟವಾದಾಗ ಯಾವುದೇ ವಿಮಾ ಪರಿಹಾರ ದೊರೆಯುವುದಿಲ್ಲ.
Advertisement
ಬೆಳೆ ವಿಮೆಯಿಂದ ರೈತರು ದೂರ ಸರಿಯಲು ಕಾರಣ ವಿಮೆಯನ್ನು ಘಟಕವಾಗಿ ಪರಿಗಣಿಸಿರುವುದು. ಇಡೀ ಗ್ರಾಮದ ಬೆಳೆ ನಾಶವಾಗದ ಹೊರತು ಇದರಲ್ಲಿ ಒಬ್ಬರು, ಇಬ್ಬರು ರೈತರ ಬೆಳೆ ನಷ್ಟವಾದರೆ ವಿಮಾ ಪರಿಹಾರ ಪಡೆಯಲು ಅವಕಾಶ ಇಲ್ಲ. ಬೆಳೆ ನಾಶವಾಗಿ 72 ಗಂಟೆಗಳ ಒಳಗೆ ರೈತರು ವಿಮಾ ಸಂಸ್ಥೆಗೆ ಮಾಹಿತಿ ನೀಡಿ ಅವರು ಸರ್ವೆ ಮಾಡಿ ಪರಿಹಾರ ಮೊತ್ತವನ್ನು ನೇರ ರೈತರ ಖಾತೆಗೆ ಜಮೆ ಮಾಡುವುದು ಈ ವಿಮೆಯ ಆಶಯ. ಇದಕ್ಕಾಗಿ ಅವರು ಪಂಚಾಯತ್‌ನಲ್ಲಿ ದಾಖಲಾಗುವ ಮಳೆಮಾಪನದ ಅಂಕಿ ಅಂಶವನ್ನು ಅವಲಂಬಿಸುತ್ತಾರೆ.
ರೈತರಿಗೆ ಪರಿಹಾರ ನೀಡುತ್ತಿಲ್ಲಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ರೈತರು ಪ್ರೀಮಿಯಂ ಮೊತ್ತದಲ್ಲಿ ಶೇ. 5ರಷ್ಟು ಕಟ್ಟುತ್ತಿದ್ದು, ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಾವತಿಸುತ್ತಿವೆ. ವಿಮಾ ಸಂಸ್ಥೆಗೆ ಸಮರ್ಪಕವಾಗಿ ಹಣ ಪಾವತಿಸುವ ಸರಕಾರ ರೈತರಿಗೆ ಕೊಳೆರೋಗಕ್ಕೆ ಹಣವನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಸಾಲಿನಲ್ಲಿ ಕೊಳೆರೋಗಕ್ಕೆ ಹೆಕ್ಟೇರ್‌ಗೆ 28,000 ರೂ. ಘೋಷಣೆಯಾಗಿದ್ದರೂ ಯಾರಿಗೂ ಸಿಕ್ಕಿಲ್ಲ.
-ರವಿಕಿರಣ್ ಪುಣಚ, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯದಿಂದ ಬೇಡಿಕೆ ಇತ್ತು
ಹವಾಮಾನ ಆಧಾರಿತ ಬೆಳೆ ವಿಮೆಯ ವಿಮಾ ಕಂತು ಪಾವತಿಯ ದಿನಾಂಕ ವಿಸ್ತರಣೆ ಕುರಿತು ಇಡೀ ರಾಜ್ಯದಲ್ಲಿ ಬೇಡಿಕೆ ಇತ್ತು. ಹೀಗಾಗಿ ಕರ್ನಾಟಕ ಸರಕಾರ ಕೇಂದ್ರಕ್ಕೆ ಮನವಿ ಮಾಡಿ 10 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
-ಎಚ್.ಆರ್.ನಾಯಕ್
ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ.