Advertisement
ಹೇಗಿದ್ದೀಯಾ ಜಾಯ್,ಮುಂಜಾನೆಯ ಸವಿಗನಸಿನಲ್ಲಿ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ, ಇಳಿಸಂಜೆಯ ತಂಪಿನಲ್ಲಿ ತಪ್ಪದೇ ನೆನಪಾಗುವ ನೀನು, ಒಮ್ಮೊಮ್ಮೆ ನನ್ನನ್ನು ಇಡೀ ರಾತ್ರಿ ಜಾಗರದ ಜೀವವಾಗಿಸಿ ಬಿಡುತ್ತೀಯ ಕಣೆ. ನಿನ್ನೆ ಅಪರಾತ್ರಿಯಲ್ಲಿ ಇದ್ದಕ್ಕಿದ್ದಂತೆ, ಮಳೆ ಶುರುವಾಗುವುದಕ್ಕೂ ನಂಗೆ ಎಚ್ಚರಾಗುವುದಕ್ಕೂ ಸರಿ ಹೋಯಿತು!
ಸವಿಭಾವಕೆ ಎಲ್ಲಿದೆ ಕೊರತೆ
ಖುಷಿಯಿಂದಲೆ ಸಾಗಿದೆ ಈಗ
ಕುಶಲೋಪರಿ ನಿನ್ನಯ ಕುರಿತೆ
Related Articles
Advertisement
ನಿನ್ನನ್ನು ಗೋಳು ಹೊಯ್ದುಕೊಳ್ಳಲು ಕವಿತೆ ಓದುತ್ತಿದ್ದೆ. ನಿನ್ನನ್ನು ಪುಳಕಗೊಳಿಸಲು ಎದೆಯ ಭಾವವೆಲ್ಲವನ್ನೂ ಹಾಡಾಗಿಸಿ, ಅನುರಾಗದ ಬುತ್ತಿಯಿಂದ ಕೈತುತ್ತು ನೀಡಬೇಕು ಗೆಳತೀ, ಬೇಡೆನ್ನ ಬೇಡ, ತುಸುದೂರ ಜತೆಯಾಗಿ ನಡೆಯಬೇಕು ಎಂದು ಹಾಡುತ್ತಿದ್ದೆ. ಅಷ್ಟೇ ಅಲ್ಲ; ಅದಕ್ಕೆ ನೀನೇನಾದ್ರೂ ಒಪ್ಪದೇ ಹೋಗಿದ್ದರೆ, ಆ ಸುರಿವ ಮಳೆ, ನುಗ್ಗಿ ಬರುವ ಇರುಚಲು ಹನಿಯನ್ನು ಲೆಕ್ಕಿಸದೆ ನಿನ್ನೆದುರು ಮಂಡಿಯೂರಿ ಕೂತೇ ಬಿಡುತ್ತಿದ್ದೆ.
ಹೌದು. ಮನದೊಳಗಿನ ಸಾವಿರ ಅಲೆಗಳ ಸಾಗರಕ್ಕೆ ತೀರ ನೀನು. ಒಲವ ದೇವಳದ ಸಾಲು ಸಾಲು ಹಣತೆಗಳ ಲಕ್ಷದೀಪೋತ್ಸವದ ದೀಪ ನೀನು. ನನ್ನೊಳಗಿನ ಜೀವನ ಪ್ರೀತಿಯ ಕಾರಣ ನೀನು. ಬದುಕಿನ ತಲೆಬಾಗಿಲ ತೋರಣ ನೀನು. ಒಳಮನೆಯ ಸಂಭ್ರಮದ ಕಲರವ ನೀನು. ಯಾವತ್ತಾದರೂ ನನ್ನ ಕನಸನ್ನು ನನಸು ಮಾಡುತ್ತಿಯಲ್ಲವಾ ಹುಡುಗೀ?
ಮಳೆ ಬರುವ ಸಾವಿರ ಅಪರಾತ್ರಿಗಳಲ್ಲಿ ನಿನ್ನ ಹಾಜರಿಗಾಗಿ ಕಾಯುತ್ತಲೇ ಇರುತ್ತೇನೆ. ನನ್ನೊಂದಿಗೆ ಘಂ ಎನ್ನುವ ಕಾಫಿ, ಜೀಕುವ ಉಯ್ನಾಲೆ , ಎದೆಯೊಳಗೆ ಕದಲುವ ಹಾಡು, ಬೀಸಿ ಬರುವ ಗಾಳಿ… ಎಲ್ಲವೂ ನಿನ್ನ ಬರುವಿಕೆಗಾಗಿ ಕಾಯುತ್ತಾ ಕುಳಿತಿವೆ. ಬರುತ್ತೀಯಲ್ಲವಾ ಜಾಯ…? ಲವ್ ಯೂ.ಅಪರಾತ್ರಿಯ ಫಕೀರ
ಜೀವ ಮುಳ್ಳೂರು