Advertisement
ಅವರು ಮರೆಯಾಗಿವುದನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದು ಮಾಜಿ ಸಚಿವ ವಿಜಯಶಂಕರ್ ಕಂಬನಿ ಮಿಡಿದರು. ಅವರ ವ್ಯಕ್ತಿತ್ವವನ್ನು ಯಾರಿಗೂ ಹೋಲಿಸಲಾಗದು. ಅವರಿಗೆ ಅವರೇ ಸಾಟಿ. ಮೌಲ್ಯಗಳು ನಶಿಸುತ್ತಿರುವ ಇಂದಿನ ರಾಜಕಾರಣದಲ್ಲಿ ಅಟಲ್‌ಜೀ ಅವರಂತಹ ನಾಯಕತ್ವ ಕಾಣುವುದು ಕಷ್ಟ.
Related Articles
Advertisement
ಉತ್ತಮ ವಾಗ್ಮಿ: ಅಟಲ್‌ಜೀ ಮಾತಿನಲ್ಲಿ ಸ್ಪಷ್ಟ ಸಂದೇಶ ಇರುತ್ತಿತ್ತು. ಹೀಗಾಗಿ ರಾಜಕೀಯ ವಿರೋಧಿಗಳೂ ಅವರ ಭಾಷಣವನ್ನು ತಪ್ಪಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಅವರೆಂದೂ ಬರೆದು ಸಿದ್ಧಪಡಿಸಿಕೊಂಡು ಭಾಷಣ ಮಾಡಿದವರಲ್ಲ. ನಿರರ್ಗಳವಾಗಿ ಮಾತನಾಡುವ ಕಲೆ ಅವರಿಗೆ ಕರಗತವಾಗಿತ್ತು.
ಸ್ವಾರ್ಥ ಮತ್ತು ಸ್ವಂತಕ್ಕಾಗಿ ಯಾವತ್ತೂ ಯೋಚನೆ ಮಾಡಿದವರಲ್ಲ. ಕವಿ, ರಾಜಕಾರಣಿಯ ಜೊತೆಗೆ ಅವರ ಬಾಡಿ ಲಾಂಗ್ವೇಜ್ ತುಂಬಾ ಇಷ್ಟವಾಗುತ್ತಿತ್ತು. ವೈಯಕ್ತಿಕ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಯಾರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಸೂಚ್ಯವಾಗಿ ತಿಳಿ ಹೇಳುತ್ತಿದ್ದರು.
ಮೈಸೂರು ಅತಿಥಿಗೆ ಆತ್ಮೀಯ ಸ್ವಾಗತ: ಮೈಸೂರಿನ ಜಿಎಸ್‌ಎಸ್‌ಎಸ್ ಎಂಜಿನಿಯರಿಂಗ್ ಕಾಲೇಜನ್ನು ಅಟಲ್ ಬಿಹಾರಿ ವಾಜಪೇಯಿ ಕೈಯಲ್ಲೇ ಉದ್ಘಾಟಿಸಬೇಕು ಎಂಬುದು ಕಾಲೇಜು ಸಂಸ್ಥಾಪಕ ಪ್ರೊ.ಬಿ.ಎಸ್.ಪಂಡಿತ್‌ರ ಬಯಕೆಯಾಗಿತ್ತು. ಅದಕ್ಕಾಗಿ ದೆಹಲಿಗೆ ಬಂದು ಸಂಸದನಾಗಿದ್ದ ನನ್ನ ನಿವಾಸದಲ್ಲಿ 23 ದಿನ ಉಳಿದಿದ್ದರು.
ವಿರೋಧಪಕ್ಷದ ನಾಯಕರಾಗಿದ್ದ ವಾಜಪೇಯಿ ಭೇಟಿ ಸಾಧ್ಯವಾಗಿರಲಿಲ್ಲ. 23ನೇ ದಿನ ಬೆಳಗ್ಗೆಯೇ ಅಟಲ್‌ಜೀಯವರ ಮನೆಗೆ ಹೋದೆವು, ಬಾಗಿಲು ತೆರೆದ ಕೂಡಲೇ ಎದುರಿಗೆ ಅಟಲ್‌ಜೀ ನಿಂತಿದ್ದರು. ನೀವು ಇಲ್ಲಿಯವರೆಗೆ ಬರುವುದೇ ಎಂದಾಗ, ಮೈಸೂರಿನಿಂದ ಅತಿಥಿಗಳು ಬಂದಿರುವಾಗ ನಾನು ಒಳಗೆ ಕೂರುವುದೇ ಎಂದು ಆತ್ಮೀಯತೆಯಿಂದ ಒಳಗೆ ಕರೆದೊಯ್ದರು.
ಗೆದ್ದಾಗ ಬೆನ್ನುತಟ್ಟಿದ್ದರು: ಯಾರನ್ನೇ ಆಗಲಿ ಮೈದಡವಿ ಮಾತನಾಡಿಸುವ ಅಪರೂಪದ ವ್ಯಕ್ತಿತ್ವ ಅವರದು, ಲೋಕಸಭೆಯಲ್ಲಿ ಎದುರಾದಾಗಲೆಲ್ಲಾ ವಿಜಯ್ ಕೈ ಸೇ ಹೈ ಎಂದು ವಿಚಾರಿಸುತ್ತಿದ್ದರು. ಮೈಸೂರು ಭಾಗಕ್ಕೆ ಬಂದಾಗ ಅನೇಕ ಬಾರಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶವು ನನಗೆ ಒದಗಿಬಂದಿತ್ತು ಎಂದು ಸ್ಮರಿಸಿಕೊಂಡ ವಿಜಯಶಂಕರ್ ಕಣ್ಣಾಳಿ ಒದ್ದೆಯಾದವು.