ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮನೆ, ಜಮೀನು ಕಳೆದುಕೊಂಡಿದ್ದು, ಸಂಪೂರ್ಣ ನಷ್ಟದ ಅಂದಾಜು ಮಾಡಲಾಗುತ್ತಿಲ್ಲ.
ಮಡಿಕೇರಿ ವ್ಯಾಪ್ತಿಯಲ್ಲಿ 6,755 ಹೆಕ್ಟೇರ್ ತೋಟಗಳು, 2,830 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ ಎಂದು ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಕಾಫಿ ಬೆಳೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದ್ದು, ಬಾಳೆ, ಶುಂಠಿ, ಅಡಿಕೆ, ಕರಿಮೆಣಸು, ತೆಂಗು ಮೊದಲಾದ ತೋಟಗಾರಿಕಾ ಬೆಳೆಗಳೂ ಹಾನಿಗೊಳಗಾಗಿವೆ.
ನಾಲ್ಕೈದು ಹಳ್ಳಿಗಳಿಗೆ ಸಂಪರ್ಕ ವ್ಯವಸ್ಥೆ ಬಂದ್ ಆಗಿರುವುದರಿಂದ ನಷ್ಟದ ಮಾಹಿತಿ ಸಂಗ್ರಹ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನ ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿ ಯಾವುದೇ ಹಾನಿಯಾಗಿರುವ ವರದಿಯಾಗಿಲ್ಲ. ಅರಣ್ಯ ಪ್ರದೇಶಕ್ಕಿಂತ ಜನವಸತಿ ಪ್ರದೇಶದಲ್ಲೇ ಗುಡ್ಡ ಕುಸಿತ ಹೆಚ್ಚಾಗಿರುವುದರಿಂದ ಗಡಿ ಭಾಗದ ಜನರಿಗೆ ಸಮಸ್ಯೆ ಆಗಿರುವ ಸಾಧ್ಯತೆ ತುಂಬ ಕಡಿಮೆ ಎಂದು ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಐದು ಕುಟುಂಬ ಅಸ್ಸಾಂಗೆ: ನಿರಾಶ್ರಿತರ ಕೇಂದ್ರದಲ್ಲಿರುವ ಹೊರ ರಾಜ್ಯದ ಕುಟುಂಬಗಳನ್ನು ಆಯಾ ರಾಜ್ಯಕ್ಕೆ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಈವರೆಗೆ ಐದು ಕುಟುಂಬವನ್ನು ಅಸ್ಸಾಂಗೆ ಕಳುಹಿಸಿಕೊಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದ ಕುಟುಂಬಗಳು ಇಲ್ಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನಿರಾಶ್ರಿತರ ಕೇಂದ್ರದ ಮೇಲುಸ್ತುವಾರಿ ವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಂದ ಅವರ ಊರಿಗೆ ಹೋಗಲು ಬೇಕಾದಷ್ಟು ಹಣದ ವ್ಯವಸ್ಥೆಯನ್ನು ನಾವೇ ಮಾಡಿ ಕಳುಹಿಸಿಕೊಟ್ಟಿದ್ದೇವೆ. ಇನ್ನು ಕೆಲವು ಕುಟುಂಬಗಳು ಹಾಸನ, ಸಕಲೇಶಪುರ ಹಾಗೂ ಚಿಕ್ಕಮಗಳೂರು ಮೊದಲಾದ ಭಾಗಕ್ಕೆ ವಲಸೆ ಹೋಗಿರುವ ಸಾಧ್ಯತೆಯೂ ಇದೆ. ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಕುಟುಂಬಗಳು ಎಷ್ಟಿವೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿಲ್ಲ ಎಂದು ವಿವರಿಸಿದರು.